ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರವು ‘ಬೆಂಗಳೂರು ಗುಲಾಬಿ ಈರುಳ್ಳಿ’ ರಫ್ತಿಗೆ ವಿಧಿಸಿದ್ದ ಸುಂಕದಿಂದ ವಿನಾಯಿತಿ ನೀಡಲಾಗಿದೆ.
ಬೆಂಗಳೂರು ರೋಸ್ ಈರುಳ್ಳಿಯನ್ನು ರಫ್ತು ಮಾಡುವವರು ಕರ್ನಾಟಕದ ತೋಟಗಾರಿಕೆ ಆಯುಕ್ತರಿಂದ (Horticulture Department commissioner) ಪ್ರಮಾಣ ಪತ್ರ ಪಡೆಯಬೇಕು. ರಫ್ತಾಗುವ ಈರುಳ್ಳಿ ಪ್ರಮಾಣ ಮತ್ತು ಗುಣಮಟ್ಟದ ಖಾತ್ರಿ ಒದಗಿಸುವ ಈ ಪ್ರಮಾಣಪತ್ರ ಪಡೆದಿದ್ದರೆ ಮಾತ್ರ ರಫ್ತು ಸುಂಕದಿಂದ ವಿನಾಯಿತಿ ಸಿಗುತ್ತದೆ ಎಂದು ಹಣಕಾಸು ಸಚಿವಾಲಯದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಕೆಲ ಷರತ್ತುಗಳ ಮೇಲೆ ಬೆಂಗಳೂರು ಗುಲಾಬಿ ಈರುಳ್ಳಿಯ ರಫ್ತಿಗೆ ಪೂರ್ಣಾನುಮತಿ ನೀಡಿ ಕೇಂದ್ರ ಹಣಕಾಸು ಸಚಿವಾಲಯ ಸೆಪ್ಟೆಂಬರ್ 29, ಶುಕ್ರವಾರದಂದು ಅಧಿಸೂಚನೆ ಹೊರಡಿಸಿದೆ. ಈ ಅನುಮತಿ ತತ್ಕ್ಷಣದಿಂದಲೇ ಜಾರಿ ಆಗುತ್ತದೆ ಎಂದು ನೋಟಿಫಿಕೇಶನ್ನಲ್ಲಿ ತಿಳಿಸಲಾಗಿದೆ.
ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಲಭ್ಯತೆಯನ್ನು ಸುಧಾರಿಸಲು ಮತ್ತು ಬೆಲೆ ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಆಗಸ್ಟ್ನಲ್ಲಿ ಈರುಳ್ಳಿ ರಫ್ತಿನ ಮೇಲೆ ಶೇ 40ರಷ್ಟು ಸುಂಕ ವಿಧಿಸಿತ್ತು. ‘ಬೆಂಗಳೂರು ಗುಲಾಬಿ ಈರುಳ್ಳಿ’ ಎಂಬುದು ಕರ್ನಾಟಕದ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆಯುವ ಒಂದು ಬಗೆಯ ಈರುಳ್ಳಿಯಾಗಿದೆ. ಇದು 2015ರಲ್ಲಿ ಭೌಗೋಳಿಕ ಸೂಚಕ ಟ್ಯಾಗ್ ಅನ್ನು ಪಡೆದುಕೊಂಡಿದೆ. ಅದೇ ತಿಂಗಳ ಆರಂಭದಲ್ಲಿ ಕೇಂದ್ರ ಸರ್ಕಾರವು ತನ್ನ ಮೀಸಲು ಪೂರೈಕೆಯಿಂದ ಈರುಳ್ಳಿ ಬಿಡುಗಡೆ ಮಾಡಲು ಪ್ರಾರಂಭಿಸಿತು.