ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ 57ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ಪರಾಕ್ರಮ ಮೆರೆದಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಕೊಹ್ಲಿ ಕೇವಲ ಪಂದ್ಯವನ್ನು ಗೆಲ್ಲಿಸಿಕೊಟ್ಟಿಲ್ಲ, ಬದಲಾಗಿ ಕ್ರಿಕೆಟ್ ಇತಿಹಾಸದ ಹಲವು ಪುಟಗಳನ್ನು ತಿರುಗಿ ಬರೆದಿದ್ದಾರೆ.
ರಾಯ್‌ಪುರದ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬರೆದ ಆ ಪ್ರಮುಖ 10+ ದಾಖಲೆಗಳ ವಿವರ ಇಲ್ಲಿದೆ:
ವಿರಾಟ್ ಕೊಹ್ಲಿ ಕೆಕೆಆರ್ ವಿರುದ್ಧ ತಮ್ಮ 9ನೇ ಐಪಿಎಲ್ ಶತಕ ಪೂರೈಸಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸೆಂಚುರಿ ಬಾರಿಸಿದ ಆಟಗಾರ ಎಂಬ ತಮ್ಮದೇ ದಾಖಲೆಯನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಜೋಸ್ ಬಟ್ಲರ್ (7) ಮತ್ತು ಕ್ರಿಸ್ ಗೇಲ್ (6) ನಂತರದ ಸ್ಥಾನದಲ್ಲಿದ್ದಾರೆ.
ಟಿ20 ಕ್ರಿಕೆಟ್ ಮಾದರಿಯಲ್ಲಿ 14,000 ರನ್ ಗಡಿಯನ್ನು ದಾಟಿದ ವಿಶ್ವದ 6ನೇ ಮತ್ತು ಭಾರತದ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.
ಕೇವಲ 409 ಇನ್ನಿಂಗ್ಸ್‌ಗಳಲ್ಲಿ 14,000 ರನ್ ಪೂರೈಸುವ ಮೂಲಕ ವಿರಾಟ್ ಕೊಹ್ಲಿ ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ ಈ ದಾಖಲೆ ವೆಸ್ಟ್ ಇಂಡೀಸ್‌ನ ದೈತ್ಯ ಕ್ರಿಸ್ ಗೇಲ್ (423 ಇನ್ನಿಂಗ್ಸ್) ಹೆಸರಿನಲ್ಲಿತ್ತು.
ಇದು ವಿರಾಟ್ ಕೊಹ್ಲಿ ಅವರ 279ನೇ ಐಪಿಎಲ್ ಪಂದ್ಯ. ಈ ಮೂಲಕ ಎಂ.ಎಸ್. ಧೋನಿ ಮತ್ತು ರೋಹಿತ್ ಶರ್ಮಾ (ತಲಾ 278 ಪಂದ್ಯ) ಅವರ ದಾಖಲೆಯನ್ನು ಮೀರಿ, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎನಿಸಿಕೊಂಡಿದ್ದಾರೆ. ವಿಶೇಷವೆಂದರೆ ಇವೆಲ್ಲವೂ ಒಂದೇ ಫ್ರಾಂಚೈಸಿ ಪರ ಎಂಬುದು ಗಮನಾರ್ಹ.
ಐಪಿಎಲ್ ಇತಿಹಾಸದ ಬರೋಬ್ಬರಿ 12 ಸೀಸನ್‌ಗಳಲ್ಲಿ 400ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಬ್ಯಾಟರ್ ಎಂಬ ಅಸಾಧಾರಣ ದಾಖಲೆಯನ್ನು ಕೊಹ್ಲಿ ಬರೆದಿದ್ದಾರೆ. ಇದು ಅವರ ಸ್ಥಿರತೆಗೆ ಸಾಕ್ಷಿಯಾಗಿದೆ.
ಐಪಿಎಲ್‌ನಲ್ಲಿ ತಮ್ಮ 21ನೇ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ವಿರಾಟ್ ಕೊಹ್ಲಿ ಅವರು ರೋಹಿತ್ ಶರ್ಮಾ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ರನ್ ಬೆನ್ನತ್ತುವಾಗ ವಿರಾಟ್ ಸಿಡಿಸಿದ 3ನೇ ಐಪಿಎಲ್ ಶತಕ ಇದಾಗಿದೆ. ಈ ಮೂಲಕ ಚೇಸಿಂಗ್ ವೇಳೆ ಅತಿ ಹೆಚ್ಚು ಶತಕ ಬಾರಿಸಿದ ಜೋಸ್ ಬಟ್ಲರ್ ದಾಖಲೆಯನ್ನು ವಿರಾಟ್ ಸಮಗಟ್ಟಿದ್ದಾರೆ.
ಒಟ್ಟಾರೆ ಟಿ20 ಕ್ರಿಕೆಟ್ ಮಾದರಿಯಲ್ಲಿ ವಿರಾಟ್ ಕೊಹ್ಲಿಗೆ ಇದು 10ನೇ ಶತಕ. ಈ ಮೂಲಕ ಟಿ20 ಮಾದರಿಯಲ್ಲಿ ಎರಡಂಕಿ ಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಇತಿಹಾಸ ಸೃಷ್ಟಿಸಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಐಪಿಎಲ್‌ನಲ್ಲಿ 9ನೇ ಬಾರಿಗೆ 50ಕ್ಕೂ ಹೆಚ್ಚು ರನ್ ಗಳಿಸಿದ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಡೇವಿಡ್ ವಾರ್ನರ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಈ ಪಂದ್ಯದಲ್ಲಿ ಅಜೇಯ 105 ರನ್ ಬಾರಿಸಿದ ಕೊಹ್ಲಿ, ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಮೈದಾನದಲ್ಲಿ ಟಿ20 ಪಂದ್ಯವೊಂದರಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
ಸತತ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ (0) ಔಟಾದ ನಂತರದ ಪಂದ್ಯದಲ್ಲೇ ಶತಕ ಬಾರಿಸಿದ ಐಪಿಎಲ್‌ನ ಮೊದಲ ಬ್ಯಾಟರ್ ಎಂಬ ಅಪರೂಪದ ದಾಖಲೆಯನ್ನು ಕಿಂಗ್ ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ.



