ಹೊಸದಿಗಂತ ಡಿಜಿಟಲ್ ಡೆಸ್ಕ್:
ಸತತ ಎರಡು ದಶಕಗಳ ನಂತರ ಕಾಂಗ್ರೆಸ್ ತನ್ನ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಕಾಣಲು ಸಜ್ಜಾಗಿದೆ. ಜಿ-23 ಹಿರಿಯ ನಾಯಕರು ಪತ್ರ ಬರೆದು ಎರಡು ವರ್ಷಗಳ ನಂತರ ಬಂಡಾಯದ ಬೇಗುದಿ ಹೊಗೆಯಾಡಿದ ಬೆನ್ನಲ್ಲೇ ಸುಧಾರಣೆಯತ್ತ ಕಾಂಗ್ರೆಸ್ ಗಮನ ಹರಿಸಿದಂತಿದೆ. ಅಧ್ಯಕ್ಷೀಯ ಸ್ಥಾನಕ್ಕೆ ಚುನಾವಣೆ ಘೋಷಣೆಯಾದರೂ ಗಾಂಧಿಯೇತರರು ಪಕ್ಷದ ಚುಕ್ಕಾನಿ ಹಿಡಿಯೋದು ಡೌಟ್ ಎನ್ನಲಾಗಿತ್ತು. ಆದರೆ ಇತ್ತೀಚಿನ ಬೆಳವಣಿಗೆಗಳು ಈ ಹೇಳಿಕೆಯನ್ನು ಸುಳ್ಳೆಂದು ಸಾಬೀತುಪಡಿಸಿವೆ.
ಅಧ್ಯಕ್ಷ ಸ್ಥಾನಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ತಿರುವನಂತಪುರಂ ಸಂಸದ ಶಶಿ ತರೂರ್ ಅವರನ್ನು ಸಂಭಾವ್ಯ ಸ್ಪರ್ಧಿಗಳೆಂದು ಪರಿಗಣಿಸಲಾಗಿದೆ. ಆ ಮೂಲಕ ಮೊದಲ ಬಾರಿಗೆ ಗಾಂಧಿಯೇತರರು ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿಯಲಿದ್ದಾರಾ ಎಂಬ ಕುತೂಹಲ ಹುಟ್ಟಿಕೊಂಡಿದೆ. ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ಕದನವು ತೀವ್ರಗೊಳ್ಳುತ್ತಿರುವುದರ ಜೊತೆಗೇ ಪಕ್ಷವು ಪ್ರಭಾವ ಹೆಚ್ಚಿಸುವ ಕಾರ್ಯಚಟುವಟಿಕೆಗಳತ್ತ ಗಮನ ಹರಿಸಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ತೀವ್ರ ಭೇಟಿಗಳು ನಡೆಯುತ್ತಿವೆ ಎನ್ನಲಾಗಿದೆ.
ಜಿ-23 ರ ಎರಡು ವರ್ಷಗಳ ನಂತರ, ಬಂಡಾಯಗಾರರ ಗುಂಪು ಪೂರ್ಣಾವಧಿಯ ಅಧ್ಯಕ್ಷರ ಅವಶ್ಯಕತೆಯ ಬಗ್ಗೆ ಕೂಗೆಬ್ಬಿಸಿತ್ತು, ಪ್ರಸ್ತುತ ಪಕ್ಷವು ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವತ್ತ ಸಾಗುತ್ತಿದೆ. ಗುರುವಾರ, ಕಾಂಗ್ರೆಸ್ನ ಕೇಂದ್ರ ಚುನಾವಣಾ ಪ್ರಾಧಿಕಾರವು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷೀಯ ಚುನಾವಣೆಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಉತ್ತರಾಧಿಕಾರಿಯ ಆಯ್ಕೆಗೆ ಕ್ಷಣಗಣನೆ ಆರಂಭವಾಗಿದೆ.
ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಮತ್ತು ಕೇರಳದ ಸಂಸದ ಶಶಿ ತರೂರ್ ನಡುವೆ ಪೈಪೋಟಿಯೇರ್ಪಡುವುದು ಬಹುತೇಕ ನಿಚ್ಚಳವಾಗಿದೆ. ಇಬ್ಬರದೂ ವಿಭಿನ್ನ ವ್ಯಕ್ತಿತ್ವವಾಗಿದ್ದು ಗೆಹ್ಲೋಟ್ ಅವರಿಗೆ ಇರುವ ಅನುಭವ ಮತ್ತು ಅವರ ಸಾಮೂಹಿಕ ಅನುಯಾಯಿಗಳ ಸಂಖ್ಯೆಯು ಅವರನ್ನು ಶಶಿ ತರೂರ್ ಅವರಿಗಿಂತ ಭಿನ್ನವಾಗಿ ನಿಲ್ಲಿಸಿದೆ. ಆ ಮೂಲಕ ಇಬ್ಬರ ನಡುವಿನ ಸ್ಪರ್ಧೆಯು ಗಾಂಧಿಯೇತರರನ್ನು ಗದ್ದುಗೆಯ ಮೇಲೆ ಕೂರಿಸುವ ಮೂಲಕ ಪ್ರತಿಪಕ್ಷ ಬಿಜೆಪಿಯ ʼಕುಟುಂಬ ರಾಜಕಾರಣʼದ ಆರೋಪಕ್ಕೆ ತೆರೆ ಎಳೆಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.