ಹಿಜಾಬ್ ತೆಗೆಯಲು ಒಪ್ಪದ ವಿದ್ಯಾರ್ಥಿನಿಯರಿಂದ ತರಗತಿಗಳ ಬಹಿಷ್ಕಾರ

ಹೊಸದಿಗಂತ ವರದಿ,ಚಿತ್ರದುರ್ಗ

ಕಳೆದ ಹಲವು ದಿನಗಳಿಂದ ರಾಜ್ಯದ ವಿವಿಧೆಡೆಗಳಲ್ಲಿ ಸದ್ದು ಮಾಡುತ್ತಿದ್ದ ಹಿಜಾಬ್ ವಿವಾದ ಬುಧವಾರ ಚಿತ್ರದುರ್ಗದಲ್ಲಿ ಕಂಡುಬಂತು. ನಿನ್ನೆ ಹಿರಿಯೂರಿನಲ್ಲಿ ಉಂಟಾಗಿದ್ದ ಗೊಂದಲ ಇಂದು ಚಿತ್ರದುರ್ಗಕ್ಕೆ ಹಬ್ಬಿತ್ತು. ವಿವಾದದ ಹಿನ್ನೆಲೆಯಲ್ಲಿ ಪ್ರೌಢಶಾಲೆ, ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಬುಧವಾರ ಪುನರ್ ಆರಂಭಿಸಿದ ವಿದ್ಯಾರ್ಥಿನಿಯರು ತರಗತಿಗಳಿಗೆ ಹಾಜರಾಗಲು ಬಂದಿದ್ದರು.
ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಯ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಆಗಮಿಸಿದ್ದರು. ಇದನ್ನು ಕಂಡ ಸಿಬ್ಬಂದಿ ವಿದ್ಯಾರ್ಥಿನಿಯರಿಗೆ ಹಿಜಾಬ್ ತೆಗೆದು ತರಗತಿಗಳಿಗೆ ಹಾಜರಾಗುವಂತೆ ಸೂಚಿಸಿದರು. ಇದಕ್ಕೆ ವಿದ್ಯಾರ್ತಿನಿಯರು ಒಪ್ಪಲಿಲ್ಲ. ಬಳಿಕ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಶೋಭಾ ವಿದ್ಯಾರ್ಥಿನಿಯರ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ಯಾವುದೇ ಪ್ರಯೋಜವಾಗಲಿಲ್ಲ.
ಕಳೆದ ಕೆಲವು ದಿನಗಳ ಹಿಂದೆ ಹೈಕೋರ್ಟ್ ಸಮವಸ್ತ್ರ ಧರಿಸುವಂತೆ ಮಧ್ಯಂತರ ಆದೇಶ ಮಾಡಿದೆ. ಸಮವಸ್ತ್ರದ ಜೊತೆಗೆ ಇತರೆ ಯಾವುದೇ ಬೇರೆಯ ವಸ್ತ್ರಗಳನ್ನು ಧರಿಸುವಂತಿಲ್ಲ ಎಂದು ಆದೇಶಿಸಿದೆ. ಹಾಗಾಗಿ ಪ್ರತಿಯೊಬ್ಬರೂ ನ್ಯಾಯಾಲಯದ ಆದೇಶ ಪಾಲಿಸಬೇಕೆಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಶೋಭಾ ವಿದ್ಯಾರ್ಥಿನಿಯರಿಗೆ ತಿಳಿಹೇಳಿದರು. ಆದರೆ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡಲಿಲ್ಲ.
ತರಗತಿಗಳನ್ನು ಬಹಿಷ್ಕರಿಸಿದ ವಿದ್ಯಾರ್ಥಿನಿಯರು ಬಳಿಕ ಜಿಲ್ಲಾಧಿಕಾರಿ ಕಚೇರಿಯತ್ತ ಸಾಗಿದರು. ಜಿಲ್ಲಾಧಿಕಾರಿ ಕಚೇರಿ ಆವರಣದ ಗೇಸ್‌ನಲ್ಲಿ ಪೊಲೀಸರು ವಿದ್ಯಾರ್ಥಿನಿಯರನ್ನು ತಡೆದು ನಿಲಿಸಿದರು. ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಲು ಅವಕಾಶ ನೀಡಬೇಕೆಂದು ಪೊಲೀಸರ ಜೊತೆ ವಾಗ್ವಾದ ನಡೆಸಿದರು. ಬಳಿಕ ಪೊಲೀಸರು ವಿದ್ಯಾರ್ಥಿನಿಯರನ್ನು ಜಿಲ್ಲಾಧಿಕಾರಿ ಕಚೇರಿಗೆ ಕರೆದೊಯ್ದರು.
ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ವಿದ್ಯಾರ್ಥಿನಿಯರ ಜೊತೆ ಮಾತುಕತೆ ನಡೆಸಿದರು. ಸಂವಿದಾನವನ್ನು ಗೌರವಿಸಬೇಕು. ಹೈಕೋರ್ಟ್ ಆದೇಶವನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿದ್ಯಾರ್ಥಿನಿಯರು, ನಾವು ಮೊದಲಿನಿಂದಲೂ ಹಿಜಾಬ್ ಧರಿಸಿ ಶಾಲೆಗಳಿಗೆ ಹೋಗುತ್ತಿದ್ದೇವೆ. ಆದರೆ ಈಗ ಇದನ್ನು ಧರಿಸದಂತೆ ನಿರ್ಬಂಧಿಸಲಾಗುತ್ತಿದೆ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ, ಸಮಾಜದ ಹಿತದೃಷ್ಠಿಯಿಂದ ಕಾಲ ಕಾಲಕ್ಕೆ ಹೊಸ ಹೊಸ ಕಾನೂನುಗಳನ್ನು ಜಾರಿ ಮಾಡಲಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕಾನೂನುಗಳನ್ನು ಗೌರವಿಸಬೇಕು. ಅವುಗಳನ್ನು ಪಾಲಿಸಬೇಕು. ಹಾಗಾಗಿ ಎಲ್ಲರೂ ಹೈಕೋರ್ಟ್ ಆದೇಶಕ್ಕೆ ಮನ್ನಣೆ ನೀಡಬೇಕೆಂದು ತಿಳಿಹೇಳಿದರು. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ವಿದ್ಯಾರ್ಥಿನಿಯರು ತಮ್ಮ ತಮ್ಮ ಮನೆಗಳತ್ತ ತೆರಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!