ಹೊಸ ದಿಗಂತ ವರದಿ,ದಾವಣಗೆರೆ:
ಜೈಲು ಶಿಕ್ಷೆಯ ಭಯದಲ್ಲಿ ಆರೋಪಿಯೊಬ್ಬ ನ್ಯಾಯಾಧೀಶರ ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಅಸ್ವಸ್ಥಗೊಂಡ ಘಟನೆ ಶನಿವಾರ ಜಿಲ್ಲೆಯ ಹರಿಹರ ನಗರದ 2ನೇ ಹೆಚ್ಚುವರಿ ಜೆ.ಎಂ.ಎಫ್.ಸಿ ಕೋರ್ಟ್ ನಲ್ಲಿ ನಡೆದಿದೆ.
ವಿಚ್ಛೇದಿತ ಪತ್ನಿಗೆ ಜೀವನಾಂಶ ಕೊಡಬೇಕಿದ್ದ ಆರೋಪಿ ಫಜಲ್ ಅಲಿ(38 ವರ್ಷ) ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥಗೊಂಡ ವ್ಯಕ್ತಿ. ಈತ ನ್ಯಾಯಾಲಯಕ್ಕೆ ಹಾಜರಾಗಿದ್ದ ಈ ವೇಳೆ ನ್ಯಾಯಾಧೀಶರ ಸಮ್ಮುಖದಲ್ಲಿಯೇ ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದಾನೆ. ಕೂಡಲೇ ಆತನನ್ನು ದಾವಣಗೆರೆ ಜಿಲ್ಲಾಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆತನ ಸ್ಥಿತಿ ಗಂಭೀರವಾಗಿದೆ.
ವಿಚ್ಛೇದನ ಪಡೆದಿದ್ದ ಫಜಲ್ ಅಲಿ, ಕೋರ್ಟ್ ಆದೇಶದಂತೆ ಪತ್ನಿಗೆ ಜೀವನಾಂಶ ಕೊಡಬೇಕಿತ್ತು. ಆದರೂ ಕಳೆದ ಕೆಲ ತಿಂಗಳಿನಿಂದ ಪತ್ನಿಗೆ ಜೀವನಾಂಶ ನೀಡರಲಿಲ್ಲ. ಈ ವಿಚಾರವನ್ನು ಪತ್ನಿ ಪರ ವಕೀಲರು ನ್ಯಾಯಾಧೀಶರ ಗಮನಕ್ಕೆ ತಂದಿದ್ದರು. ಪ್ರಕರಣದ ವಿಚಾರಣೆಗೆಂದು ಕೋರ್ಟ್ ಗೆ ಬರುವಾಗಲೇ ಜೇಬಿನಲ್ಲಿ ವಿಷದ ಬಾಟಲ್ ಇಟ್ಟುಕೊಂಡು ಬಂದಿದ್ದ ಫಜಲ್ ಅಲಿ, ತನ್ನನ್ನು ಜೈಲಿಗೆ ಹಾಕುವ ಆದೇಶ ನ್ಯಾಯಾಧೀಶರಿಂದ ಬರುತ್ತದೆಂಬ ಭಯದಲ್ಲಿ ವಿಷ ಸೇವಿಸಿದ್ದಾನೆ ಎನ್ನಲಾಗಿದೆ.