Test Rankings: ಬೌಲಿಂಗ್​ ನಲ್ಲಿ ಆರ್​. ಅಶ್ವಿನ್ ನಂ.1 , ಬ್ಯಾಟಿಂಗ್ ನಲ್ಲಿ ರೋಹಿತ್​, ಗಿಲ್​, ಜೈಸ್ವಾಲ್​ ಜಿಗಿತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೆಸ್ಟ್(ICC Test Rankings)​ ಕ್ರಿಕೆಟ್​ನ ಬ್ಯಾಟಿಂಗ್​ ಮತ್ತು ಬೌಲಿಂಗ್​ ಶ್ರೇಯಾಂಕವನ್ನು ಐಸಿಸಿ ಪ್ರಕಟಿಸಿದ್ದು, ಆರ್​. ಅಶ್ವಿನ್ ಬೌಲಿಂಗ್​ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದರೆ, ನಾಯಕ ರೋಹಿತ್​ ಶರ್ಮ(Rohit Sharma) ಬ್ಯಾಟಿಂಗ್​ ಶ್ರೇಯಾಂಕದಲ್ಲಿ 5 ಸ್ಥಾನಗಳ ಜಿಗಿತದೊಂದಿಗೆ 6ನೇ ಸ್ಥಾನಕ್ಕೇರಿದ್ದಾರೆ.ಎಡಗೈ ಬ್ಯಾಟರ್​ ಜೈಸ್ವಾಲ್​ ಕೂಡ 2 ಸ್ಥಾನ ಮೇಲೇರಿ 8ನೇ ಸ್ಥಾನ​ ಪಡೆದಿದ್ದಾರೆ.

ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಜೈಸ್ವಾಲ್​ 712 ರನ್ ಗಳಿಸಿದ್ದರು. ಈ ಪ್ರದರ್ಶನದ ಫಲವಾಗಿ ಅವರು ಎರಡು ಸ್ಥಾನಗಳ ಜಿಗಿತ ಕಂಡು 8ನೇ ಸ್ಥಾನಕ್ಕೆ ತಲುಪಿದ್ದಾರೆ.

ಶುಭಮನ್ ಗಿಲ್ ಅವರು 11 ಸ್ಥಾನಗಳ ಪ್ರಗತಿ ಸಾಧಿಸಿ ಟಾಪ್ 20 ರಲ್ಲಿ ಸ್ಥಾನ ಪಡೆಯುವ ಮೂಲಕ ಜೀವನಶ್ರೇಷ್ಠ ಸ್ಥಾನ ಗಳಿಸಿದ್ದಾರೆ. ಇಂಗ್ಲೆಂಡ್ ಸರಣಿಯನ್ನು ಮಿಸ್ ಮಾಡಿಕೊಂಡಿದ್ದ ವಿರಾಟ್ ಕೊಹ್ಲಿ ಟಾಪ್ 10ರಲ್ಲಿ ಮುಂದುವರಿದಿದ್ದರೂ, ಒಂದು ಸ್ಥಾನ ಕುಸಿತ ಕಂಡು 9ನೇ ಸ್ಥಾನದಲ್ಲಿದ್ದಾರೆ.

859 ರೇಟಿಂಗ್ ಪಾಯಿಂಟ್‌ಗಳೊಂದಿಗೆ ನ್ಯೂಜಿಲ್ಯಾಂಡ್​ನ ಕೇನ್ ವಿಲಿಯಮ್ಸನ್ ಅಗ್ರಸ್ಥಾನದಲ್ಲಿಯೇ ಮುಂದುವರಿದಿದ್ದಾರೆ. ಜೋ ರೂಟ್ ಎರಡನೇ ಸ್ಥಾನದಲ್ಲಿದ್ದಾರೆ. ಬಾಬರ್ ಅಜಮ್ 768 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಎರಡು ಸ್ಥಾನಗಳ ಏರಿಕೆ ಕಂಡು ಮೂರನೇ ಸ್ಥಾನ ಪಡೆದಿದ್ದಾರೆ. ಈಆಸ್ಟ್ರೇಲಿಯಾದ ಸ್ಟೀವನ್​ ಸ್ಮಿತ್​ 2 ಸ್ಥಾನಗಳ ಕುಸಿತದೊಂದಿಗೆ 5ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಬೌಲಿಂಗ್​ ಶ್ರೇಯಾಂಕದಲ್ಲಿ ಆರ್​. ಅಶ್ವಿನ್​ ಅವರು 870 ರೇಟಿಂಗ್​ ಅಂಕದೊಂದಿಗೆ ಅಗ್ರಸ್ಥಾನಕ್ಕೇರಿದ್ದಾರೆ. ಅಶ್ವಿನ್​ ಅವರು ಧರ್ಮಶಾಲಾದಲ್ಲಿ ನಡೆದ ಟೆಸ್ಟ್​ನಲ್ಲಿ ಒಟ್ಟು 9 ವಿಕೆಟ್​ ಕಿತ್ತು ಮಿಂಚಿದ್ದರು. ಇದು ಅವರ 100ನೇ ಟೆಸ್ಟ್ ಪಂದ್ಯವೂ ಕೂಡ ಆಗಿತ್ತು. ಈ ಹಿಂದೆ ಅಗ್ರಸ್ಥಾನದಲ್ಲಿದ್ದ ಜಸ್​ಪ್ರೀತ್​ ಬುಮ್ರಾ ಅವರು ನೂತನ ಶ್ರೇಯಾಂಕದಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ನ್ಯೂಜಿಲ್ಯಾಂಡ್​ ವಿರುದ್ಧದ ಸರಣಿಯಲ್ಲಿ ಅಮೋಘ ಬೌಲಿಂಗ್​ ಪ್ರದರ್ಶನ ತೋರಿದ ಆಸ್ಟ್ರೇಲಿಯಾದ ಜೋಶ್​ ಹ್ಯಾಜಲ್​ವುಡ್​ 2ನೇ ಸ್ಥಾನಕ್ಕೇರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!