ತೈವಾನ್ ಗುರಿಯಾಗಿಸಿ ಹಾರಿಸಿದ ಚೀನಾ ಕ್ಷಿಪಣಿ ಜಪಾನ್‌ನ ಆರ್ಥಿಕ ವಲಯದಲ್ಲಿ ಲ್ಯಾಂಡ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ತೈವಾನ್ ದ್ವೀಪರಾಷ್ಟ್ರವನ್ನು ಸುತ್ತುವರೆದಿರುವ ಚೀನಾ, ಬೃಹತ್ ಪ್ರಮಾಣದ ಲೈವ್ ಫೈರ್ ಮಿಲಿಟರಿ ಡ್ರಿಲ್ (ಮಿಲಿಟರಿ ಅಭ್ಯಾಸ) ನಡೆಸುತ್ತಿದೆ.

ತೈವಾನ್‌ನ ಗಡಿಯನ್ನು ಗುರಿಯಾಗಿಸಿಕೊಂಡು ಚೀನಾದ ಸೇನೆ ಹಾರಿಸಿದ್ದ ಐದು ಖಂಡಾಂತರ ಕ್ಷಿಪಣಿಗಳು ಜಪಾನ್‌ನ ಆರ್ಥಿಕ ವಲಯದಲ್ಲಿ ಲ್ಯಾಂಡ್‌ ಆಗಿದೆ. ಜಪಾನ್‌ನ ಸರ್ಕಾರ ಹಾಗೂ ಮಾಧ್ಯಮಗಳು ಕೂಡ ಖಚಿತಪಡಿಸಿದ್ದು, ಇದರ ಬೆನ್ನಲ್ಲಿಯೇ ಚೀನಾಕ್ಕೆ ಎಚ್ಚರಿಕೆಯನ್ನೂ ನೀಡಿದೆ.

ಅಮೆರಿಕದ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ತೈವಾನ್‌ಗೆ ಭೇಟಿ ನೀಡಿದ ಕುರಿತಾಗಿ ತೈವಾನ್‌ಗೆ ಎಚ್ಚರಿಕೆ ನೀಡುವ ನಿಟ್ಟಿನಲ್ಲಿ ಚೀನಾ ಗುರುವಾರದಿಂದ ತೈವಾನ್‌ನ ಆರೂ ಭಾಗಗಳಲ್ಲಿ ಸೇನಾ ಸಮರಾಭ್ಯಾಸ ಶುರು ಮಾಡಿದೆ.

ಭಾನುವಾರದವರೆಗೆ ಡ್ರಿಲ್ ನಡೆಯಲಿದ್ದು, ಈ ಅವಧಿಯಲ್ಲಿ ವಿಮಾನಗಳು ಮತ್ತು ಹಡಗುಗಳು ಈ ಪ್ರದೇಶದಲ್ಲಿ ಸುಳಿದಾಡದಂತೆ ಇತರ ರಾಷ್ಟ್ರಗಳಿಗೆ ಚೀನಾ ಎಚ್ಚರಿಕೆ ರವಾನಿಸಿದೆ.

ಚೀನಾದ ಕ್ಷಿಪಣಿಗಳು ಜಪಾನ್‌ನ ಪ್ರದೇಶದಲ್ಲಿ ಬಿದ್ದಿರುವುದು ಇದೇ ಮೊದಲಾಗಿದೆ. ಜಿ7 ತೈವಾನ್ ಹೇಳಿಕೆಯ ಮೇಲೆ ಚೀನಾ ಜಪಾನ್ ಜೊತೆಗಿನ ತನ್ನ ದ್ವಿಪಕ್ಷೀಯ ಸಭೆಯನ್ನು ರದ್ದುಗೊಳಿಸಿದ ನಂತರ ಚೀನಾ, ಕ್ಷಿಪಣಿಗಳನ್ನು ಹಾರಿಸಿದೆ.

ತನ್ನ ಪ್ರದೇಶದಲ್ಲಿ ಚೀನಾದ ಕ್ಷಿಪಣಿ ಬಿದ್ದಿರುವ ಬಗ್ಗೆ ಜಪಾನ್ ರಕ್ಷಣಾ ಸಚಿವ ನೊಬುವೊ ಕಿಶಿ ಕಿಡಿಕಾರಿದ್ದು, ಇದು ಮೊದಲ ಬಾರಿಗೆ ಈ ಘಟನೆ ನಡೆದಿದೆ. ಜಪಾನ್ ರಾಜತಾಂತ್ರಿಕ ಮಾರ್ಗಗಳ ಮೂಲಕ ಪ್ರತಿಭಟನೆಯನ್ನು ದಾಖಲಿಸಿದೆ ಎಂದು ಕಿಶಿ ಹೇಳಿದ್ದಾರೆ.

