ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಕಾಂಗ್ರೆಸ್‌ನಲ್ಲಿ ಸದ್ದಿಲ್ಲದೇ ನಡೆಯುತ್ತಿದ್ದ ಅಧಿಕಾರದ ಪಗಡೆಯಾಟ ಈಗ ಬೀದಿಗೆ ಬಂದಿದೆ. ಒಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಐದು ವರ್ಷ ಪೂರ್ಣಗೊಳಿಸುತ್ತಾರೆ ಎಂದು ಅವರ ಬೆಂಬಲಿಗರು ವಾದಿಸುತ್ತಿದ್ದರೆ, ಮತ್ತೊಂದೆಡೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಪಟ್ಟಾಭಿಷೇಕ ಆಗಲೇಬೇಕು ಎಂದು ಅವರ ಆಪ್ತ ಶಾಸಕರು ಪಟ್ಟು ಹಿಡಿದಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ, “ಐದು ವರ್ಷಗಳ ಕಾಲ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿರುತ್ತಾರೆ. ಈ ಹಿಂದೆ ಕೆಲವರು ಬದಲಾವಣೆಗಾಗಿ ಪ್ರಯತ್ನ ನಡೆಸಿದರಾದರೂ ಅದು ಸಕ್ಸಸ್ ಆಗಲಿಲ್ಲ,” ಎಂದು ಹೇಳುವ ಮೂಲಕ ಹೈಕಮಾಂಡ್ ಮಟ್ಟದಲ್ಲಿ ಎಲ್ಲವೂ ಫಿಕ್ಸ್ ಆಗಿದೆ ಎಂಬ ಸಂದೇಶ ರವಾನಿಸಿದ್ದಾರೆ.
ಯತೀಂದ್ರ ಅವರ ಈ ಹೇಳಿಕೆಗೆ ಡಿ.ಕೆ. ಶಿವಕುಮಾರ್ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿದ್ದಾರೆ. “ಯತೀಂದ್ರ ಅವರೇ ನಮ್ಮ ಹೈಕಮಾಂಡ್, ಅವರು ಹೇಳಿದಂತೆಯೇ ಕೇಳೋಣ,” ಎಂದು ವ್ಯಂಗ್ಯವಾಡುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಇತ್ತ ಡಿಕೆಶಿ ಆಪ್ತ ಶಾಸಕ ಇಕ್ಬಾಲ್ ಹುಸೇನ್, “ಹಿಂದಿನ ಎರಡು ಮುಹೂರ್ತಗಳು ಮಿಸ್ ಆಗಿರಬಹುದು, ಆದರೆ ಈ ಬಾರಿ ಬದಲಾವಣೆ ಖಚಿತ,” ಎಂದು ಬಾಂಬ್ ಸಿಡಿಸಿದ್ದಾರೆ.



