April 24, 2026
Friday, April 24, 2026
spot_img

CINE | ದಳಪತಿ ಅಭಿಮಾನಿಗಳಿಗೆ ಗುಡ್ ನ್ಯೂಸ್: ಸದ್ಯದಲ್ಲೇ ತೆರೆಗೆ ಬರಲಿದೆ ‘ಜನ ನಾಯಗನ್’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನ ವಿಧಾನಸಭಾ ಚುನಾವಣೆ ಮುಕ್ತಾಯಗೊಂಡಿದ್ದು, ಈ ಬಾರಿ ದಾಖಲೆಯ ಪ್ರಮಾಣದಲ್ಲಿ ಮತದಾನವಾಗಿದೆ. ದಳಪತಿ ವಿಜಯ್ ಅವರ ರಾಜಕೀಯ ಪಕ್ಷ ಚುನಾವಣಾ ಕಣಕ್ಕೆ ಧುಮುಕಿದ್ದರಿಂದ, ಚುನಾವಣೋತ್ತರ ಬೆಳವಣಿಗೆಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಫಲಿತಾಂಶಕ್ಕೆ ಇನ್ನೂ ಹತ್ತು ದಿನಗಳು ಬಾಕಿ ಇರುವ ಈ ಸುಸಮಯದಲ್ಲಿ, ವಿಜಯ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಜನ ನಾಯಗನ್’ ಬಿಡುಗಡೆಗೆ ಎದುರಾಗಿದ್ದ ತಾಂತ್ರಿಕ ಮತ್ತು ರಾಜಕೀಯ ಅಡೆತಡೆಗಳು ನಿವಾರಣೆಯಾಗುವ ಲಕ್ಷಣಗಳು ಕಂಡುಬರುತ್ತಿವೆ.

ವಾಸ್ತವವಾಗಿ, ‘ಜನ ನಾಯಗನ್’ ಚಿತ್ರವು ಜನವರಿ ತಿಂಗಳಲ್ಲೇ ತೆರೆಗೆ ಬರಬೇಕಿತ್ತು. ಆದರೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಚಿತ್ರದಲ್ಲಿನ ಕೆಲವು ಸಂವೇದನಾಶೀಲ ವಿಷಯಗಳ ಕಾರಣ ನೀಡಿ ಪ್ರಮಾಣಪತ್ರ ನೀಡಲು ನಿರಾಕರಿಸಿತ್ತು. ವಿಷಯ ನ್ಯಾಯಾಲಯದ ಮೆಟ್ಟಿಲೇರಿದಾಗ ಚಿತ್ರತಂಡಕ್ಕೆ ಪೂರಕವಾದ ತೀರ್ಪು ಬಂದಿತಾದರೂ, ಸೆನ್ಸಾರ್ ಮಂಡಳಿಯು ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗಿತ್ತು. ರಾಜಕೀಯ ಉದ್ದೇಶಗಳಿಗಾಗಿ ಈ ಸಿನಿಮಾವನ್ನು ತಡೆಹಿಡಿಯಲಾಗಿದೆ ಎಂಬ ಮಾತುಗಳು ಚಿತ್ರರಂಗದಲ್ಲಿ ಕೇಳಿಬಂದಿದ್ದವು.

ವಿಜಯ್ ರಾಜಕೀಯಕ್ಕೆ ಪ್ರವೇಶ ನೀಡಿರುವ ಕಾರಣ, ಚುನಾವಣೆಗೂ ಮುನ್ನ ‘ಜನ ನಾಯಗನ್’ ಬಿಡುಗಡೆಯಾದರೆ ಅದು ಮತದಾರರ ಮೇಲೆ ಭಾರಿ ಪ್ರಭಾವ ಬೀರಬಹುದು ಎಂಬ ಆತಂಕ ವಿರೋಧ ಪಕ್ಷಗಳಲ್ಲಿತ್ತು ಎನ್ನಲಾಗಿದೆ. ವಿಜಯ್ ಅವರ ಜನಪ್ರಿಯತೆ ಪಕ್ಷಕ್ಕೆ ವರದಾನವಾಗಬಾರದು ಎಂಬ ದೃಷ್ಟಿಯಿಂದ ಸಿಬಿಎಫ್‌ಸಿಯನ್ನು ಬಳಸಿಕೊಂಡು ಚಿತ್ರಕ್ಕೆ ತಡೆ ನೀಡಲಾಗಿತ್ತು ಎಂಬ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದ್ದವು. ಈಗ ಮತದಾನ ಪ್ರಕ್ರಿಯೆ ಮುಗಿದಿರುವುದರಿಂದ, ಚಿತ್ರ ಬಿಡುಗಡೆಯಾದೂ ರಾಜಕೀಯವಾಗಿ ಯಾವುದೇ ಪಕ್ಷಕ್ಕೆ ಲಾಭವೋ ಅಥವಾ ನಷ್ಟವೋ ಆಗುವ ಸಾಧ್ಯತೆ ಕಡಿಮೆ ಇರುವುದರಿಂದ ಸೆನ್ಸಾರ್ ಕ್ಲಿಯರೆನ್ಸ್ ಸಿಗುವ ಭರವಸೆ ಮೂಡಿದೆ.

ಈಗಾಗಲೇ ಚಿತ್ರದ ಕೆಲವು ದೃಶ್ಯಗಳು ಅಂತರ್ಜಾಲದಲ್ಲಿ ಸೋರಿಕೆಯಾಗಿ ನಿರ್ಮಾಪಕರಿಗೆ ಆರ್ಥಿಕ ನಷ್ಟವುಂಟಾಗಿದೆ. ಒಂದು ವೇಳೆ ಚುನಾವಣಾ ಫಲಿತಾಂಶದ ನಂತರ ಸಿನಿಮಾ ಬಿಡುಗಡೆಯಾಗಿ, ರಾಜಕೀಯ ಫಲಿತಾಂಶ ವ್ಯತಿರಿಕ್ತವಾಗಿ ಬಂದರೆ ಅದು ಸಿನಿಮಾದ ಗಳಿಕೆಯ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ನಿರ್ಮಾಪಕರಿಗಿದೆ. ಆದ್ದರಿಂದ ಫಲಿತಾಂಶಕ್ಕೂ ಮುನ್ನವೇ ಚಿತ್ರವನ್ನು ಚಿತ್ರಮಂದಿರಕ್ಕೆ ತರಲು ಸಿದ್ಧತೆ ನಡೆಸಲಾಗುತ್ತಿದೆ.

ಎಚ್. ವಿನೋದ್ ನಿರ್ದೇಶನದ ಈ ಚಿತ್ರವು ವಿಜಯ್ ಅವರ ಸಿನಿ ಪಯಣದ ಕೊನೆಯ ಸಿನಿಮಾ ಎಂದು ಹೇಳಲಾಗುತ್ತಿದೆ. ಚಿತ್ರದಲ್ಲಿ ಪೂಜಾ ಹೆಗ್ಡೆ ಮತ್ತು ಮಮಿತಾ ಬೈಜು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಅನಿರುದ್ಧ್ ರವಿಚಂದ್ರನ್ ಅವರ ಸಂಗೀತ ಈ ಚಿತ್ರಕ್ಕಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಕೊನೆಯ ಬಾರಿ ಬೆಳ್ಳಿತೆರೆಯ ಮೇಲೆ ನೋಡಲು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !