Thursday, March 30, 2023

Latest Posts

ಸಾವಿಗೇ ಸವಾಲು ಹಾಕಿದ ʼಪರಮ ವೀರʼನ ಶೌರ್ಯಗಾಥೆ

-ಗಣೇಶ ಭಟ್‌, ಗೋಪಿನಮರಿ

ಕೆಲವರ ಛಾತಿ ಎಂತಹದ್ದಾಗಿರುತ್ತದೆಂದರೆ ಪ್ರತಿಯೊಬ್ಬ ಮನುಷ್ಯನೂ‌ ಅಂತಿಮವಾಗಿ ಹೆದರುವ ‘ಮೃತ್ಯು’ವೂ ಅವರೆದೆರು ಒಂದು‌ ಕ್ಷಣ ನತಮಸ್ತಕವಾಗಿಬಿಡುತ್ತದೆ. ಈತ ಅಂತ ಅಪ್ರತಿಮ‌ವೀರರ ಸಾಲಿಗೆ ಸೇರಿದವನು. ಹೆಸರು ಮನೋಜ್ ಕುಮಾರ್ ಪಾಂಡೆ….

“ನನ್ನ ರಕ್ತದ ತಾಕತ್ತನ್ನು ತೋರಿಸುವ ಮೊದಲೇ ಮೃತ್ಯುವೇನಾದರೂ ಎದುರಾದರೆ, ಆ ಮೃತ್ಯುವನ್ನೇ ಸಾಯಿಸಿಬಿಡುತ್ತೇನೆ” ಎಂದು ಆತ ಡೈರಿಯಲ್ಲಿ‌ ಬರೆದುಕೊಂಡಿದ್ದನೆಂದರೆ ಆತನ ಎದೆಯಲ್ಲಿದ್ದ ಕ್ಷಾತ್ರ ತೇಜಸ್ಸು ಅದೆಂಥಹದ್ದಿರಬೇಡ. ಆತ ಸೇನೆಗೆ ಸೇರುವಾಗ ಸಂದರ್ಶನದ ಸಮಯದಲ್ಲಿ “ಬೇರೆಡೆ ಕೆಲಸ ಮಾಡಿದರೆ ಹೆಚ್ಚಿನ‌ ಸಂಬಳ‌ ಸಿಗುತ್ತದೆಯಲ್ಲ. ಆದರೂ ಸೇನೆ ಸೇರುತ್ತಿರೋದೇಕೆ?” ಎಂದು ಪ್ರಶ್ನಿಸಿದರೆ ಆತ “ನನಗೆ ಬೇಕಿರೋದು ಪರಮವೀರ ಚಕ್ರ. ಅದು ಸೇನೆಯಲ್ಲಿ ಮಾತ್ರ ಸಿಗುವಂಥದ್ದು. ಅದನ್ನು ಪಡೆಯಲೆಂದೇ ಸೇನೆ ಸೇರುತ್ತಿದ್ದೇನೆ” ಎಂದು ಉತ್ತರ ನೀಡಿದಾಗ ಸಂದರ್ಶಕರೇ ದಂಗಾಗಿದ್ದರು. ಹೇಳಿದ ಮಾತಿನಂತೆಯೇ ಆತ ಪರಮ‌ವೀರ ಚಕ್ರವನ್ನು ಪಡೆದುಕೊಂಡಿದ್ದ. ಯೌವ್ವನದಲ್ಲೇ ತಾಯಿ ಭಾರತಿಯ ರಕ್ಷಣೆಗೆಂದು ರಕ್ತದಾಹುತಿ ಕೊಟ್ಟು‌ ಬದುಕನ್ನು ಸಾರ್ಥಕಗೊಳಿಸಿ ಕೊಂಡುಬಿಟ್ಟ.

