ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಬದ್ಲಾಪುರದ ಶಾಲೆಯಲ್ಲಿ ಕಳೆದ ವಾರ ಇಬ್ಬರು ನರ್ಸರಿ ಮಕ್ಕಳ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ವಿಚಾರಣೆಯನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡ ಬಾಂಬೆ ಹೈಕೋರ್ಟ್, ಶಾಲೆಗಳೇ ಸುರಕ್ಷಿತ ಸ್ಥಳವಲ್ಲದಿದ್ದರೆ ಶಿಕ್ಷಣದ ಹಕ್ಕು ಬಗ್ಗೆ ಮಾತನಾಡುವುದರಲ್ಲಿ ಅರ್ಥವೇನಿದೆ? ಎಂದು ಪ್ರಶ್ನಿಸಿದೆ.
ನ್ಯಾಯಮೂರ್ತಿಗಳಾದ ರೇವತಿ ಮೊಹಿತೆ ಡೆರೆ ಮತ್ತು ಪೃಥ್ವಿರಾಜ್ ಚೌಹಾಣ್ ಇದ್ದ ನ್ಯಾಯಪೀಠ ವಿಚಾರಣೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ವಿಳಂಬಗೊಂಡಿರುವ ಬಗ್ಗೆ ಪೊಲೀಸರು ಮತ್ತು ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದ್ದಾರೆ.
ಇದೇ ವೇಳೆ ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಿಸುವಲ್ಲಿ ನಡೆದ ವಿಳಂಬ ಬಗ್ಗೆ ಕೋರ್ಟ್ ಪ್ರಸ್ತಾಪಿಸಿದೆ.
ಇದು ಎಂತಹ ದುಸ್ಥಿತಿ? ಇದು ನಿಜಕ್ಕೂ ಅತ್ಯಂತ ಆಘಾತಕಾರಿಯಾಗಿದೆ ಎಂದು ಪೀಠವು ಹೇಳಿದೆ. ಇದೇ ಪೊಲೀಸರು ಮತ್ತು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕೋರ್ಟ್, ಸಂತ್ರಸ್ತ ಮಕ್ಕಳು ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆಯೇ? ಅಲ್ಲದೇ ಮಕ್ಕಳನ್ನು ನಿರ್ಲಕ್ಷಿಸಿರುವ ಶಾಲಾಡಳಿತ ವಿರುದ್ಧ ತನಿಖೆ ಕೈಗೆತ್ತಿಕೊಂಡಿದ್ದೀರೆ ಎಂದು ಪ್ರಶ್ನಿಸಿದೆ.
ಎಸ್‌ಐಟಿ ರಚನೆಯಾಗಿದೆ. ಶಾಲಾಡಳಿತದ ವಿರುದ್ಧ ತನಿಖೆ ನಡೆಯಲಿದೆ ಎಂದು ರಾಜ್ಯದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಬೀರೇಂದ್ರ ಸರಾಫ್ ಪ್ರತಿಕ್ರಿಯಿಸಿದರು. ಆದರೆ ಇದನ್ನು ಒಪ್ಪದ ನ್ಯಾಯಾಲಯವು ಶಾಲೆಯ ವಿರುದ್ಧ ಪ್ರಕರಣವನ್ನು ಇಷ್ಟು ಹೊತ್ತಿಗೆ ದಾಖಲಿಸಬೇಕಾಗಿತ್ತು. ಎಫ್‌ಐಆರ್ ದಾಖಲಿಸಲಾಗಿದ್ದು, ನೀವು ಶಾಲೆಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕಿತ್ತು ಎಂದು ಹೇಳಿದೆ.
ಇದೊಂದು ಗಂಭೀರ ಅಪರಾಧ. ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಹೇಗೆ? ಶಾಲಾ ವಿದ್ಯಾರ್ಥಿನಿಯರ ಸುರಕ್ಷತೆಗೆ ನೀವು ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೀರಿ ಎಂದು ನಾವು ತಿಳಿಯಬೇಕಾಗಿದೆ. ಹೆಣ್ಣುಮಕ್ಕಳ ಸುರಕ್ಷತೆ ಮತ್ತು ಭದ್ರತೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.