ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿರಾ ಕ್ಯಾಂಟೀನ್ನ ಹೊಸ ದರ ಪಟ್ಟಿ ಮತ್ತು ವಿವಿಧ ಆಹಾರಗಳ ಪೂರೈಕೆಗೆ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಬುಧವಾರ ಚಾಲನೆ ನೀಡಿದರು.
ನಗರದ ಮಿನಿವಿಧಾನಸೌಧ ಬಳಿ ಇರುವ ಇಂದಿರಾ ಕ್ಯಾಂಟೀನ್‍ನಲ್ಲಿ ಸಂತೋಷ್ ಲಾಡ್ ಅವರು ಹೊಸ ಆಹಾರ ಪಟ್ಟಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಸಚಿವರು, ರಾಜ್ಯ ಸರ್ಕಾರವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಬಡವರಿಗೆ, ಕಾರ್ಮಿಕರಿಗೆ, ಹಿಂದುಳಿದವರಿಗೆ ಹಾಗೂ ಎಲ್ಲ ಸಾರ್ವಜನಿಕರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಕೇವಲ ಐದು ರೂಪಾಯಿಗೆ ಊಟ, ಉಪಹಾರ ನೀಡುತ್ತಿರುವುದು ರಾಷ್ಟ್ರಕ್ಕೆ ಮಾದರಿ ಎಂದು ಹೇಳಿದರು.
ಇಂದಿರಾ ಕ್ಯಾಂಟೀನ್ ರಾಜ್ಯ ಸರ್ಕಾರದ ಮಹತ್ವದ ಕೊಡುಗೆಯಾಗಿದೆ. ಜಿಲ್ಲೆಯ ಅವಳಿ ನಗರದಲ್ಲಿ 9 ಇಂದಿರಾ ಕ್ಯಾಂಟೀನ್‍ಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ಇಂದಿರಾ ಕ್ಯಾಂಟೀನ್‍ದಿಂದ ಪ್ರತಿದಿನ 500 ಜನರಿಗೆ ಊಟ ಪೂರೈಸುವ ಗುತ್ತಿಗೆ ನೀಡಲಾಗಿದೆ. ಅದರಂತೆ ಇಂದಿರಾ ಕ್ಯಾಂಟೀನ್‍ಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದರು. ಬಳಿಕ ಸಚಿವರು ಐದು ರೂ. ಹಣ ಕೊಟ್ಟು ಟೋಕನ್ ಖರೀದಿಸಿ, ಜೋಳದ ರೊಟ್ಟಿ ಊಟ ಸವಿದರು.