ಆ ದಿನ ನಾನು ಉಗ್ರರ ಗುಂಡಿಗೆ ಬಲಿಯಾಗುತ್ತಿದ್ದೆ: ಮುಂಬೈ ದಾಳಿ ಕುರಿತು ರೋಚಕ ಸಂಗತಿ ಬಿಚ್ಚಿಟ್ಟ ಗೌತಮ್ ಅದಾನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

2008ರ ನವೆಂಬರ್ 26ರಂದು ನಡೆದ ಮುಂಬೈನ ತಾಜ್ ಹೋಟೆಲ್‌ನಲ್ಲಿನ ಉಗ್ರರ ದಾಳಿ ನೆನಪು ಎಲ್ಲರಿಗೂ ಇದ್ದೆ ಇರುತ್ತೆ. ಪ್ರತಿ ವರ್ಷ ಆ ದಿನವನ್ನು ನೆನಪಿಸಲಾಗುತ್ತದೆ.
ಇದೀಗ ಆ ದಿನವನ್ನು ಏಷ್ಯಾದ ನಂಬರ್ 1, ವಿಶ್ವದ ಮೂರನೇ ಶ್ರೀಮಂತ ಗೌತಮ್ ಅದಾನಿ ನೆನಪಿಸಿಕೊಂಡಿದ್ದಾರೆ.

ಉಗ್ರರ ದಾಳಿ ವೇಳೆ ನಾನು ಕೂಡಾ ಅಲ್ಲೇ ಇದ್ದೆ. ನನ್ನನ್ನು ಹೋಟೆಲ್ ಸಿಬ್ಬಂದಿ ಸುರಕ್ಷಿತವಾಗಿ ಹಿಂದಿನ ಬಾಗಿಲಿನಿಂದ ಹೊರಗೆ ಕರೆದುಕೊಂಡು ಹೋಗದಿದ್ದರೆ ಉಗ್ರರ ಗುಂಡಿಗೆ ನಾನೂ ಬಲಿಯಾಗುತ್ತಿದ್ದೆ ಎಂದು ಸ್ಫೋಟಕ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಖಾಸಗಿ ವಾಹಿನಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ 14 ವರ್ಷ ಹಿಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಅದಾನಿ, ಈ ಕಹಿ ಘಟನೆಯನ್ನು ನೆನಪಿಸಿಕೊಂಡರು. ತಾಜ್ ಹೋಟೆಲ್ ಮೇಲೆ 10 ಗಂಟೆಗಳ ಕಾಲ ಭೀಕರ ದಾಳಿ ನಡೆದರೂ ತಾವು ಸುರಕ್ಷಿತವಾಗಿ ಅಲ್ಲಿಂದ ಹೊರ ಬಂದಿರುವುದು ಮರು ಜನ್ಮವೇ ಸರಿ ಎಂದು ಬಣ್ಣಿಸಿದ್ದಾರೆ.
ದುಬೈ ಮೂಲದ ನನ್ನ ಸ್ನೇಹಿತರೊಂದಿಗೆ ತಾಜ್ ಹೋಟೆಲ್‌ನಲ್ಲಿ ವ್ಯಾಪಾರದ ಬಗೆಗಿನ ಸಭೆ ನಡೆಸುತ್ತಿದ್ದೆ. ಈ ವೇಳೆಯೇ ಹೋಟೆಲ್ ದಾಳಿಗೊಳಗಾಗಿತ್ತು. ಹೋಟೆಲ್ ಮೇಲೆ ದಾಳಿಯಾಗಿದ್ದಾಗ ನಾನು ಕೂಡಾ ಭಯೋತ್ಪಾದಕರನ್ನು ನೋಡಿದ್ದಾಗಿ ತಿಳಿಸಿದ್ದಾರೆ.

