August 6, 2026
Thursday, August 6, 2026
spot_img

ʼಫ್ರೀಡಂ ಹಬ್ಬʼಕ್ಕೆ ಸಜ್ಜಾದ ರಾಜಧಾನಿ: ಸ್ವಾತಂತ್ರ್ಯ ದಿನದಂದು ಬೆಂಗಳೂರಿಗರಿಗೆ ಗಿಫ್ಟ್‌ ಕೊಟ್ಟ ಜಿಬಿಎ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸರ್ಕಾರಿ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿದ್ದ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದ ಹಬ್ಬದಂತೆ ಆಚರಿಸಲು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಇದೇ ಮೊದಲ ಬಾರಿಗೆ ʼಫ್ರೀಡಂ ಹಬ್ಬʼವನ್ನು ಆಯೋಜಿಸುತ್ತಿದೆ.

ಈ ಹಬ್ಬದಂದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ನಮ್ಮ ಸ್ವಾತಂತ್ರ್ಯ ದಿನವನ್ನು ನೆನಪಿನಂಗಳಲ್ಲಿ ಅಚ್ಚಳಿಯುವಂತೆ ಮಾಡಬೇಕೆಂದು ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ. ಆಗಸ್ಟ್‌ 15ರಂದು ಬೆಳಗ್ಗೆ 11 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ವಿಧಾನಸೌಧದ ಸುತ್ತಮುತ್ತ ವಿಭಿನ್ನ ಕಾರ್ಯಕ್ರಮಗಳು ನಡೆಯಲಿವೆ. ಸಾರ್ವಕನಿಕರು ಆಗಮಿಸಿ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ.

ದೇಶದ ಹುಟ್ಟುಹಬ್ಬ ಆಚರಿಸೋಣ್ವಾ?

ಪ್ರತೀ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ನಮ್ಮ ನಾಡಿನಲ್ಲಿ ದೇಶದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸದೇ ಇದ್ದರೆ ಹೇಗೆ? ಇದುವರೆಗೂ ಸರ್ಕಾರಿ ಕಾರ್ಯಕ್ರಮವನ್ನು ಜನ ವೀಕ್ಷಕರಾಗಿ ನೋಡುತ್ತಿದ್ದರು. ಆದರೆ ಈ ಬಾರಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ಇದೆ. ಇದು ನಿಮ್ಮೆಲ್ಲರ ಮನೆ ಮನೆಯ ಹಬ್ಬ. ಎಲ್ಲ ಹಬ್ಬಗಳಂತೆ ಇದನ್ನೂ ಆಚರಿಸಿ ಎಂದು ಸಚಿವರು ಕರೆ ನೀಡಿದ್ದಾರೆ.

ಬಜೆಟ್‌ ಎಷ್ಟು?

ಮೂರರಿಂದ ಐದು ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಾರ್ಯಕ್ರಮಗಳು ನಡೆಯಲಿವೆ. ಇಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ, ಗುಜರಾತಿ, ಹಿಂದಿ, ಒಡಿಯಾ ಸೇರಿದಂತೆ ಇನ್ನಿತರ ಭಾಷಾ ಸಮುದಾಯಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದೆ. ನಮ್ಮ ಕರ್ನಾಟಕದಿಂದ ಮಂಗಳೂರು ಹಾಗೂ ಉತ್ತರ ಕರ್ನಾಟಕದ ವಿವಿಧ ಸಾಂಸ್ಕೃತಿಕ ತಂಡಗಳು ಭಾಗಿಯಾಗಲಿವೆ.

ಏನೆಲ್ಲಾ ಕಾರ್ಯಕ್ರಮಗಳಿವೆ?

ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರು, ರೈತರು, ವಿಜ್ಞಾನಿಗಳು ಹಾಗೂ ಸಶಸ್ತ್ರ ಪಡೆಗಳ ಸಿಬ್ಬಂದಿ ಸೇರಿದಂತೆ ಅನೇಕರು ಪೀಪಲ್ಸ್‌ ಪರೇಡ್‌ನಲ್ಲಿ ಭಾಗಿಯಾಗಲಿದ್ದಾರೆ. ಇದರ ಜತೆಗೆ ಸ್ವಾತಂತ್ರ್ಯ ಎಂದರೆ ನಿಮಗೆ ಏನು? ಎನ್ನುವ ವಿಷಯದ ಬಗ್ಗೆ ಬರೆಯಲು ಅಥವಾ ಚಿತ್ರ ಬಿಡಿಸಲು 200 ಅಡಿ ಉದ್ದದ ಸಾರ್ವಜನಿಕ ಕಲಾ ವೇದಿಕೆ ನೀಡಲಾಗಿದೆ.