ಆತ ಹುಟ್ಟಿದ್ದು 1975ರ ಜೂನ್‌ 25ನೇ ತಾರೀಕಿನಂದು, ಉತ್ತರ ಪ್ರದೇಶದ ಸೀತಾಪುರ್ ಜಿಲ್ಲೆಯ ಕಮಲಾಪುರ ತಾಲೂಕಿನ ರೂಧಾ ಗ್ರಾಮದ  ಶ್ರೀ ಗೋಪಿ ಚಂದ್ ಪಾಂಡೆ ಮತ್ತು ಶ್ರೀಮತಿ ಮೋಹಿನಿ ಪಾಂಡೆಯವರ ಮಗನಾಗಿ. ಬಾಲ್ಯದಿಂದಲೂ ಧೈರ್ಯಶಾಲಿಯಾಗಿದ್ದ ಆತ ಲಕ್ನೋದ ಯುಪಿ ಸೈನಿಕ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ. ಸೈನ್ಯಕ್ಕೆ ಸೇರುವ ಉತ್ಕಟ ಬಯಕೆ ಹರೆಯದಲ್ಲಿಯೇ ಮೂಡಿ ನ್ಯಾಷನಲ್‌ ಡಿಫ಼ೆನ್ಸ್ ಅಕಾಡೆಮಿ ಸೇರಿಕೊಂಡ. 90 ನೇ ಎನ್ ಡಿ ಎ ಬ್ಯಾಚ್ ನ ವಿದ್ಯಾರ್ಥಿಯಾಗಿ ತೇರ್ಗಡೆಯಾಗಿ ಆತ 1/11ನೇ ಗೂರ್ಖಾ ರೆಜಿಮೆಂಟಿನ ಅಧಿಕಾರಿಯಾಗಿ ನಿಯುಕ್ತಿಗೊಂಡ. ಭಾರತೀಯ ಸೇನೆಯ ಗೂರ್ಖಾ ರೆಜಿಮೆಂಟಿನ ಹೆಸರು ಇಂದಿಗೂ ಪ್ರಪಂಚದಾದ್ಯಂತ ಅನೇಕ ಸೇನೆಗಳಿಂದ ಗೌರವಿಸಲ್ಪಡುತ್ತದೆ. ಜನರಲ್ ಬಿಪಿನ್ ರಾವತ್ ಆದಿಯಾಗಿ ಪ್ರಚಂಡ ಭಾರತೀಯ ಸೇನೆಯ ಅಸಾಧಾರಣ ವೀರರಲ್ಲಿ ಬಹುತೇಕರು ಇದೇ ರೆಜಿಮೆಂಟಿನವರು. ಮನೋಜ್ ಕುಮಾರ್ ನಂಥಹ ಕೆಚ್ಚೆದೆಯ ಗಂಡುಗಲಿ ಈ ರೆಜಿಮೆಂಟಿನ ಭಾಗವಾಗಿದ್ದ.

