ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಪುರುಷರ ಕ್ರಿಕೆಟ್ ತಂಡವು ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಮುಂದಿನ ವರ್ಷ ಇಂಗ್ಲೆಂಡ್‌ಗೆ ಪ್ರಯಾಣಿಸಲಿದೆ. ಸರಣಿಯ ಮೊದಲ ಪಂದ್ಯ ಜೂನ್ 20-2025 ರಂದು ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ಪ್ರಾರಂಭವಾಗಲಿದೆ.
5 ಪಂದ್ಯಗಳ ಟೆಸ್ಟ್ ಸರಣಿ ಲೀಡ್ಸ್, ಬರ್ಮಿಂಗ್ಹ್ಯಾಮ್, ಲಾರ್ಡ್ಸ್, ಮ್ಯಾಂಚೆಸ್ಟರ್ ಮತ್ತು ಓವಲ್ ಮೈದಾನದಲ್ಲಿ ನಡೆಯಲಿದೆ. ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಗುರುವಾರ ತನ್ನ ಅಧಿಕೃತ ಟ್ವಿಟರ್ ಎಕ್ಸ್ನಲ್ಲಿ ಪ್ರಕಟಿಸಿದೆ. ಬರೋಬ್ಬರಿ ಒಂದು ತಿಂಗಳ ಕಾಲ ಈ ಸರಣಿ ನಡೆಯಲಿದೆ.
2007 ರಲ್ಲಿ ಪಟೌಡಿ ಟ್ರೋಫಿಯಲ್ಲಿ ಮೈಕೆಲ್ ವಾನ್ ನೇತೃತ್ವದ ತಂಡವನ್ನು ಭಾರತ ಸೋಲಿಸಿದ ಬಳಿಕ ಇಂಗ್ಲೆಂಡ್‌ನಲ್ಲಿ ಇದುವರೆಗೂ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಆ ಪ್ರವಾಸದ ಸಮಯದಲ್ಲಿ, ರಾಹುಲ್ ದ್ರಾವಿಡ್ ನೇತೃತ್ವದ ಭಾರತವು ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿ ಸರಣಿ ಗೆದ್ದುಕೊಂಡಿತ್ತು. ಒಟ್ಟು ಮೂರು ಪಂದ್ಯಗಳ ಸರಣಿ ಇದಾಗಿತ್ತು. 2 ಪಂದ್ಯಗಳು ಡ್ರಾ ಆಗಿದ್ದವು.
ಭಾರತವು ಇಲ್ಲಿಯವರೆಗೆ ಆಡಿರುವ 2 ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ ಪ್ರವೇಶಿಸಿತ್ತು. ಲಂಡನ್ನಲ್ಲಿ ನಡೆದಿದ್ದ ಈ 2 ಫೈನಲ್ನಲ್ಲಿಯೂ ಭಾರತ ಕ್ರಮವಾಗಿ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು. ಸದ್ಯ ಮೂರನೇ ಆವೃತ್ತಿಯಲ್ಲಿ ಭಾರತ ಫೈನಲ್ ಪ್ರವೇಶಿಸಬೇಕಿದ್ದರೆ, ಭಾರತ 10 ಟೆಸ್ಟ್ ಪಂದ್ಯಗಳ ಪೈಕಿ ಕನಿಷ್ಠ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಈ ಮೂಲಕ ಸತತ ಮೂರನೇ ಬಾರಿಗೆ ಫೈನಲ್‌ಗೆ ಅರ್ಹತೆ ಪಡೆದ ಸಾಧನೆ ಮಾಡಲಿದೆ.
ವೇಳಾಪಟ್ಟಿ ಹೀಗಿದೆ
ಮೊದಲ ಟೆಸ್ಟ್ ಜೂನ್ 20-24 ಹೆಡಿಂಗ್ಲಿ, ಲೀಡ್ಸ್
ದ್ವಿತೀಯ ಟೆಸ್ಟ್ ಜುಲೈ 2-6 ಎಡ್ಜ್‌ಬಾಸ್ಟನ್, ಬರ್ಮಿಂಗ್ಹ್ಯಾಮ್
ಮೂರನೇ ಟೆಸ್ಟ್ ಜುಲೈ 10-14 ಲಾರ್ಡ್ಸ್, ಲಂಡನ್
ನಾಲ್ಕನೇ ಟೆಸ್ಟ್ ಜುಲೈ 23-27 ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್
ಐದನೇ ಟೆಸ್ಟ್ ಜುಲೈ 31-ಆಗಸ್ಟ್ 4 ಓವಲ್, ಲಂಡನ್