ಅಂದು ನಾನು ದುಬೈನಿಂದ ಮುಂಬೈಗೆ ಬಂದಿದ್ದು, ಸ್ನೇಹಿತರೊಂದಿಗೆ ಮೀಟಿಂಗ್ ಅನ್ನು ಮುಗಿಸಿದ್ದೆ. ಬಿಲ್ ಪಾವತಿಸಿದ ಬಳಿಕ ನಾನು ಹೋಟೆಲ್‌ನಿಂದ ನಿರ್ಗಮಿಸಲು ಹೊರಟಿದ್ದೆ. ಆದರೆ ನನ್ನ ಕೆಲವು ಸ್ನೇಹಿತರು ಮತ್ತೊಂದು ಸುತ್ತಿನ ಸಭೆ ನಡೆಸಲು ನನ್ನನ್ನು ಕೇಳಿದ್ದರು. ಹೀಗಾಗಿ ನಾನು ಹೋಟೆಲ್‌ನಲ್ಲಿ ಮತ್ತೆ ಉಳಿದುಕೊಳ್ಳಲು ನಿರ್ಧರಿಸಿದ್ದೆ. ಬಳಿಕ ಒಂದು ಲೋಟ ಕಾಫಿ ಕುಡಿದು 2ನೇ ಸುತ್ತಿನ ಸಭೆ ಪ್ರಾರಂಭಿಸಲಿದ್ದೆವು. ಅಷ್ಟರಲ್ಲಿ ಹೋಟೆಲ್ ಭಯೋತ್ಪಾದಕರ ದಾಳಿಗೆ ಒಳಗಾಗಿರುವುದು ತಿಳಿದುಬಂತು. ಕೆಲವು ನಿಮಿಷಗಳ ಬಳಿಕ ಹೋಟೆಲ್ ಸಿಬ್ಬಂದಿಯೊಬ್ಬರು ನನ್ನ ಬಳಿ ಬಂದು ತಮ್ಮನ್ನು ಹಿಂಬಾಲಿಸುವಂತೆ ಹೇಳಿದರು. ನಾನು ಅದರಂತೆಯೇ ಮಾಡಿದೆ. ಅವರು ನನ್ನನ್ನು ಅಡುಗೆ ಮನೆಗೆ ಕರೆದುಕೊಂಡು ಹೋಗಿ, ಹಿಂಬದಿಯ ಬಾಗಿಲಿನಿಂದ ಹೊರ ಬರುವಂತೆ ಮಾಡಿದರು ಎಂದು ಆ ದಿನದ ಘಟನೆಯನ್ನು ಬಿಚ್ಚಿಟ್ಟರು.

ಅಂದು ಹೋಟೆಲ್ ಸಿಬ್ಬಂದಿ ಮಾಡಿದಸಹಾಯದಿಂದ ಬದುಕುಳಿದೆ. ನಾನು ಸಭೆಯಲ್ಲಿ ಕುಳಿತುಕೊಳ್ಳದೇ ಹೋಗಿದ್ದರೆ ಎಲ್ಲರಂತೆ ನಾನೂ ಬಾಲ್ಕನಿಯಲ್ಲಿ ಓಡಾಡಬೇಕಿತ್ತೇನೋ? ಈ ವೇಳೆ ಭಯೋತ್ಪಾದಕರು ನನಗೆ ಎದುರಾಗಿ ಅವರ ದಾಳಿಗೆ ನಾನೂ ಬಲಿಯಾಗುತ್ತಿದ್ದೆನೇನೋ! ಅಂದು ನಮ್ಮ ರಕ್ಷಣೆ ಮಾಡಿದ ಹೋಟೆಲ್ ಸಿಬ್ಬಂದಿಯಂತಹವರು ಸಿಗುವುದೇ ಬಹು ಅಪರೂಪ. ನಿಜವಾಗಿಯೂ ತಾಜ್ ಹೋಟೆಲ್‌ನ ಸಿಬ್ಬಂದಿ ಅತ್ಯಂತ ಒಳ್ಳೆಯವರು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

2008ರ ನವೆಂಬರ್ 26 ರಂದು 10 ಪಾಕಿಸ್ತಾನಿ ಭಯೋತ್ಪಾದಕರು ತಾಜ್ ಹೋಟೆಲ್ ಮೇಲೆ ದಾಳಿ ನಡೆಸಿದ್ದರು. ಘಟನೆಯಲ್ಲಿ 18 ಭದ್ರತಾ ಸಿಬ್ಬಂದಿ ಸೇರಿದಂತೆ 166 ಜನರು ಸಾವನ್ನಪ್ಪಿದ್ದರು. ಹಲವಾರು ಗಾಯಗೊಂಡಿದ್ದರು. ಕೋಟ್ಯಂತರ ಮೌಲ್ಯದ ಆಸ್ತಿಯನ್ನೂ ಉಗ್ರರು ಹಾನಿಗೊಳಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!