1999 ರ ಸಮಯವದು. ಮೇ ತಿಂಗಳ ಸಮಯದಲ್ಲಿ ಪಾಕಿಸ್ತಾನಿ ಶತ್ರು‌ ಸೈನಿಕರು ಲೈನ್ ಆಫ಼್ ಕಂಟ್ರೋಲ್ ದಾಟಿ ಭಾರತದ ಗಡಿಯೊಳಗೆ ನುಸುಳಿ ಕೂತಿದ್ದರು. ಕಾರ್ಗಿಲ್ ಯುದ್ಧ ಆರಂಭವಾಗಿತ್ತು. ಪಾಕಿಸ್ತಾನಿ ಪಡೆಗಳು ಮುಷ್ಕೋಹ್, ದ್ರಾಸ್, ಕಕ್ಸರ್ ಮತ್ತು ಬತಾಲಿಕ್ ವಲಯಗಳಲ್ಲಿ 4-5 ಕಿಲೋಮೀಟರ್ ಗಳಷ್ಟು ಒಳನುಗ್ಗಿದ್ದವು. ಫಿರಂಗಿ ದಾಳಿಯಿಂದ ಅವರನ್ನು ಅಡಗುದಾಣಗಳಿಂದ ಹಿಮ್ಮೆಟ್ಟಿಸಲು ಸಾಧ್ಯವಿರಲಿಲ್ಲ. ಹೀಗಾಗಿ ಸೈನಿಕರನ್ನು ಕಳುಹಿಸಿ ನೇರ ದಾಳಿ ನಡುಸುವ ಆಯ್ಕೆಯೊಂದೇ ಉಳಿದಿತ್ತು. ಶತ್ರುಗಳನ್ನು ಹಿಮ್ಮೆಟ್ಟಿಸಲೇಬೇಕಿತ್ತು. ಭಾರತೀಯ ಸೇನೆ ಕಾರ್ಯಾಚರಣೆ ಶುರುವಿಟ್ಟಿತು. ಬತಾಲಿಕ್ ವಲಯದ ಖಲುಬರ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಗೂರ್ಖಾ ರೆಜಿಮೆಂಟಿನ 1/11 GR ನ ‘B’ ಕಂಪನಿಯನ್ನು ನಿಯೋಜಿಸಲಾಯಿತು. ಇದರಲ್ಲಿ ಕ್ಯಾಪ್ಟನ್ ಮನೋಜ್ ಪ್ಲಟೂನ್ ನಂ 5 ಅನ್ನು ಕಮಾಂಡರ್ ಆಗಿದ್ದ. ಈ ಹಿಂದೆ ಜೌಬರ್ ಟಾಪ್ ಅನ್ನು ವಶಪಡಿಸಿಕೊಂಡ ಮತ್ತು ಅಲ್ಲಿ ಮೊದಲ ಪೋಸ್ಟ್ ಅನ್ನು ಸ್ಥಾಪಿಸಿದ ತಂಡದ ಭಾಗವಾಗಿಯೂ ಮನೋಜ್ ಪರಾಕ್ರಮ ಮೆರೆದಿದ್ದ.

ಜುಲೈ 2 ರ ರಾತ್ರಿ ಕಳೆದು ಮುಂಜಾವು ಆರಂಭವಾಗುವುದಕ್ಕೂ ಮೊದಲು ಮನೋಜ್ ನೇತೃತ್ವದ ಪ್ಲಟೂನ್ ಶತ್ರು ಪಾಳಯದ ಮೇಲೆ ದಾಳಿಯಿಡಲು ಸಜ್ಜಾಗಿ ಹೊರಟಿತ್ತು. ಖಲುಬರ್ ಗೆ ಹೋಗುವ ದಾರಿಯಲ್ಲಿದ್ದ 19,700ಅಡಿ ಎತ್ತರದ ಪಹಲ್ವಾನ್ ಚೌಕಿಗೆ ಸಾಗುತ್ತಿರುವ ವೇಳೆ ಶತ್ರು ಸೈನಿಕರಿಗೆ ಸುಳಿವು ಸಿಕ್ಕು ಗುಂಡಿನ ದಾಳಿ ಆರಂಭವಾಯಿತು. ಎಡಬಲ ಎರಡೂ ಕಡೆಗಳಿಂಫ಼ ನಮ್ಮ ಸೈನಿಕರು ದಾಳಿಗೆ ಒಳಗಾದರು. ಕ್ಯಾಪ್ಟನ್ ಮನೋಜ್ ತನ್ನ ತುಕಡಿಯನ್ನು ತೀವ್ರ ಶತ್ರುಗಳ ಗುಂಡಿನ ದಾಳಿಯಲ್ಲಿ ಅನುಕೂಲಕರ ಸ್ಥಾನದೆಡೆಗೆ ಮುನ್ನೆಡೆಸಿದ, ಬಲದಿಂದ ಶತ್ರು ಸ್ಥಾನಗಳನ್ನು ತೆರವುಗೊಳಿಸಲು ಒಂದು ವಿಭಾಗವನ್ನು ಕಳುಹಿಸಿ ಸ್ವತಃ ಎಡದಿಂದ ಶತ್ರುಗಳ ಸ್ಥಾನಗಳನ್ನು ತೆರವುಗೊಳಿಸಲು ಮುಂದಾದ. ಶತ್ರುಗಳು ಭೀಕರ ಗುಂಡಿನ ದಾಳಿ ನಡೆಸುತ್ತಿದ್ದರೆ ಗೂರ್ಖಾ ರೆಜಿಮೆಂಟಿನ ‘ಜೈ ಮಹಾಕಾಳಿ, ಆಯೋ ಗೂರ್ಖಾಲಿ’ ಎಂಬ ಘೋಷವಾಕ್ಯ ಮೊಳಗಿಸಿದ ಮನೋಜ್ ನಿರ್ಭಯವಾಗಿ ಮುನ್ನಡೆದ. ಆತನ ದಾಳಿಗೆ ಎರಡು ಶತ್ರು ಬಂಕರ್ ಗಳು ನಾಶವಾಗಿದ್ದವು.