ಕರ್ನಾಟಕದ ವಿವಿಧ ಜಿಲ್ಲೆಗಳ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಪರಿಚಯಿಸುವ ವಿಶೇಷ ಪ್ರದರ್ಶನ ಇರಲಿದೆ. ಇದರ ಜೊತೆಗೆ ಪ್ರಮುಖ ಆಕರ್ಷಣೆಯಾಗಿ ಸ್ವಾತಂತ್ರ್ಯ ಹೋರಾಟದ ಪ್ರಮುಖ ಘಟ್ಟಗಳನ್ನು ಮರುಸೃಷ್ಟಿ ಮಾಡುವ ವಾತ್‌ಥ್ರೂ ಮ್ಯೂಸಿಯಂ ಕೂಡ ಇದೆ.

ಈ ಕಾರ್ಯಕ್ರಮದಲ್ಲಿ ಮಕ್ಕಳಿಗೂ ಕೂಡ ಅವಕಾಶವಿದೆ. ಅವರಿಗಾಗಿ ಕಥೆ ಹೇಳುವ ಕಾರ್ಯಕ್ರಮ, ಕಲಾ ಚಟುವಟಿಕೆ, ಕ್ರಿಯಾತ್ಮಕ ಕಾರ್ಯಾಗಾರಗಳಿವೆ. ಕುಟುಂಬದ ಜೊತೆ ಕೂಡಿ ಮಾಡುವ ವಿಶೇಷ ಕಾರ್ಯಕ್ರಮಗಳನ್ನು ಕೂಡ ಸೇರಿಸಲಾಗಿದೆ.

ಶಾಪಿಂಗ್‌ ಮಾಡಬಹುದು

ಇಲ್ಲಿ ಶಾಪಿಂಗ್‌ ಮಾಡಲು ಅವಕಾಶ ನೀಡಲಾಗಿದೆ. ಕರಕುಶಲ, ಸಾವಯವ ಉತ್ಪನ್ನ, ಆಟಿಕೆಗಳು, ಜವಳಿ, ಜೀವನಶೈಲಿ ಉತ್ಪನ್ನಗಳು, ಬಗೆಬಗೆಯ ಊಟ ತಿಂಡಿಗಳ ಸ್ಟಾಲ್‌ ಇರಲಿದೆ. ಇಡೀ ದಿನ ವಿಧಾನಸೌಧದ ಸುತ್ತಮುತ್ತ ಹಬ್ಬದ ವಾತಾವರಣ ಇರಲಿದೆ.

ಹಬ್ಬವೆಂದಮೇಲೆ ಸಂಗೀತ ಇರೋದಿಲ್ವೇ?

ವಿಧಾನಸೌಧದ ಮೆಟ್ಟಿಲುಗಳ ಮೇಲೆ ಖ್ಯಾತ ಗಾಯಕಿ ಎಂ.ಡಿ. ಪಲ್ಲವಿ, ಬ್ರೂಸ್‌ ಲೀ ಮಣಿ, ರಘು ದೀಕ್ಷಿತ್‌ ಸೇರಿದಂತೆ ಖ್ಯಾತ ಕಲಾವಿದರು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಇದಾದ ನಂತರ ಆಕರ್ಷಕ ಪಟಾಕಿ ಪ್ರದರ್ಶನ ಇರಲಿದೆ. ಇಲ್ಲಿಗೆ ಕಾರ್ಯಕ್ರಮ ಸಮಾಪ್ತಿಯಾಗಲಿದೆ.

ನೀವೂ ಭಾಗಿಯಾಗಬೇಕಾ?

ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ನೋಂದಣಿ ಮಾಡಿಕೊಳ್ಳಬೇಕಿದೆ. ಇದಕ್ಕಾಗಿಯೇ ವಿಶೇಷ ವೆಬ್‌ಸೈಟ್‌ ಹಾಗೂ ಸಹಾಯವಾಣಿ ಇರಲಿದೆ. ಇನ್ನೆರಡು ದಿನಗಳಲ್ಲಿ ರಿಜಿಸ್ಟರ್‌ ಆರಂಭವಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !