ಮಹಿಳೆಯ ಹತ್ಯೆಗೈದು ತಲೆಮರೆಸಿಕೊಂಡಿದ್ದ ಆರೋಪಿ ಎರಡು ವರ್ಷಗಳ ಬಳಿಕ ಬಂಧನ

ಹೊಸದಿಗಂತ ವರದಿ, ಮಡಿಕೇರಿ:

ಮಹಿಳೆಯರಿಬ್ಬರ ಮೇಲೆ ಹಲ್ಲೆ ನಡೆಸಿ ಓರ್ವಳ ಸಾವಿಗೆ ಕಾರಣನಾದ ಮತ್ತು ಮತ್ತೊಬ್ಬರನ್ನು ಗಾಯಗೊಳಿಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಎರಡು ವರ್ಷಗಳ ಬಳಿಕ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ನಿವಾಸಿ ರಾಜೇಶ್ (42)ಎಂಬಾತನೇ ಬಂಧನಕ್ಕೊಳಗಾದವನಾಗಿದ್ದು, ಆಸ್ತಿ ವಿಚಾರಕ್ಕಾಗಿ ಆತ ಈ ಕೃತ್ಯ ಎಸಗಿರುವುದಾಗಿ ಹೇಳಲಾಗಿದೆ.

ಘಟನೆಯ ವಿವರ: ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಮದ ನಿವಾಸಿಗಳಾದ ಪ್ರೇಮಾ ಹಾಗೂ ಅವರ ತಂಗಿ ವೀಣಾ ಎಂಬವರುಗಳು 2022ರ ಫೆ.6 ರಂದು ಪೊನ್ನಂಪೇಟೆಯ ಕೊಡವ ಸಮಾಜದಲ್ಲಿನ ಮದುವೆ ಕಾರ್ಯಕ್ರಮಕ್ಕೆ ತೆರಳಿ ಮನೆಗೆ ಹಿಂದಿರುಗುವಾಗ, ಸಂಜೆ 5 ಗಂಟೆ ಸುಮಾರಿಗೆ ಅವರ ಮನೆಯ ಸಮೀಪದ ರಸ್ತೆಯಲ್ಲಿ ಹರಿತವಾದ ಆಯುಧದಿಂದ ತಲೆ ಮತ್ತು ಕುತ್ತಿಗೆ ಹಲ್ಲೆ ನಡೆಸಿ ಪ್ರೇಮಾ ಅವರನ್ನು ಕೊಲೆ ಮಾಡಿರುವ ಮತ್ತು ವೀಣಾ ಅವರನ್ನು ಗಂಭೀರ ಗಾಯಗೊಳಿಸಿರುವ ಕುರಿತು ಶ್ರೀಮಂಗಲ ಪೊಲೀಸ್‌ ಠಾಣೆಯಲ್ಲಿ ಕಲಂ 302, 307 ಐಪಿಸಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಗಂಭೀರವಾಗಿ ಹಲ್ಲೆಗೊಳಗಾಗಿದ್ದ ವೀಣಾ ಅವರನ್ನು ವಿಚಾರಣೆಗೊಳಪಡಿಸಿದ ಸಂದರ್ಭ ಪ್ರೇಮಾರವರ ಪತಿ ಸೋಮಶೇಖರ್ ಅವರ ಅಕ್ಕನ ಮಗನಾದ ರಾಜೇಶ್ ಎಂಬಾತ ಆಸ್ತಿ ವಿಚಾರಕ್ಕಾಗಿ ಕೊಲೆ ಮಾಡಿರುವುದು ತನಿಖೆಯಲ್ಲಿ ಕಂಡು ಬಂದಿತ್ತು.
ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿ/ಸಿಬ್ಬಂದಿಗಳು ಭೇಟಿ ನೀಡಿ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗಾಗಿ ವೀರಾಜಪೇಟೆ ಉಪ ವಿಭಾಗದ ಡಿವೈಎಸ್ಪಿ ಆರ್.ಮೋಹನ್‌ಕುಮಾರ್, ಕುಟ್ಟ ವೃತ್ತದ ಇನ್ಸ್‌ಪೆಕ್ಟರ್ ಮಂಜಪ್ಪ.ಸಿ.ಎ, ಶ್ರೀಮಂಗಲ ಪಿ ಎಸ್ ಐ ರವೀಂದ್ರ, ಎಎಸ್ಐ ಪಿಎಸ್‌ಐ ಪ್ರಮೋದ್, ಸಿಬ್ಬಂದಿ ಮಹದೇವಸ್ವಾಮಿ, ಪೊನ್ನಂಪೇಟೆ ಠಾಣೆಯ ಅಪರಾಧ ಪತ್ತೆ ಸಿಬ್ಬಂದಿಗಳು ಮತ್ತು ತಾಂತ್ರಿಕ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಲಾಗಿತ್ತು.

ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಟಿ.ಶೆಟ್ಟಿಗೇರಿ ನಿವಾಸಿ ಆರೋಪಿ ರಾಜೇಶನ ಪತ್ತೆಗಾಗಿ ವಿಶೇಷ ತಂಡವು ಸತತ ಎರಡು ವರ್ಷಗಳಿಂದ ವಿಶೇಷ ಕಾರ್ಯಾಚರಣೆ ನಡೆಸಿ ಬುಧವಾರ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ಸಮೀಪದ ಕುಂಬ್ರ ಎಂಬಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.

ಆರೋಪಿ ರಾಜೇಶನ ಮಾವ ಸೋಮಶೇಖರ್ 2021ರಲ್ಲಿ ಮೃತರಾಗಿದ್ದು, ಮಾವನ ಸಾವಿಗೆ ಅವರ ಪತ್ನಿ ಪ್ರೇಮಾ ಕಾರಣವಾಗಿರಬಹುದು ಹಾಗೂ ತನ್ನ ಕುಟುಂಬಕ್ಕೆ ಸೇರಿದ ಆಸ್ತಿಯನ್ನು ಪ್ರೇಮಾರವರು ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ರಾಜೇಶನು ಈ ಕೃತ್ಯ ಎಸಗಿ ಮುರುಡೇಶ್ವರಕ್ಕೆ ತೆರಳಿ, ನಂತರ ಭಟ್ಕಳದಲ್ಲಿ ಮೊಬೈಲ್‌’ನ್ನು ನಾಶಗೊಳಿಸಿ ಮಹಾರಾಷ್ಟ್ರ ರಾಜ್ಯದ ಪನ್‌ವೇಲ್‌ನಲ್ಲಿ ಕೆಲಸ ಮಾಡಿಕೊಂಡಿರುವುದು ವಿಚಾರಣೆಯಲ್ಲಿ ತಿಳಿದು ಬಂದಿದೆ.

ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್ ಶ್ಲಾಘಿಸಿದ್ದಾರೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!