ಮೂರನೇ ಬಂಕರ್ ಅನ್ನು ತೆರವುಗೊಳಿಸುವಾಗ ಗುಂಡುಗಳ ಸುರಿಮಳೆ ಆತನ ಭುಜ ಮತ್ತು ಕಾಲುಗಳಿಗೆ ತಗುಲಿತು. ಆದರೆ ಎದೆಗುಂದದ ಮನೋಜ್ ದಾಳಿ‌ ಮುಂದುವರೆಸಿದ. ಶತ್ರುವಿನ್ ಗುಂಡುತಗುಲಿ ಆತನ ಬಲಗೈ ನೇತಾಡ ತೊಡಗಿತ್ತು. ಅಂಥಹ ಭೀಕರ ಸನ್ನಿವೇಶದಲ್ಲಿ ಆತ ತನ್ನ ಸಹಚರರ ಬಳಿ ‘ಈ ಕೈಯ ಯಾಕೋ ತೊಂದರೆ ಕೊಡುತ್ತಿದೆ. ಇದನ್ನು ನನ್ನ ಸೊಂಟಕ್ಕೆ ಕಟ್ಟುಬಿಡಿ’ ಎನ್ನುತ್ತ ತನ್ನ ಎಡಗೈಯಿಂದ ಗ್ರೆನೇಡು ತೆಗೆದು ಶತ್ರು ಬಂಕರಿನ ಕಡೆ ಎಸೆದ. ಇನ್ನೊಂದು ಗ್ರೆನೇಡು ಎಸೆಯಲು ಮುಂದಾಗುತ್ತಿರುವ ವೇಳೆ ಶತ್ರುವಿನ ಗುಂಡು ಆತನ ತಲೆಯನ್ನು ಹೊಕ್ಕಿತು. ಕುಸಿದು ಬೀಳುವಾಗಲೂ ‘ನ ಛೋಡ್ನು’ ಅರ್ಥಾತ್ ‘ಬಿಡಬೇಡಿ ಅವರನ್ನು.. ಕೊಂದುಹಾಕಿ’ ಎಂದು ಉದ್ಗರಿಸಿದ್ದ.

ಅಂತಿಮವಾಗಿ ಆತ ಭಾರತಾಂಬೆಯನ್ನು ಕಾಪಾಡುವ ಯಜ್ಞದಲ್ಲಿ ಆತ್ಮಾಹುತಿ ನೀಡಿದ. ಕ್ಯಾಪ್ಟನ್ ಮನೋಜ್ ನೇತೃತ್ವದಲ್ಲಿ ಪಡೆಗಳು ಆರು ಬಂಕರ್‌ಗಳ ಮೇಲೆ ಹಿಡಿತ ಸಾಧಿಸಿದವು. ಹನ್ನೊಂದು ಶತ್ರು ಸೈನಿಕರನ್ನು ನರಕ್ಕೆ ಅಟ್ಟಲಾಯಿತು.ಖಲುಬರ್‌ ಅಂತಿಮವಾಗಿ ನಮ್ಮ ವಶವಾಯಿತು. ಆತನ ಈ ಅಪ್ರತಿಮ ಶೌರ್ಯಕ್ಕೆ ದೇಶದ ಅತ್ಯುನ್ನತ ಶೌರ್ಯ ಪ್ರಶಸ್ತಿ ʼಪರಮ ವೀರ ಚಕ್ರʼವನ್ನು ನೀಡಿ ಗೌರವಿಸಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!