ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾದ ಅನಿವಾಸಿ ಭಾರತೀಯ (India) ಮಹಿಳೆ ಧಾರವಾಡದ ಪ್ರಿಯದರ್ಶಿನಿ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದು, ಹೀಗಾಗಿ ಅವರ ಮಕ್ಕಳನ್ನು ಭಾರತಕ್ಕೆ ಒಪ್ಪಿಸಬೇಕು ಎಂದು ದೆಹಲಿಯ (Delhi) ಜಂತರ್ ಮಂತರ್‌ನಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಪ್ರಿಯದರ್ಶಿನಿ ಪಾಟೀಲ್ ಅವರಿಗೆ ಅನ್ಯಾಯವಾಗಿದೆ. ಅವರ ಮಕ್ಕಳನ್ನು ಆಸ್ಟ್ರೇಲಿಯಾ ಸರ್ಕಾರ ಭಾರತದ ಸುಪರ್ದಿಗೆ ನೀಡಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಿಯದರ್ಶಿನಿ ಪಾಟೀಲ್ ಲಿಂಗರಾಜ ಪಾಟೀಲ್ ಅವರೊಂದಿಗೆ ವಿವಾಹವಾಗಿ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದರು. ಅಲ್ಲಿ ಪ್ರಿಯದರ್ಶಿನಿ ಅವರ ಪುತ್ರನಿಗೆ ಅನಾರೋಗ್ಯದ ಕಾರಣದಿಂದ ಆಸ್ಟ್ರೇಲಿಯಾದ ಸಿಡ್ನಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಮಗನ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಪ್ರಿಯದರ್ಶಿನಿ ಅಲ್ಲಿನ ಸರ್ಕಾರದ ವಿರುದ್ಧ ಕಾನೂನು ಹೋರಾಟ ನಡೆಸಿದ್ದರು. ಈ ವೇಳೆ ಅಲ್ಲಿನ ಸರ್ಕಾರ ಪ್ರಿಯದರ್ಶಿನಿ ಅವರೇ ಮಕ್ಕಳನ್ನು ಚೆನ್ನಾಗಿ ನೋಡಿಕೊಂಡಿಲ್ಲ ಎಂದು ಆರೋಪಿಸಿ ಅವರ ಇಬ್ಬರೂ ಮಕ್ಕಳನ್ನು ತನ್ನ ಸುಪರ್ದಿಗೆ ಪಡೆದಿತ್ತು. ಇದರಿಂದ ಮನನೊಂದು ಭಾರತಕ್ಕೆ ಬಂದ ಪ್ರಿಯದರ್ಶಿನಿ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.