ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಕರಾಚಿಯಲ್ಲಿ ಭೀಕರ ಉಗ್ರರ ದಾಳಿ ನಡೆದಿದೆ. ಗುಲಿಸ್ತಾನ್-ಇ-ಜೌಹರ್‌ನಲ್ಲಿರುವ ಅರೆಸೈನಿಕ ಪಡೆಯ ಪ್ರಾಂತೀಯ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ಉಗ್ರರು ಪುಲ್ವಾಮಾ ಮಾದರಿಯ ಆತ್ಮಹತ್ಯಾ ದಾಳಿ ನಡೆಸಿದ್ದಾರೆ. ಸ್ಫೋಟಕ ತುಂಬಿದ್ದ ವಾಹನವನ್ನು ಸೇನಾ ನೆಲೆಯ ಮುಖ್ಯ ದ್ವಾರಕ್ಕೆ ಡಿಕ್ಕಿ ಹೊಡೆಸಲಾಗಿದ್ದು, ಈ ಭೀಕರ ಸ್ಫೋಟದಲ್ಲಿ ನಾಲ್ವರು ಪಾಕಿಸ್ತಾನಿ ಸೈನಿಕರು ಮೃತಪಟ್ಟಿದ್ದಾರೆ.
6 ಉಗ್ರರ ಸದೆಬಡಿದ ಭದ್ರತಾ ಪಡೆಗಳು
ಮೊದಲ ಸ್ಫೋಟದ ಬೆನ್ನಲ್ಲೇ ಮತ್ತೊಂದು ದಾಳಿಗೆ ಸಜ್ಜಾಗಿದ್ದ ಸಶಸ್ತ್ರ ಉಗ್ರರ ಮೇಲೆ ಪಾಕ್ ಪಡೆಗಳು ತಕ್ಷಣವೇ ಕಾರ್ಯಾಚರಣೆ ಆರಂಭಿಸಿದವು. ಮೊಸಾಮಿಯಾತ್ ಚೌರಂಗಿ ಪ್ರದೇಶದಲ್ಲಿ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ 6 ಮಂದಿ ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಕ್ಷಿಪ್ರ ಪ್ರತಿಕ್ರಿಯೆ ಪಡೆ (QRF) ಮತ್ತು ಪೊಲೀಸ್ ಕಮಾಂಡೋಗಳು ಇಡೀ ಪ್ರದೇಶವನ್ನು ಸುತ್ತುವರೆದಿದ್ದು, ಒಬ್ಬ ಉಗ್ರನನ್ನು ಜೀವಂತವಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಸಿಂಧ್ ರೇಂಜರ್ಸ್ ನೆಲೆ ಮೇಲಿನ ದೊಡ್ಡ ವಿಧ್ವಂಸಕ ಕೃತ್ಯವನ್ನು ವಿಫಲಗೊಳಿಸಲಾಗಿದೆ.
ದಾಳಿಯ ಹೊಣೆ ಹೊತ್ತ ಜಮಾತ್-ಉಲ್-ಅಹ್ರಾರ್
ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ (TTP) ಸಂಘಟನೆಯಿಂದ ಬೇರ್ಪಟ್ಟ ಉಗ್ರಗಾಮಿ ಗುಂಪು ‘ಜಮಾತ್-ಉಲ್-ಅಹ್ರಾರ್’ (JuA) ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ತನ್ನ ‘ಖುಲಾಫಾ-ಎ-ರಷಿದ್ದೀನ್ ಇಶ್ತಿಶ್ಹಾದಿ ಬ್ರಿಗೇಡ್’ ಎಂಬ ಆತ್ಮಹತ್ಯಾ ದಳದ ಮೂಲಕ ಈ ವಿಧ್ವಂಸಕ ಕೃತ್ಯ ನಡೆಸಿರುವುದಾಗಿ ಉಗ್ರ ಸಂಘಟನೆ ಘೋಷಿಸಿದೆ. ಸದ್ಯ ಕರಾಚಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಸರ್ಚಿಂಗ್ ಆಪರೇಷನ್ ತೀವ್ರಗೊಂಡಿದೆ.



