‘ಸಿದ್ದರಾಮೋತ್ಸವ’ವು ಕಾಂಗ್ರೆಸ್ ಹೈಕಮಾಂಡ್ ಕುಸಿದಿರುವುದರ ಕನ್ನಡಿ ಎಂದ ಬಿಜೆಪಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯ ಬೆಂಬಲಿಗರು ಬರುವ ಆಗಸ್ಟ್ ತಿಂಗಳಿನಲ್ಲಿ ಸಿದ್ದರಾಮೋತ್ಸವ ಹೆಸರಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಘೋಷಿಸಿರುವ ಬೆನ್ನಲ್ಲೇ ರಾಜ್ಯ ಬಿಜೆಪಿ ಈ ನಡೆಯಲ್ಲಿರುವ ರಾಜಕೀಯವನ್ನು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಶುಕ್ರವಾರದ ತನ್ನ ಪತ್ರಿಕಾಗೋಷ್ಟಿಯಲ್ಲಿ ವ್ಯಾಖ್ಯಾನಿಸಿದೆ.
ಸಿದ್ದರಾಮಯ್ಯನವರು ಕಾಂಗ್ರೆಸ್ ತನ್ನ ಆಣತಿಯಂತೆ ನಡೆಯಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನೂ ಪಕ್ಕಕ್ಕಿರಿಸಿ, ದಲಿತ ಮುಖ್ಯಮಂತ್ರಿ ಚರ್ಚೆಯನ್ನೂ ಮುಸುಕಾಗಿಸಿ ಹೈಕಮಾಂಡಿಗೆ ತೋರಿಸುತ್ತಿರುವ ಶಕ್ತಿ ಪ್ರದರ್ಶನ ಇದು ಎಂಬುದು ರಾಜ್ಯ ಬಿಜೆಪಿಯ ವ್ಯಾಖ್ಯಾನ.
ಸಿದ್ದರಾಮಯ್ಯ ಬ್ಲಾಕ್ಮೈಲ್ ವೈಖರಿ ಇದು- ಛಲವಾದಿ ನಾರಾಯಣಸ್ವಾಮಿ
ರಾಜ್ಯ ವಕ್ತಾರ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಸಿದ್ದರಾಮಯ್ಯ ಒಬ್ಬ ಬ್ಲ್ಯಾಕ್‍ಮೇಲ್ ರಾಜಕಾರಣಿ. ಅವರು ಮುಖ್ಯಮಂತ್ರಿಯಾದುದು ಕೂಡ ಹೈಕಮಾಂಡ್ ಬ್ಲ್ಯಾಕ್‍ಮೇಲ್ ಮೂಲಕವೇ. ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಯಡಿಯೂರಪ್ಪ, ಬಂಗಾರಪ್ಪ, ನಿಜಲಿಂಗಪ್ಪ ಅವರನ್ನು ಮೀರಿಸುವ ನಾಯಕತ್ವ ಗುಣ ಸಿದ್ದರಾಮಯ್ಯ ಅವರಲ್ಲಿಲ್ಲ. ತನ್ನ ಜೊತೆಗಿಲ್ಲದ ಸಮುದಾಯಗಳು ತನ್ನ ಜೊತೆಗಿದೆ ಎಂದು ಹೇಳಿಕೊಂಡು ಬ್ಲ್ಯಾಕ್‍ಮೇಲ್ ಮಾಡುತ್ತ ಅವರು ಮುಂದುವರಿದಿದ್ದಾರೆ ಎಂದು ಟೀಕಿಸಿದರು.
