ಹಿಂದು ಧಾರ್ಮಿಕ ಕೇಂದ್ರಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಹೊಸದಿಗಂತ ವರದಿ, ಚಿತ್ರದುರ್ಗ

ಪವಿತ್ರ ಶ್ರದ್ಧಾ ಕೇಂದ್ರಗಳಾಗಿರುವ ಹಿಂದು ಧಾರ್ಮಿಕ ಮತ್ತು ತೀರ್ಥ ಕ್ಷೇತ್ರಗಳನ್ನು ಸರ್ಕಾರದ ದಬ್ಬಾಳಿಕೆ, ನಿಯಂತ್ರಣದಿಂದ ಮುಕ್ತಗೊಳಿಸಿ ಭಕ್ತರ ನಿರ್ವಹಣೆಗೆ ನೀಡುವಂತೆ ವಿಶ್ವ ಹಿಂದೂ ಪರಿಷತ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ವಿಶ್ವ ಹಿಂದೂ ಪರಿಷತ್‌ನ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಜಗನ್ನಾಥಶಾಸ್ತ್ರಿ ಮಾತನಾಡಿ, ನಮ್ಮ ರಾಜ್ಯ ಮತ್ತು ಭಾರತದಾದ್ಯಂತ ಕೋಟ್ಯಂತರ ಹಿಂದುಗಳಿಗೆ ತಿರುಮಲ ತಿರುಪತಿ ದೇವಸ್ಥಾನ, ಅಲ್ಲಿನ ಶ್ರೀವೆಂಕಟೇಶ್ವರ ಸ್ವಾಮಿಯ ಬಗ್ಗೆ ಅಪಾರ ಭಕ್ತಿ ಇದೆ. ಅಲ್ಲಿ ಭಕ್ತರಿಗೆ ಪ್ರಸಾದ ರೂಪವಾಗಿ ನೀಡುವ ಲಾಡುಗಳನ್ನು ಮಹಾಪ್ರಸಾದ ಎಂದು ಸ್ವೀಕರಿಸುತ್ತಾರೆ. ಅನಾದಿಕಾಲದಿಂದಲೂ ಅಪಾರ ನಂಬಿಕೆ ಇದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಪಟ್ಟಭದ್ರರು ಹಿಂದು ದೇವಾಲಯಗಳನ್ನು ಅಪವಿತ್ರಗೊಳಿಸುವ ದುಸ್ಸಾಹಸಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಎಚ್ಚರಿಸಿದರು.

ಈ ಧರ್ಮದ್ರೋಹಿ ಕಾರ್ಯದಲ್ಲಿ ಭಾಗಿಯಾಗಿರುವವರು ತಿರುಪತಿ ಭಕ್ತರನ್ನು ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸಲು ಹುನ್ನಾರ ನಡೆಸುತ್ತಿದ್ದಾರೆ ಎನ್ನುವ ಶಂಕೆಯಿದೆ. ಸನಾತನ ವಿರೋಧಿ ಶಕ್ತಿಗಳು ಸಂವಿಧಾನಬದ್ದ ಹಿಂದುಗಳ ನಂಬಿಕೆಯೊಂದಿಗೆ ಈ ಮಹಾಪ್ರಸಾದದ ತಯಾರಿಕೆಯ ವಿಷಯದಲ್ಲಿ ಅವರ ಧಾರ್ಮಿಕ ಹಕ್ಕುಗಳ ಮೇಲೆ ಕುಮ್ಮಕ್ಕು ನಡೆಸಿವೆ. ಅದಕ್ಕಿಂತಲೂ ಮಿಗಿಲಾಗಿ ಈ ದೇವಸ್ಥಾನದಲ್ಲಿ ಭಕ್ತಾದಿಗಳು ಭಕ್ತಿಯಿಂದ ದೇವರಿಗೆ ಅರ್ಪಿಸುವ ದೇಣಿಗೆ ಮತ್ತು ಕಾಣಿಕೆಗಳ ದುರುಪಯೋಗ ಆಗುತ್ತಿದೆ. ಸರ್ಕಾರದ ಅಧಿಕಾರಿಗಳು ಮತ್ತು ರಾಜಕಾರಣಿಗಳು ಈ ಹುಂಡಿ ಹಣವನ್ನು ಧರ್ಮದ ವಿರುದ್ಧ ಬಳಸುತ್ತಿರುವುದು ಭಕ್ತರಿಗೆ ಅಪಾರವಾದ ನೋವು ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಲವಾರು ವರ್ಷಗಳಿಂದ ಹಲವಾರು ರಾಜ್ಯಗಳಲ್ಲಿ ಹಿಂದು ದೇವಾಲಯಗಳಲ್ಲಿ ಭಕ್ತರು ಭಕ್ತಿಯಿಂದ ಅರ್ಪಿಸುವ ಕಾಣಿಕೆಯ ಹಣವನ್ನು ಹಿಂದುಗಳ ಧರ್ಮವನ್ನು ಅವಹೇಳನ ಮಾಡುವ, ಅಪಪ್ರಚಾರ ಮಾಡುವ, ಹಿಂಸಿಸುವ, ಹಿಂದುಗಳ ಪೌರಾಣಿಕ ಆಚಾರಗಳನ್ನು ನಾಶಮಾಡಲು ಪ್ರೇರಣೆ ನೀಡುವ ಹಿಂದೂಯೇತರ ಸಂಘಟನೆಗಳಿಗೆ, ಸಂಸ್ಥೆಗಳಿಗೆ ದೇಣಿಗೆಯ ಹಣವನ್ನು ನೀಡುವ ಕುರಿತು ಸುದ್ದಿಗಳು ಕೇಳಿಬರುತ್ತಲೇ ಇವೆ ಎಂದು ಆರೋಪಿಸಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು ೭೭ ವರ್ಷಗಳ ನಂತರವೂ ಹಿಂದುಗಳು ನಮ್ಮ ದೇವಾಲಯಗಳನ್ನು ನಿರ್ವಹಿಸಲು ಅವಕಾಶವಿಲ್ಲ. ಅಲ್ಪಸಂಖ್ಯಾತರು ತಮ್ಮ ಧಾರ್ಮಿಕ ಸಂಸ್ಥೆಗಳನ್ನು ನಿರ್ವಹಿಸಲು ಅವಕಾಶ ಪಡೆದಿದ್ದಾರೆ. ಅದನ್ನು ದುರುಪಯೋಗಪಡಿಸಿಕೊಂಡು ಈ ದೇಶಕ್ಕೇ ದ್ರೋಹ ಬಗೆಯುತ್ತಿದ್ದಾರೆ. ಆದರೆ ಈ ರಾಷ್ಟ್ರದಲ್ಲಿ ಹಿಂದುಗಳಿಗೆ ಈ ಸಂವಿಧಾನಿಕ ಹಕ್ಕು ಏಕೆ ನೀಡಲಾಗುತ್ತಿಲ್ಲ. ಏಕೆ ಅವರನ್ನು ವೈಷಮ್ಯಕ್ಕೆ ಒಳಪಡಿಸಲಾಗುತ್ತಿದೆ? ಇದು ಉತ್ತರಿಸಬೇಕಾದ ಪ್ರಶ್ನೆಯಾಗಿದೆ. ಸ್ವಾತಂತ್ರ್ಯ ಬಂದ ೭೭ ವರ್ಷಗಳ ನಂತರವೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇವಾಲಯಗಳ ಮೇಲೆ ನಿಯಂತ್ರಣ ಇಟ್ಟುಕೊಂಡು ಶೋಷಿಸುತ್ತಿವೆ ಎಂದು ದೂರಿದರು.

