ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ ಆವೃತ್ತಿಯ ಮಧ್ಯಭಾಗದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಆನೆ ಬಲ ಬಂದಂತಾಗಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ತಂಡದ ಪ್ರಮುಖ ಆಟಗಾರ ಪ್ಯಾಟ್ ಕಮಿನ್ಸ್ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದು, ಮರಳಿ ತಂಡವನ್ನು ಸೇರಿಕೊಳ್ಳಲು ಗ್ರೀನ್ ಸಿಗ್ನಲ್ ಪಡೆದಿದ್ದಾರೆ.
ಐಪಿಎಲ್ ಆರಂಭಕ್ಕೂ ಮುನ್ನವೇ ಭಾರತಕ್ಕೆ ಬಂದಿದ್ದ ಕಮಿನ್ಸ್, ಒಂದೂ ಪಂದ್ಯ ಆಡಲಾಗಿರಲಿಲ್ಲ. ಏಪ್ರಿಲ್ 2ರಂದು ಕೆಕೆಆರ್ ವಿರುದ್ಧದ ಭರ್ಜರಿ ಗೆಲುವಿನ ನಂತರ ಅವರು ವೈದ್ಯಕೀಯ ತಪಾಸಣೆಗಾಗಿ ತಾಯ್ನಾಡು ಆಸ್ಟ್ರೇಲಿಯಾಕ್ಕೆ ಮರಳಿದ್ದರು. ಅಲ್ಲಿ ವಿವಿಧ ಸ್ಕ್ಯಾನಿಂಗ್‌ಗಳಿಗೆ ಒಳಗಾಗಿದ್ದ ಅವರಿಗೆ ಈಗ ವೈದ್ಯರು ‘ಪರಿಪೂರ್ಣ ಫಿಟ್’ ಎಂಬ ಸರ್ಟಿಫಿಕೇಟ್ ನೀಡಿದ್ದಾರೆ.
ಇನ್ನು ಎರಡೇ ದಿನಗಳಲ್ಲಿ ಕಮಿನ್ಸ್ ಭಾರತಕ್ಕೆ ಹಾರಲಿದ್ದಾರೆ. ಏಪ್ರಿಲ್ 25 ರಂದು ಜೈಪುರದಲ್ಲಿ ನಡೆಯಲಿರುವ ರಾಜಸ್ಥಾನ ರಾಯಲ್ಸ್ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಅವರು ಕಣಕ್ಕಿಳಿಯುವುದು ಖಚಿತವಾಗಿದೆ. ಈ ಸುಂದರ ಸುದ್ದಿಯನ್ನು ಕಮಿನ್ಸ್ ಅವರೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕಮಿನ್ಸ್ ಅನುಪಸ್ಥಿತಿಯಲ್ಲಿ ತಂಡವನ್ನು ಇಶಾನ್ ಕಿಶನ್ ಮುನ್ನಡೆಸುತ್ತಿದ್ದಾರೆ. ಕಿಶನ್ ಸಾರಥ್ಯದಲ್ಲಿ ಹೈದರಾಬಾದ್ ಆಡಿದ 5 ಪಂದ್ಯಗಳಲ್ಲಿ 2 ಗೆಲುವು ಸಾಧಿಸಿ, ಸದ್ಯ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.
ಕಮಿನ್ಸ್ ಬರುವ ಮುನ್ನವೇ, ಅಂದರೆ ಏಪ್ರಿಲ್ 18ರಂದು ಹೈದರಾಬಾದ್ ತನ್ನ ತವರು ಮೈದಾನದಲ್ಲಿ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದ ನಂತರ ಕಮಿನ್ಸ್ ತಂಡ ಸೇರಿಕೊಳ್ಳಲಿರುವುದು ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.



