ಕಾಶ್ಮೀರ ಕಣಿವೆಯಲ್ಲಿ ಉಗ್ರರ ಅಟ್ಟಹಾಸ; ಗುಂಡಿಕ್ಕಿ ನಾಗರಿಕನ ಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಉಗ್ರರು ಒರ್ವ ನಾಗರಿಕನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ.
ಕೇಂದ್ರ ಸರ್ಕಾರದ ಪ್ರೋತ್ಸಾಹ ಮತ್ತು ಸುಧಾರಣಾ ನೀತಿಗಳಿಂದಾಗಿ ಮತ್ತೆ ಕಾಶ್ಮೀರದತ್ತ ಪಂಡಿತರು ಹಾಗೂ ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದರಿಂದ ಹತಾಶರಾಗಿರುವ ಉಗ್ರರು ವಲಸಿಗರನ್ನು ಗುರಿಯಾಗಿಯಾಗಿಸಿಕೊಂಡು ದಾಳಿ ನಡೆಸುವ ಮೂಲಕ ಅವರು ಕಾಶ್ಮೀರಕ್ಕೆ ಮರಳದಂತೆ ಭೀತಿಗೊಳಿಸಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ದಕ್ಷಿಣ ಕಾಶ್ಮೀರ ಜಿಲ್ಲೆಯ ಕಕ್ರಾನ್ ಪ್ರದೇಶದಲ್ಲಿ ನಿನ್ನೆ ತಡರಾತ್ರಿ ರಜಪೂತ ಸಮುದಾಯಕ್ಕೆ ಸೇರಿದ ಸತೀಶ್ ಕುಮಾರ್ ಸಿಂಗ್ ಎಂಬ 55 ವರ್ಷದ ಚಾಲಕನನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅವರ ಮನೆಯ ಆವರಣಕ್ಕೆ ನುಗ್ಗಿದ ಉಗ್ರರು ತಲೆ ಮತ್ತು ಎದೆಗೆ ಗುಂಡುಗಳನ್ನು ಹಾರಿಸಿ ಹತ್ಯೆ ಮಾಡಿದ್ದಾರೆ.
ಈ ದಾಳಿಯಲ್ಲಿ ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಹೊಸದಾಗಿ ಸೇರ್ಪಡೆಯಾದವರ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಬುಧವಾರ ಸತೀಶ್ ಅವರ ಮನೆಯ ಬಳಿ ನಿಯೋಜನೆಗೊಂಡಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಗುಂಡಿನ ಸದ್ದು ಕೇಳಿ ಅತ್ತ ಹೋಗುವಷ್ಟರಲ್ಲಿ ಸತೀಶ್ ಕುಮಾರ್ ಸಿಂಗ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಕ್ಷಣವೇ ಅವರನ್ನು ಶ್ರೀನಗರ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು.
ಕುಲ್ಗಾಮ್ ಮತ್ತು ಶೋಪಿಯಾನ್ ಜಿಲ್ಲೆಗಳಲ್ಲಿ ವಲಸೆ ಹೋಗದ ರಜಪೂತ ಕುಟುಂಬಗಳನ್ನು ಸಹ ಉಗ್ರರು ಗುರಿಯಾಗಿಸಿಕೊಂಡಿದ್ದಾರೆ. ಇಲ್ಲಿನ ರಜಪೂತ ಕುಟುಂಬದವರು ಮುಖ್ಯವಾಗಿ ಸೇಬು ವ್ಯಾಪಾರದಲ್ಲಿದ್ದಾರೆ. ಅವರ ಉದ್ಯಮದ ಮೇಲೆ ಉಗ್ರರ ಕಣ್ಣಿದೆ. ಕಾಶ್ಮೀರಿ ಪಂಡಿತರು ಗ್ರಾಮಗಳನ್ನು ತೊರೆಯುವಂತೆ ‘ಲಷ್ಕರ್-ಎ-ಇಸ್ಲಾಮಿ’ ಹೆಸರಿನ ಸಂಘಟನೆಯು ಬೆದರಿಕೆ ಪತ್ರ ವನ್ನು ಹಂಚುವ ಮೂಲಕ ಬೆದರಿಸಲು ಯತ್ನಿಸುತ್ತಿದೆ. ಕಳೆದ 10 ದಿನಗಳಿಂದ ದಕ್ಷಿಣ ಕಾಶ್ಮೀರದಲ್ಲಿ ಭಯೋತ್ಪಾದಕರು ನಾಗರಿಕರ ಮೇಲೆ ದಾಳಿಗಳನ್ನು ಹೆಚ್ಚಿಸಿದ್ದಾರೆ.
ದಾಳಿ ನಡೆದ ತಕ್ಷಣವೇ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಪೊಲೀಸರು ಆ ಪ್ರದೇಶವನ್ನು ಸುತ್ತುವರಿದಿದ್ದಾರೆ. ಈ ಭೀಕರ ಕೃತ್ಯದಲ್ಲಿ ಭಾಗಿಯಾಗಿರುವ ಭಯೋತ್ಪಾದಕರನ್ನು ಶೀಘ್ರದಲ್ಲೇ ತಟಸ್ಥಗೊಳಿಸುತ್ತೇವೆ. ಭಯೋತ್ಪಾದಕರನ್ನು ಪತ್ತೆಕಾರ್ಯ ಪ್ರಗತಿಯಲ್ಲಿದೆ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!