ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಉದ್ಯಮ ವಿಸ್ತರಣೆಗೆ ಅದಾನಿ ಸಮೂಹ ಸಂಸ್ಥೆ ಮುಂದಾಗಿದೆ. ಪಶ್ಚಿಮ ಬಂಗಾಳದಲ್ಲಿ ಮುಂಬರುವ ಒಂದು ದಶಕದಲ್ಲಿ (10 ವರ್ಷಗಳು) ಬರೋಬ್ಬರಿ 1 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಬಂಡವಾಳವನ್ನು ಹೂಡಿಕೆ ಮಾಡಲು ಅದಾನಿ ಗ್ರೂಪ್ ನಿರ್ಧರಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಗೌತಮ್ ಅದಾನಿ ಗುರುವಾರ ಅಧಿಕೃತವಾಗಿ ಘೋಷಿಸಿದ್ದಾರೆ.
ಕೋಲ್ಕತ್ತಾದಲ್ಲಿ ಜರುಗಿದ ಪ್ರತಿಷ್ಠಿತ ಐಸಿಸಿ (ICC) ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಅವರು ಈ ಐತಿಹಾಸಿಕ ಆರ್ಥಿಕ ನೀಲನಕ್ಷೆಯನ್ನು ದೇಶದ ಮುಂದೆ ಇಟ್ಟಿದ್ದಾರೆ.
ಯಾವೆಲ್ಲಾ ವಲಯಗಳಲ್ಲಿ ಹೂಡಿಕೆಯಾಗಲಿದೆ?
ಬಂಗಾಳದ ಮೇಲಿನ ತಮ್ಮ ಒಡನಾಟ ಕೇವಲ ಒಂದೆರಡು ಪ್ರಾಜೆಕ್ಟ್‌ಗಳಿಗೆ ಸೀಮಿತವಾಗಿಲ್ಲ ಎಂದ ಗೌತಮ್ ಅದಾನಿ, ಇಡೀ ರಾಜ್ಯದ ಮೂಲಸೌಕರ್ಯವನ್ನೇ ಬದಲಿಸುವ ನಿಟ್ಟಿನಲ್ಲಿ ಈ ಬೃಹತ್ ಹಣವನ್ನು ವಿನಿಯೋಗಿಸಲಾಗುವುದು ಎಂದಿದ್ದಾರೆ. ಈ ಮಹಾ ಹೂಡಿಕೆಯು ಪ್ರಮುಖವಾಗಿ ಬಂದರುಗಳು, ಸಾಗಣಿಕೆ ಮತ್ತು ಲಾಜಿಸ್ಟಿಕ್ಸ್, ವಿದ್ಯುತ್ ಉತ್ಪಾದನೆ ಮತ್ತು ವಿತರಣೆ, ಹೆದ್ದಾರಿಗಳು, ಸೇತುವೆಗಳು ಮತ್ತು ರೋಪ್‌ವೇಗಳು, ಪರಿಸರಸ್ನೇಹಿ ಗ್ರೀನ್ ಸಿಮೆಂಟ್ ಕಾರ್ಖಾನೆಗಳು ಹಾಗೂ ಕೃತಕ ಬುದ್ಧಿಮತ್ತೆಗೆ ಪೂರಕವಾಗಿ ಕೆಲಸ ಮಾಡುವ ಅತ್ಯಾಧುನಿಕ ಹೈಪರ್‌ಸ್ಕೇಲ್ ಡೇಟಾ ಸೆಂಟರ್‌ಗಳ ಸ್ಥಾಪನೆಗೆ ಬಳಕೆಯಾಗಲಿದೆ.
