ಹೊಸದಿಗಂತ ವರದಿ, ಸುಂಟಿಕೊಪ್ಪ:
ಸ್ಕೂಟರ್’ನ ಹ್ಯಾಂಡಲ್ ಬ್ರೇಕಿನ ನಡುವೆ ಹಾವೊಂದು ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿ ಕೆಲ ಕಾಲ ಆತಂಕ ಸೃಷ್ಟಿಸಿ ದಂಗುಬಡಿಸಿರುವ ಕೂತೂಹಲಕಾರಿ ಘಟನೆ ಪಟ್ಟಣದಲ್ಲಿ ನಡೆದಿದೆ.
ಈ ಆಘಾತಕಾರಿ ಪ್ರಸಂಗದಲ್ಲಿ ಸ್ಕೂಟರ್ ಸವಾರ ಹಾಗೂ ಅವರ ಪುಟ್ಟ ಮಕ್ಕಳಿಬ್ಬರು ಅಪಾಯದಿಂದ ಪಾರಾಗಿದ್ದಾರೆ.
ಬುಧವಾರ ಮಧ್ಯಾಹ್ನ ಸುಂಟಿಕೊಪ್ಪ ಉಲುಗುಲಿ ರಸ್ತೆಯಲ್ಲಿ ಪ್ರಾವಿಷನ್ ಅಂಗಡಿ ನಡೆಸುತ್ತಿರುವ ಅನಿಲ್ ಎಂಬವರ ಸ್ಕೂಟಿಯನ್ನು ಪರಿಚಿತರೊಬ್ಬರು ಕಾಫಿ ತೋಟಕ್ಕೆಂದು ತೆಗೆದುಕೊಂಡು ಹೋಗಿದ್ದು, ಸಂಜೆ ವಾಪಸ್ಸು ತಂದು ನಿಲ್ಲಿಸಿದ್ದಾರೆ.
ರಾತ್ರಿ ವ್ಯಾಪಾರ ಮುಗಿಸಿ ಅನಿಲ್ ಅವರು ಸ್ಕೂಟಿಯಲ್ಲಿ ಮನೆಗೆ ಹೋಗಿದ್ದು, ಸ್ಕೂಟಿಯನ್ನು ನಿಲ್ಲಿಸಿ ರೌಂಡ್ಸ್ ಹೋಗಲೆಂದು ತನ್ನ ಮಕ್ಕಳಿಬ್ಬರನ್ನು ಮುಂಭಾಗದಲ್ಲಿ ಹತ್ತಿಸಿಕೊಂಡಿದ್ದಾರೆ.
ಇನ್ನೇನು ಸ್ಕೂಟಿ ಮುಂದಕ್ಕೆ ಚಲಿಸಬೇಕೆನ್ನುವಷ್ಟರಲ್ಲಿ ಅನಿಲ್ ಅವರ ಪತ್ನಿ “ಹಾವು!” ಎಂದು ಕಿರುಚಿದ್ದಾರೆ. ಹ್ಯಾಂಡಲ್ ನಲ್ಲಿ ಹಾವನ್ನು ಕಂಡು ಹೌಹಾರಿದ್ದಾರೆ.
ಹ್ಯಾಂಡಲ್ ಬ್ರೇಕ್ ನ ಸಂದಿನೊಳಗೆ ನುಸುಳಿಕೊಂಡಿದ್ದ ‘ಕ್ಯಾಟ್ ಸ್ನೇಕ್’ನ ಮರಿ ಅದಾಗಿತ್ತು.
ತನಗೆ ಸ್ಕೂಟರ್ ನಲ್ಲಿ ಟೆಸ್ಟ್ ಡ್ರೈವ್ ಕೊಡಿಸಿದ್ದಕ್ಕಾಗಿ ಥ್ಯಾಂಕ್ಸ್ ಹೇಳುವ ರೀತಿಯಲ್ಲಿ ತಲೆ ಹೊರಗೆ ಹಾಕಿ ಅದು ಇಣುಕಿ ನೋಡುತ್ತಿತ್ತು! ತನ್ನ ಅರಿವಿಗೆ ಬಾರದೇ ಹ್ಯಾಂಡಲ್ ನ ಸಂದಿಯಲ್ಲಿ ಸೇರಿಕೊಂಡು ಸವಾರಿ ಮಾಡಿದ ಹಾವಿಗೆ ಉಪದ್ರ ಕೊಡಲು ಇಚ್ಚಿಸದ ಸುನಿಲ್ ಅವರು ಸ್ಕೂಟಿಯನ್ನು ಕೆಳಮುಖವಾಗಿ ಬಗ್ಗಿಸಿದಾಗ ಮೂರು ಅಡಿ ಉದ್ದವಿದ್ದ ಅದು ಕೆಳಗೆ ಹರಿದು ಬಂದು ಅಲ್ಲಿಂದ ತೆವಳಿಕೊಂಡು ಸಾಗಿದೆ. ಇದರೊಂದಿಗೆ ಸ್ಕೂಟರ್’ನಲ್ಲಿ ಹಾವಿನ ಟೆಸ್ಟ್ ಡ್ರೈವ್ ಸುಖಾಂತ್ಯ ಕಂಡರೆ, ಸ್ಕೂಟರ್ ಮಾಲಕ ಹಾಗೂ ಕುಟುಂಬದವರ ಜೀವ ಕೆಲಕಾಲ ಬಾಯಿಗೆ ಬಂದಿದ್ದಂತೂ ನಿಜ..