ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೂರು ತಿಂಗಳ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಟಿ ರೌಂಡ್ಸ್ ಹಾಕಿದ್ದು, ರಸ್ತೆ ಗುಂಡಿಗಳ ನಿರ್ಮೂಲನೆ ಹಾಗೂ ರಸ್ತೆ ಅಭಿವೃದ್ಧಿ ಮತ್ತು ವಿವಿಧ ಇಲಾಖೆಗಳಿಂದ ಕೈಗೊಳ್ಳಲಾಗಿರುವ ಮೂಲಭೂತ ಸೌಕರ್ಯ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
ಪರಿಶೀಲನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಬೆಂಗಳೂರು ನಗರದಲ್ಲಿ ಸುಮಾರು 12,878 ಕಿ.ಮೀ ಉದ್ದದ ರಸ್ತೆ ಜಾಲವಿದ್ದು, ಈ ಪೈಕಿ ಸುಮಾರು 1,344.84 ಕಿ.ಮೀ ಗಳು ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆ ಗುಂಪಿಗೆ ಸೇರುತ್ತಿದ್ದು, ಉಳಿಕೆ ಸುಮಾರು 11,533.16 ಕಿ.ಮೀ ರಸ್ತೆಗಳು ವಲಯ ಮಟ್ಟದ ರಸ್ತೆ ಗುಂಪಿಗೆ ಸೇರಿದೆ.
ಬೆಂಗಳೂರು ನಗರದ ರಸ್ತೆಗಳ ತಳಭಾಗದಲ್ಲಿ ಬೆಸ್ಕಾಂ ಕೇಬಲ್, ನೀರು ಸರಬರಾಜು ಮತ್ತು ಒಳಚರಂಡಿ ಕೊಳವೆಗಳು, ಗೇಲ್‍ಗ್ಯಾಸ್‍ನ ಕೊಳವೆಗಳು, ಕೆ.ಪಿ.ಟಿ.ಸಿ.ಎಲ್ ಸಂಸ್ಥೆಯ ಬೃಹತ್ ಮತ್ತು ಹೆಚ್ಚಿನ ಸಾಮರ್ಥ್ಯದ ಕೇಬಲ್‍ಗಳ ಅಳವಡಿಕೆ ಮತ್ತು ಒಎಫ್‍ಸಿ ಕೇಬಲ್‍ಗಳ ಅಳವಡಿಕೆಯಿಂದ ರಸ್ತೆಯ ಮೇಲ್ಮೈ ಭಾಗವು ಶಿಥಿಲಗೊಂಡು ರಸ್ತೆ ಗುಂಡಿಗಳು ಉದ್ಭವಿಸುತ್ತಿರುವುದು ಗಮನಿಸಲಾಗಿದೆ.
ಈ ರಸ್ತೆ ಗುಂಡಿಗಳನ್ನು ಅತೀ ಶೀಘ್ರವಾಗಿ ದುರಸ್ತಿ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಬಿಬಿಎಂಪಿ ಬ್ಯಾಚ್ ಮಿಕ್ಸ್ ಘಟಕವನ್ನು ಸ್ಥಾಪಿಸಲಾಗಿದ್ದು, ಈ ಬ್ಯಾಚ್ ಮಿಕ್ಸ್ ಘಟಕದಿಂದ ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಉದ್ಭಿಸುತ್ತಿರುವ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಅದೇ ರೀತಿ ವಲಯ ಮಟ್ಟದ ರಸ್ತೆಗಳನ್ನು ವಾರ್ಡ್‍ವಾರು ವಿಭಾಗಗೊಳಿಸಲಾಗಿದ್ದು, ಪ್ರತಿ ವಾರ್ಡ್‍ಗೆ 15 ಲಕ್ಷ ರೂ.ಗಳಂತೆ ರಸ್ತೆ ಗುಂಡಿ ಮುಚ್ಚಲು ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.