ದೇವೇಗೌಡರನ್ನು ಬ್ಲ್ಯಾಕ್‍ಮೇಲ್ ಮಾಡಿದರು. ಕುಮಾರಸ್ವಾಮಿಯನ್ನೂ ಬ್ಲ್ಯಾಕ್‍ಮೇಲ್ ಮಾಡಿದ್ದರು. ಈಗ ಅದು ಕಾಂಗ್ರೆಸ್‍ನಲ್ಲೂ ಮುಂದುವರಿದಿದೆ. ಕಾಂಗ್ರೆಸ್ ಪಕ್ಷವು ಸಿದ್ದರಾಮಯ್ಯರನ್ನು ಕರೆದುಕೊಂಡು ಬಂದು ಪಕ್ಷದ ನಿಷ್ಠಾವಂತರಿಗೆ ಅವಮಾನ ಮಾಡಿದೆ ಎಂದು ಆರೋಪಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನನಗೆ ಯಾವ ರೀತಿಯಲ್ಲೂ ಸರಿಸಾಟಿಯಲ್ಲ ಎಂಬ ಒಂದು ಸಂದೇಶ ಹಾಗೂ ದಲಿತ ಮುಖ್ಯಮಂತ್ರಿ ಎಂಬ ವಿಚಾರವನ್ನೂ ದೂರವಿಡುವ ಇನ್ನೊಂದು ಪ್ರಯತ್ನ ಇದರಲ್ಲಿದೆ. ಕರ್ನಾಟಕದ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಎಂಬ ಇನ್ನೊಂದು ಸಂದೇಶವನ್ನೂ ಅವರು ಪಕ್ಷದ ದೆಹಲಿ ಹೈಕಮಾಂಡ್‍ಗೆ ಕಳುಹಿಸಲು ಮುಂದಾಗಿದ್ದಾರೆ ಎಂದು ತಿಳಿಸಿದರು.
2013ರಲ್ಲಿ ಸ್ಪರ್ಧಿಸಿದಾಗ ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧೆ ಇಲ್ಲ ಎಂದ ಸಿದ್ದರಾಮಯ್ಯ, 2018ರಲ್ಲಿ ತಾವೂ ಸ್ಪರ್ಧಿಸಿ ಮಗನಿಗೂ ಸೀಟು ಕೊಡಿಸಿದರು. ಬಾದಾಮಿಯಲ್ಲಿ ಕನಿಷ್ಠ ಮತಗಳ ಅಂತರದಿಂದ ಗೆದ್ದು ಬಂದರು. ಈಗಲೂ ನಾನೇ ಮುಖ್ಯಮಂತ್ರಿ ಎನ್ನುವುದು ಅಧಿಕಾರದಾಹದ ಸಂಕೇತವಲ್ಲವೇ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಹೈಕಮಾಂಡ್ ಪತನದ ಪುರಾವೆ ಇದು- ಎಂ.ಜಿ. ಮಹೇಶ್
ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ. ಮಹೇಶ್ ಮಾತನಾಡಿ, “ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಬಹಳ ಶಕ್ತಿಶಾಲಿ ಎಂದು ಜನ ಭಾವಿಸಿದ್ದ ಕಾಲಘಟ್ಟ ಇತ್ತು. ಆದರೆ, ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನ ಮತ್ತು ಸಿದ್ದರಾಮಯ್ಯನವರ ಜನ್ಮ ದಿನೋತ್ಸವವನ್ನು ಸಿದ್ದರಾಮೋತ್ಸವ ಎಂಬಂತೆ ಅವರೇ ಆಚರಿಸಿ ಕಾಂಗ್ರೆಸ್ ಹೈಕಮಾಂಡ್‍ಗೆ ಒಂದು ಸಂದೇಶ ಕಳುಹಿಸುತ್ತಿದ್ದಾರೆ. ನಾಯಿ ಬಾಲ ಅಲ್ಲಾಡಿಸುವುದು ಸಹಜ ಪ್ರಕ್ರಿಯೆ. ಬಾಲವೇ ನಾಯಿಯನ್ನು ಅಲ್ಲಾಡಿಸುವುದು ಅಸಹಜ ಪ್ರಕ್ರಿಯೆ. ಬಹುಶಃ ಕಾಂಗ್ರೆಸ್ ಹೈಕಮಾಂಡ್ ತನ್ನನ್ನು ಕರ್ನಾಟಕದ ಮುಂದಿನ ನಾಯಕ ಎಂದು ಪ್ರಕಟಿಸಲು ಒತ್ತಡ ಹೇರುವುದು, ಕಾಂಗ್ರೆಸ್ಸನ್ನು ಬೆಳೆಸಿ ಪೋಷಿಸಿದವರನ್ನು ದೂರ ಮಾಡಿ ಮತ್ತು ಡಾ. ಪರಮೇಶ್ವರ್ ಅವರನ್ನು ದೂರ ಮಾಡಿದಂತೆ ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷರನ್ನು ದೂರವಿಡುವ ರಾಜಕೀಯದ ಕುತ್ಸಿತತನ ಇದರಲ್ಲಿ ಇದ್ದಂತೆ ಕಾಣುತ್ತಿದೆ” ಎಂದು ಅಭಿಪ್ರಾಯಪಟ್ಟರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!