ದೇಶದ ಬೆಳವಣಿಗೆಗೆ ಪೂರ್ವ ಭಾರತದ ಏಳಿಗೆ ಅಗತ್ಯ
ಭಾರತದ ಆರ್ಥಿಕ ಇತಿಹಾಸವನ್ನು ವಿಶ್ಲೇಷಿಸಿದ ಅದಾನಿ, ಕಳೆದ ಕೆಲವು ದಶಕಗಳಿಂದ ಭಾರತದ ಆರ್ಥಿಕ ವೇಗಕ್ಕೆ ದಕ್ಷಿಣ ಮತ್ತು ಪಶ್ಚಿಮ ರಾಜ್ಯಗಳು ಪ್ರಮುಖ ಶಕ್ತಿಯಾಗಿದ್ದವು. ಆದರೆ, ಭಾರತವು ಮುಂದಿನ ಟ್ರಿಲಿಯನ್ ಡಾಲರ್ ಆರ್ಥಿಕತೆಯ ಮೈಲಿಗಲ್ಲು ತಲುಪಬೇಕಾದರೆ ಮತ್ತು ‘ವಿಕಸಿತ ಭಾರತ’ದ ಕನಸು ನನಸಾಗಬೇಕಾದರೆ ಪೂರ್ವ ಭಾರತ ಹಾಗೂ ಅದರಲ್ಲಿಯೂ ಮುಖ್ಯವಾಗಿ ಪಶ್ಚಿಮ ಬಂಗಾಳ ರಾಜ್ಯದ ಸಾಮರ್ಥ್ಯ ಜಾಗತಿಕ ಮಟ್ಟಕ್ಕೆ ಏರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಒಡಿಶಾ, ಜಾರ್ಖಂಡ್, ಛತ್ತೀಸ್‌ಗಢ ಮತ್ತು ಈಶಾನ್ಯ ರಾಜ್ಯಗಳನ್ನು ಒಳಗೊಂಡಂತೆ ಆಗ್ನೇಯ ಏಷ್ಯಾದ ಮಾರುಕಟ್ಟೆಗೆ ಬಂಗಾಳವು ದೇಶದ ಪ್ರಮುಖ ಕನೆಕ್ಟಿಂಗ್ ಹಬ್ ಆಗಿ ಹೊರಹೊಮ್ಮಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಡವರಿಗಾಗಿ ‘ಅದಾನಿ ಆರೋಗ್ಯ ಮಂದಿರ’
ಕೇವಲ ವ್ಯಾಪಾರ ಮಾತ್ರವಲ್ಲದೆ ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ನ್ಯೂ ಟೌನ್‌ನಲ್ಲಿ ಬರೋಬ್ಬರಿ 2,000 ಹಾಸಿಗೆಗಳ ಬೃಹತ್ ‘ಅದಾನಿ ಆರೋಗ್ಯ ಮಂದಿರ’ ವೈದ್ಯಕೀಯ ಸಂಸ್ಥೆಯನ್ನು ಸ್ಥಾಪಿಸುವುದಾಗಿ ಗೌತಮ್ ಅದಾನಿ ಪ್ರಕಟಿಸಿದ್ದಾರೆ. ವಿಶೇಷವೆಂದರೆ, ಈ ಆಸ್ಪತ್ರೆಯ ಒಟ್ಟು ಹಾಸಿಗೆಗಳಲ್ಲಿ ಶೇಕಡಾ 50ರಷ್ಟು ಭಾಗವನ್ನು ಆರ್ಥಿಕವಾಗಿ ಹಿಂದುಳಿದ, ದುಬಾರಿ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲದ ಬಡ ಜನ ಸಾಮಾನ್ಯರ ಉಚಿತ ಚಿಕಿತ್ಸೆಗಾಗಿ ಸಂಪೂರ್ಣವಾಗಿ ಮೀಸಲಿಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ:
ಜಾಗತಿಕವಾಗಿ ಪೂರೈಕೆ ಸರಪಳಿಗಳು ಬದಲಾಗುತ್ತಿರುವ ಈ ಹೊತ್ತಿನಲ್ಲಿ, ದೇಶದಲ್ಲಿ ಮುಂಚಿತವಾಗಿಯೇ ಡಿಜಿಟಲ್ ಹಾಗೂ ಭೌತಿಕ ಮೂಲಸೌಕರ್ಯಗಳನ್ನು ಸೃಷ್ಟಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಹೇಳುವ ಮೂಲಕ ಅದಾನಿ ಗ್ರೂಪ್ ಇಡೀ ಏಷ್ಯಾ ಖಂಡದಲ್ಲೇ ಅತಿ ದೊಡ್ಡ ಡೇಟಾ ಸೆಂಟರ್ ಆರ್ಡರ್ ಬುಕ್ ಹೊಂದಿರುವ ಹೆಮ್ಮೆಯ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.



