ದಕ್ಷಿಣ ಭಾರತದ ಮನೆಗಳಲ್ಲಿ ಸಾಂಬಾರ್ ಸಾಮಾನ್ಯ. ಆದರೆ ಸಣ್ಣ ಈರುಳ್ಳಿಯನ್ನು ಬಳಸಿ ಮಾಡುವ ಸಾಂಬಾರ್‌ಗೆ ವಿಶೇಷವಾದ ನೈಸರ್ಗಿಕ ಸಿಹಿ ಮತ್ತು ಅದ್ಭುತ ಸುಗಂಧ ಇರುತ್ತದೆ. ಹೋಟೆಲ್‌ಗಳಲ್ಲಿ ಸಿಗುವ ಟೇಸ್ಟಿ ಸಾಂಬಾರ್ ಅನ್ನು ನಿಮ್ಮ ಮನೆಯಲ್ಲೇ ಸುಲಭವಾಗಿ ಹೇಗೆ ಮಾಡಬಹುದು ಎಂಬುದನ್ನು ತಿಳಿಯೋಣ.
ಬೇಕಾಗುವ ಸಾಮಗ್ರಿಗಳು
ಸಣ್ಣ ಈರುಳ್ಳಿ
ತೊಗರಿ ಬೇಳೆ
ಟೊಮೆಟೊ
ಹುಣಿಸೇಹಣ್ಣಿನ ರಸ
ಸಾಂಬಾರ್ ಪುಡಿ
ಎಣ್ಣೆ ಅಥವಾ ತುಪ್ಪ
ಸಾಸಿವೆ
ಜೀರಿಗೆ
ಒಣಮೆಣಸಿನಕಾಯಿ
ಇಂಗು ಮತ್ತು ಕರಬೇವು
ಮಾಡುವ ವಿಧಾನ
ಮೊದಲು ತೊಗರಿ ಬೇಳೆಯನ್ನು ಚೆನ್ನಾಗಿ ತೊಳೆದು, ಅದಕ್ಕೆ ಸ್ವಲ್ಪ ಅರಿಶಿನ ಮತ್ತು ಹನಿ ಎಣ್ಣೆ ಹಾಕಿ ಕುಕ್ಕರ್‌ನಲ್ಲಿ 3-4 ಸೀಟಿ ಬರುವವರೆಗೆ ಮೆತ್ತಗೆ ಬೇಯಿಸಿ ಪಕ್ಕಕ್ಕೆ ಎತ್ತಿಟ್ಟುಕೊಳ್ಳಬೇಕು. ಒಂದು ಪಾತ್ರೆಗೆ 2 ಚಮಚ ಎಣ್ಣೆ ಅಥವಾ ತುಪ್ಪ ಹಾಕಿ ಬಿಸಿಯಾದಾಗ ಸಿಪ್ಪೆ ಸುಲಿದ ಸಣ್ಣ ಈರುಳ್ಳಿಗಳನ್ನು ಹಾಕಿ. ಈರುಳ್ಳಿ ತಿಳಿ ಗುಲಾಬಿ ಬಣ್ಣಕ್ಕೆ ತಿರುಗುವವರೆಗೆ ಮಧ್ಯಮ ಉರಿಯಲ್ಲಿ ಚೆನ್ನಾಗಿ ಹುರಿದುಕೊಂಡು ಅದಕ್ಕೆ ಕತ್ತರಿಸಿದ ಟೊಮೆಟೊ ಹಾಕಿ ಮೃದುವಾಗುವವರೆಗೆ ಬೇಯಿಸಿ. ನಂತರ ಅದಕ್ಕೆ ಹುಣಿಸೇಹಣ್ಣಿನ ರಸ, ಸಾಂಬಾರ್ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ 5 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ಇದರಿಂದ ಈರುಳ್ಳಿಗೆ ಹುಳಿ-ಖಾರ ಚೆನ್ನಾಗಿ ಹಿಡಿಯುತ್ತದೆ.
ನಂತರ ಮ್ಯಾಶ್ ಮಾಡಿಟ್ಟುಕೊಂಡ ತೊಗರಿ ಬೇಳೆಯನ್ನು ಈ ಮಿಶ್ರಣಕ್ಕೆ ಸುರಿದು, ಸಾಂಬಾರ್ ಹದಕ್ಕೆ ತಕ್ಕಂತೆ ನೀರನ್ನು ಹೊಂದಿಸಿ. ಸಾಂಬಾರ್ ಅನ್ನು 5 ರಿಂದ 7 ನಿಮಿಷಗಳ ಕಾಲ ಚೆನ್ನಾಗಿ ಕುದಿಯಲು ಬಿಡಬೇಕು. ಸಾಂಬಾರ್ ಚೆನ್ನಾಗಿ ಕುದಿ ಬಂದ ನಂತರ ಒಗ್ಗರಣೆ ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ಸಾಸಿವೆ, ಜೀರಿಗೆ, ಒಣಮೆಣಸಿನಕಾಯಿ, ಕರಬೇವು ಮತ್ತು ಇಂಗು ಹಾಕಿ ಸಾಂಬಾರ್‌ಗೆ ಸೇರಿಸಿ ತಕ್ಷಣ ಮುಚ್ಚಳ ಮುಚ್ಚಿದರೆ ಬಿಸಿಬಿಸಿ ಸಣ್ಣ ಈರುಳ್ಳಿ ಸಾಂಬಾರ್ ಸಿದ್ಧ.



