ಹೊಸ ದಿಗಂತ ವರದಿ, ಮದ್ದೂರು :
ಆಧಾರ್ ಕಾರ್ಡ್‌ಗಳನ್ನು ರಿನಿವಲ್ ಮಾಡುವುದಾಗಿ ಹೇಳಿ ಮುಗ್ದ ಜನರನ್ನು ವಂಚಿಸಿ ಹಣ ವಸೂಲಿ ಮಾಡುತ್ತಿದ್ದ ನಾಲ್ವರಿಗೆ ಗ್ರಾಮಸ್ಥರು ಧರ್ಮದೇಟು ನೀಡಿರುವ ಘಟನೆ ತಾಲೂಕಿನ ಕೆ. ಬೆಳ್ಳೂರು ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಗುರುವಾರ ಜರುಗಿದೆ.
ಗ್ರಾಮಸ್ಥರ ಗುಂಪಿನ ದಾಳಿಗೆ ಬೆದರಿದ ಇಬ್ಬರು ಮಹಿಳೆಯರೂ ಸೇರಿದಂತೆ ನಾಲ್ವರು ಲ್ಯಾಪ್‌ಟಾಪ್‌ಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಘಟನೆಯ ಸುದ್ಧಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೂರು ಲ್ಯಾಪ್‌ಟಾಪ್ ಸೇರಿದಂತೆ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕೆ. ಬೆಳ್ಳೂರು ಗ್ರಾಮಕ್ಕೆ ಆಗಮಿಸಿದ ಇಬ್ಬರು ವ್ಯಕ್ತಿಗಳು, ಆದಾರ್ ಕಾರ್ಡ್ ರಿನಿವಲ್ ಮಾಡದಿದ್ದರೆ ತಲಾ ಒಂದು ಸಾವಿರ ದಂಡ ಬೀಳುತ್ತದೆ ಎಂದು ಗ್ರಾಮದಲ್ಲಿ ಸುಳ್ಳು ಸುದ್ಧಿ ಹಬ್ಬಿಸಿದ್ದಾರೆ. ದಂಡ ಪಾವತಿ ಬಗ್ಗೆ ಆತಂಕಗೊಂಡ ಮಹಿಳೆಯರೂ ಸೇರಿದಂತೆ ನೂರಾರು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿ ಬಳಿ ವಿದ್ಯುತ್ ಸಂಪರ್ಕ ಪಡೆದು ಆದಾರ್ ಕಾರ್ಡ್ ರಿನಿವಲ್ ಮಾಡುವ ನೆಪದಲ್ಲಿ ಹಣ ವಸೂಲಿ ಮಾಡುತ್ತಿದ್ದರು.
ಆರೋಪಿಗಳು ಪ್ರತಿ ಕಾರ್ಡುದಾರರಿಂದ ತಲಾ 80 ರಿಂದ 100 ರೂ. ವಸೂಲಿ ಮಾಡುತ್ತಿದ್ದರು. ಈ ಬಗ್ಗೆ ಸಂಶಯಗೊಂಡ ಕೆಲವು ಗ್ರಾಮಸ್ಥರು ತಹಸೀಲ್ದಾರ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.
ತಮ್ಮ ವಂಚನೆ ಪ್ರಕರಣ ಕೇಳಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ನಾಲ್ವರು ವ್ಯಕ್ತಿಗಳೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರಲ್ಲದೆ, ಕೆಲ ಗ್ರಾಮಸ್ಥರ ಗುಂಪು ಯುವಕರಿಗೆ ಧರ್ಮದೇಟು ನೀಡಿದೆ. ಇದರಿಂದ ಆತಂಕಗೊಂಡ ಮಹಿಳೆಂಯರೂ ಸೇರಿದಂತೆ ನಾಲ್ವರು ಲ್ಯಾಪ್‌ಟಾಪ್‌ಗಳನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ಕೈಗೊಂಡಿದ್ದಾರೆ.