ತಿರುಪತಿ ಬಾಲಾಜಿ ಮತ್ತು ಇತರ ಸ್ಥಳಗಳಲ್ಲಿ ನಡೆದಿರುವ ಅನಿಯಮಿತತೆಯ ಕಾರಣದಿಂದ ಹಿಂದು ಸಮಾಜವು ಈಗ ತಮ್ಮ ದೇವಾಲಯಗಳ ಪಾವಿತ್ರ್ಯತೆ ಕಾವಾಡಿಕೊಳ್ಳಬೇಕೆಂದರೆ ಅವು ಸರ್ಕಾರದ ನಿಯಂತ್ರಣದಿಂದ ಮುಕ್ತವಾದರೆ ಮಾತ್ರ ಸಾಧ್ಯ. ಇಲ್ಲವಾದಲ್ಲಿ ಅವುಗಳನ್ನು ಪುನಃ ಸ್ಥಾಪಿಸಲಾಗುವುದಿಲ್ಲ ಎಂಬ ನಂಬಿಕೆಗೆ ಬಂದಿದ್ದಾರೆ. ದೇವಾಲಯಗಳ ಆದಾಯ ಮತ್ತು ಅಸ್ತಿಪಾಸ್ತಿಗಳನ್ನು ಲೂಟಿ ಮಾಡಲು ಅಧಿಕಾರಿ ಮತ್ತು ರಾಜಕಾರಣಿಗಳು ಮಾತ್ರವಲ್ಲ, ಅವರೊಂದಿಗೆ ಕೈಜೋಡಿಸಿರುವ ಸನಾತನ ವಿರೋಧಿ ಪಾತ್ರಧಾರಿಗಳು ಕೂಡ ಮುಂದಾಗಿದ್ದಾರೆ ಎಂದು ಹರಿಹಾಯ್ದರು.

ಈ ಸಂದರ್ಭದಲ್ಲಿ ಶಾಸಕ ಕೆ.ಸಿ.ವಿರೇಂದ್ರ, ಬಿಜೆಪಿ ಮುಖಂಡರಾದ ಅನಿತ್ ಕುಮಾರ್, ಉಮೇಶ್ ಕಾರಜೋಳ, ವಿಶ್ವ ಹಿಂದೂ ಪರಿಷತ್‌ನ ಪ್ರಭಂಜನ್, ಮುಖಂಡರಾದ ಬದರಿನಾಥ್, ನಯನ ಸೇರಿದಂತೆ ವಿಶ್ವ ಹಿಂದೂ ಪರಿಷತ್ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದರು.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!