ಸೋನಿಯಾ ಅಸ್ಪತ್ರೆ ದಾಖಲಾದಾಗ ಪತ್ರ ಬರೆದಿದ್ದು ಬಿಟ್ಟರೆ, ಸಾಧನೆ ಶೂನ್ಯ: ಶಶಿ ತರೂರ್ ವಿರುದ್ಧ ಕಾಂಗ್ರೆಸ್ ನಾಯಕರ ವಾಗ್ದಾಳಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕಾಂಗ್ರೆಸ್ ಪಕ್ಷದಲ್ಲಿ ಈಗ ಅಧ್ಯಕ್ಷ ಚುನಾವಣೆಯತ್ತ ನಾಯಕರು ಚಿತ್ತ ನೆಟ್ಟಿದ್ದಾರೆ. ಅಧ್ಯಕ್ಷ ಗಾದಿಗಾಗಿ ಪೈಪೋಟಿ ನಡೆಯುತ್ತಿದೆ. ಇದರ ನಡುವೆ ಇತ್ತ ಚುನಾವಣೆ ರೇಸ್‌ನಲ್ಲಿರುವ ಶಶಿ ತರೂರ್ ವಿರುದ್ಧ ಕಾಂಗ್ರೆಸ್ ಪಕ್ಷದ ವಕ್ತಾರ ಗೌರವ್ ವಲ್ಲಬ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್‌ಗೆ ಶಶಿ ತರೂರ್ ಸಾಧನೆ ಶೂನ್ಯ. ಕಳೆದ 8 ವರ್ಷಗಳಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆಸ್ಪತ್ರೆ ದಾಖಲಾದಾಗ ಯೋಗ ಕ್ಷೇಮ ವಿಚಾರಿಸಿ ಪತ್ರ ಬರೆದಿದ್ದೇ ಶಶಿ ತರೂರ್ ಸಾಧನೆಯಾಗಿದೆ. ಇದನ್ನು ಹೊರತುಪಡಿಸಿದರೆ ಶಶಿ ತರೂರ್ ಪಕ್ಷಕ್ಕಾಗಿ ಏನೂ ಮಾಡಿಲ್ಲ ಎಂದು ಗೌರವ್ ವಲ್ಲಬ್ ಆರೋಪಿಸಿದ್ದಾರೆ.

ಪಕ್ಷದಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಲು ಸೂಕ್ತ. ಗಾಂಧಿ ಹೊರತು ಪಡಿಸಿದರೆ ಅನುಭವ, ವ್ಯಕ್ತಿತ್ವ, ನಾಯಕತ್ವದ ಆಧಾರದಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೂಕ್ತ ಎಂದು ಗೌರವ್ ವಲ್ಲಬ್ ಹೇಳಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸಲು ಇಚ್ಚಿಸಿಲ್ಲ. ಹೀಗಾಗಿ ಸದ್ಯ ಕಾಂಗ್ರೆಸ್ ಕಾರ್ಯಕರ್ತರು, ನಾಯಕರ ಮುಂದಿರವ ಏಕೈಕ ಆಯ್ಕೆ ಅಶೋಕ್ ಗೆಹ್ಲೋಟ್ ಆಗಿದ್ದಾರೆ. 45 ವರ್ಷಗಳಿಂದ ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಜೀವನದಲ್ಲಿದ್ದಾರೆ. ಇಷ್ಟೇ ಅಲ್ಲ 2018ರ ಚುನಾವಣೆಯಲ್ಲಿ ರಾಜಸ್ಥಾನದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ಸಾಧನೆ ಅಶೋಕ್ ಗೆಹ್ಲೋಟ್‌ಗಿದೆ. ಹೀಗಾಗಿ ತರೂರ್ ಅಧ್ಯಕ್ಷರಾಗಲು ಅರ್ಹತೆ ಪಡೆದಿಲ್ಲ ಎಂದು ಗೌರವ್ ವಲ್ಲಬ್ ಹೇಳಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷನ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ದಿನಾಂಕಕಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಮತ್ತೆ ರಾಹುಲ್‌ ಗಾಂಧಿ ಅವರನ್ನೇ ಅಧ್ಯಕ್ಷ ಹುದ್ದೆಯಲ್ಲಿ ಕೂರಿಸಲು ಹಲವು ರಾಜ್ಯ ಘಟಕಗಳು ಬಹಿರಂಗವಾಗಿಯೇ ಒತ್ತಾಯ ಆರಂಭಿಸಿವೆ. ಭಾರತ್‌ ಜೋಡೋ ಯಾತ್ರೆ ನಡೆಯುತ್ತಿರುವ ಹೊತ್ತಿನಲ್ಲೇ ಪಿ.ಚಿದಂಬರಂ, ಜೈರಾಮ್‌ ರಮೇಶ್‌ ಸೇರಿದಂತೆ ಹಲವು ನಾಯಕರು, ಯಾರು ನೂತನ ಅಧ್ಯಕ್ಷರಾದರೂ, ಪಕ್ಷದಲ್ಲಿ ರಾಹುಲ್‌ ಸ್ಥಾನಕ್ಕೆ ಯಾವುದೇ ಚ್ಯುತಿ ಇಲ್ಲ ಎಂಬ ಹೇಳಿಕೆಗಳ ನಡುವೆಯೇ ಇದೀಗ ರಾಜ್ಯ ಘಟಕಗಳಿಂದಲೂ ಇಂಥದ್ದೇ ಒತ್ತಾಯ, ಆಗ್ರಹ ಕೇಳಿಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!