ಬೀಜಿಂಗ್ ತನ್ನ ಸಾರ್ವಭೌಮ ಪ್ರದೇಶವೆಂದು ಪರಿಗಣಿಸುವ ಸ್ವಯಂ-ಆಡಳಿತದ ದ್ವೀಪ ದೇಶ ತೈವಾನ್‌ಗೆ ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಭೇಟಿ ನೀಡಿದ ಒಂದು ದಿನದ ನಂತರ ಚೀನಾ ಗುರುವಾರ ತೈವಾನ್ ಸುತ್ತಲೂ ಅನೇಕ ಕ್ಷಿಪಣಿಗಳನ್ನು ಹಾರಿಸಿದೆ. ತೈವಾನ್ ಜಲಸಂಧಿಯಲ್ಲಿ ಚೀನಾದ ಅತಿದೊಡ್ಡ ಸೇನಾ ವ್ಯಾಯಾಮ ಇದಾಗಿದ್ದು, ಗುರುವಾರ ಮಧ್ಯಾಹ್ನದ ವೇಳೆಗೆ ಪ್ರಾರಂಭವಾಯಿತು. ತೈವಾನ್‌ನ ಉತ್ತರ, ದಕ್ಷಿಣ ಮತ್ತು ಪೂರ್ವದ ಸಮುದ್ರಗಳಲ್ಲಿ ಲೈವ್-ಫೈರಿಂಗ್ ಅನ್ನು ಸಹ ಇದು ಒಳಗೊಂಡಿತ್ತು. ಇದರೊಂದಿಗೆ ಈ ಪ್ರದೇಶದಲ್ಲಿ ಉದ್ವಿಗ್ನತೆ ಕಳೆದ 25 ವರ್ಷಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ತಲುಪಿದೆ.

ಚೀನಾದ ಈಸ್ಟರ್ನ್ ಥಿಯೇಟರ್ ಕಮಾಂಡ್ ಮಧ್ಯಾಹ್ನ 3.30ರ ವೇಳೆಗೆ ನೀಡಿದ ಹೇಳಿಕೆಯಲ್ಲಿ, ತೈವಾನ್‌ನ ಪೂರ್ವ ಕರಾವಳಿಯ ನೀರಿನಲ್ಲಿ ಸಾಂಪ್ರದಾಯಿಕ ಕ್ಷಿಪಣಿಗಳ ಅನೇಕ ಫೈರಿಂಗ್‌ಗಳನ್ನು ಪೂರ್ಣಗೊಳಿಸಿದೆ, ಇದು ಆರು ವಿಭಿನ್ನ ವಲಯಗಳಲ್ಲಿ ಯೋಜಿತ ವ್ಯಾಯಾಮಗಳ ಭಾಗವಾಗಿ ಭಾನುವಾರ ಮಧ್ಯಾಹ್ನದವರೆಗೆ ನಡೆಯುತ್ತದೆ ಎಂದು ಬೀಜಿಂಗ್ ಹೇಳಿದೆ.

ತೈವಾನ್ ಖಂಡನೆ
11 ಚೀನಾದ ಡಾಂಗ್‌ಫೆಂಗ್ ಖಂಡಾಂತರ ಕ್ಷಿಪಣಿಗಳನ್ನು ದ್ವೀಪದ ಸುತ್ತಲಿನ ಸಮುದ್ರದಲ್ಲಿ ಹಾರಿಸಲಾಗಿದೆ ಎಂದು ತೈವಾನ್ ರಕ್ಷಣಾ ಸಚಿವಾಲಯ ತಿಳಿಸಿದೆ. ತೈವಾನ್ ಅಧಿಕಾರಿಗಳು ಸಮರಾಭ್ಯಾಸವನ್ನು ಖಂಡಿಸಿದ್ದು, ಚೀನಾ ವಿಶ್ವಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸುತ್ತಿದ್ದು, ತೈವಾನ್‌ ದೇಶದ ಪ್ರಾದೇಶಿಕ ಜಾಗವನ್ನು ಆಕ್ರಮಿಸುತ್ತಿದೆ ಎಂದಿದ್ದಲ್ಲದೆ, ಮುಕ್ತ ವಾಯು ಮತ್ತು ಸಮುದ್ರ ಸಂಚರಣೆಗೆ ನೇರ ಸವಾಲಾಗಿದೆ ಎಂದು ಹೇಳಿದೆ.

ಹಡಿಗಿನಿಂದ ಗಡಿ ಉಲ್ಲಂಘನೆ
ಚೀನಾದ ನೇರ ಎಚ್ಚರಿಕೆಗಳನ್ನು ಧಿಕ್ಕರಿಸಿ ತೈವಾನ್‌ಗೆ ಪೆಲೋಸಿಯ ಅಘೋಷಿತ ಆದರೆ ನಿಕಟವಾಗಿ ವೀಕ್ಷಿಸಿದ ಭೇಟಿಗೂ ಮುನ್ನವೇ ಚೀನಾ ಈ ವಿಚಾರವಾಗಿ ಕೆಂಡಾಮಂಡಲವಾಗಿತ್ತು.. ಗುರುವಾರದ ಅಭ್ಯಾಸಗಳು ಅಧಿಕೃತವಾಗಿ ಪ್ರಾರಂಭವಾಗುವ ಮೊದಲು, ಚೀನೀ ನೌಕಾಪಡೆಯ ಹಡಗುಗಳು ಮತ್ತು ಮಿಲಿಟರಿ ವಿಮಾನಗಳು ಬೆಳಿಗ್ಗೆ ತೈವಾನ್ ಜಲಸಂಧಿಯ ಮಧ್ಯದ ರೇಖೆಯನ್ನು ಸಂಕ್ಷಿಪ್ತವಾಗಿ ಹಲವಾರು ಬಾರಿ ದಾಟಿದವು ಎಂದು ತೈವಾನ್ ಮೂಲವು ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!