September 25, 2026
Friday, September 25, 2026
spot_img

ಯುಪಿಯಲ್ಲಿ ತಯಾರಾಗುವ ಬ್ರಹ್ಮೋಸ್ ಮಿಸೈಲ್ ಶತ್ರು ರಾಷ್ಟ್ರಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ: ಅಮಿತ್ ಶಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆಯುತ್ತಿರುವ ‘ಯುಪಿ ಇಂಟರ್ನ್ಯಾಷನಲ್ ಟ್ರೇಡ್ ಶೋ 2026’ ಮಹಾಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇಶದ ರಕ್ಷಣಾ ವಲಯದಲ್ಲಿ ಆಗಿರುವ ಹೈಟೆಕ್ ಬದಲಾವಣೆಗಳನ್ನು ಜಾಗತಿಕ ವೇದಿಕೆಯ ಮುಂದೆ ಇಟ್ಟಿದ್ದಾರೆ.

ಒಂದು ಕಾಲದಲ್ಲಿ ಅಪರಾಧ ಲೋಕಕ್ಕೆ ಹೆಸರಾಗಿದ್ದ ಉತ್ತರ ಪ್ರದೇಶದಲ್ಲಿ ಇಂದು ಅತ್ಯಾಧುನಿಕ ರಕ್ಷಣಾ ಸಾಮಗ್ರಿಗಳು ತಯಾರಾಗುತ್ತಿದ್ದು, ಇದು ಇಡೀ ದೇಶದ ಕೈಗಾರಿಕಾ ಕ್ರಾಂತಿಯ ಸಂಕೇತವಾಗಿದೆ ಎಂದು ಅವರು ಹೆಮ್ಮೆಯಿಂದ ಹೇಳಿದ್ದಾರೆ.

ಉಗ್ರರ ನಿದ್ದೆಗೆಡಿಸಿದ ಯುಪಿ ಅಸ್ತ್ರಗಳು

ಉತ್ತರ ಪ್ರದೇಶದ ರಕ್ಷಣಾ ಕಾರಿಡಾರ್‌ನ ಯಶೋಗಾಥೆಯನ್ನು ಬಿಚ್ಚಿಟ್ಟ ಅಮಿತ್ ಶಾ, ʼಇಂದು ಯುಪಿಯಲ್ಲಿ ತಯಾರಾಗುತ್ತಿರುವ ಭೀಕರ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿಗಳು ಗಡಿಯ ಆಚೆಗಿನ ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ನಿದ್ದೆಯಿಲ್ಲದಂತೆ ಮಾಡಿವೆ. ಇದು ಪ್ರಧಾನಿ ಮೋದಿ ನಾಯಕತ್ವದಲ್ಲಿ ಭಾರತ ಮತ್ತು ಉತ್ತರ ಪ್ರದೇಶ ಹೊಂದಿರುವ ರಕ್ಷಣಾ ತಾಕತ್ತಿಗೆ ಅಸಲಿ ಸಾಕ್ಷಿಯಾಗಿದೆ. ಹಾಗೆಯೇ ಅಮೇಥಿ ಫ್ಯಾಕ್ಟರಿಯಲ್ಲಿ ಸ್ವದೇಶಿಯಾಗಿ ಸಿದ್ಧವಾಗುತ್ತಿರುವ ಎಕೆ-203 ಅಸಾಲ್ಟ್ ರೈಫಲ್‌ಗಳು ದೇಶದ ಒಳಗಿರುವ ನಕ್ಸಲರು ಹಾಗೂ ಉಗ್ರರ ಎದೆಯಲ್ಲಿ ನಡುಕ ಹುಟ್ಟಿಸುತ್ತಿವೆ ಎಂದು ತಿಳಿಸಿದ್ದಾರೆ.

ಆರು ಪ್ರಮುಖ ಕೇಂದ್ರಗಳಲ್ಲಿ ಭಾರೀ ಹೂಡಿಕೆ

ಉತ್ತರ ಪ್ರದೇಶದ ರಕ್ಷಣಾ ಕೈಗಾರಿಕಾ ಕಾರಿಡಾರ್‌ನ ಎಲ್ಲಾ ಆರು ಪ್ರಮುಖ ಕೇಂದ್ರಗಳಾದ ಝಾನ್ಸಿ, ಚಿತ್ರಕೂಟ, ಲಕ್ನೋ, ಆಗ್ರಾ, ಅಲಿಗಢ್ ಮತ್ತು ಕಾನ್ಪುರಗಳಲ್ಲಿ ಇಂದು ವಿಶ್ವದ ದೊಡ್ಡ ದೊಡ್ಡ ಕಂಪನಿಗಳಿಂದ ಭಾರೀ ಬಂಡವಾಳ ಹರಿದುಬರುತ್ತಿದೆ. ಇದು ಕೇವಲ ಉತ್ತರ ಪ್ರದೇಶಕ್ಕೆ ಸೀಮಿತವಾಗದೆ ಇಡೀ ಭಾರತದ ಆರ್ಥಿಕ ಮತ್ತು ಕೈಗಾರಿಕಾ ವಿಸ್ತರಣೆಗೆ ಭದ್ರ ಬುನಾದಿ ಹಾಕಿದೆ ಎಂದು ಗೃಹ ಸಚಿವರು ವಿಶ್ಲೇಷಿಸಿದ್ದಾರೆ.

ಇದನ್ನೂ ಓದಿ:

ಕಾಮಾಲೆ ಕಣ್ಣಿನವರಿಗೆ ಪ್ರಗತಿ ಕಾಣಲ್ಲ

ದೇಶದ ಪ್ರಗತಿಯನ್ನು ಸದಾ ಟೀಕಿಸುವ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ʼಯಾರಿಗೆ ಕಾಮಾಲೆ ಕಣ್ಣಿದೆಯೋ ಅಂತವರಿಗೆ ಭಾರತದ ಅಭಿವೃದ್ಧಿಯನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರಧಾನಿ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ನಾವು ಜಗತ್ತಿನ ಪ್ರಮುಖ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದ್ದೇವೆ. ಇವು ನಮ್ಮ ದೇಶೀಯ ಕೈಗಾರಿಕೆಗಳ ರಫ್ತು ಸಾಮರ್ಥ್ಯವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿವೆ. ಎಂತಹದೇ ಸವಾಲುಗಳು ಎದುರಾದರೂ ಭಾರತದ ಆರ್ಥಿಕತೆಯ ವೇಗ ಕುಗ್ಗುವುದಿಲ್ಲ ಎಂದು ಹೇಳಿದ್ದಾರೆ.

Must Read