ಮೋದಿ ಪ್ರಧಾನಿಯಾದ ಬಳಿಕ ದೇಶದ ಗೌರವ ಹೆಚ್ಚಳ: ಕುಮ್ಮನಂ ರಾಜಶೇಖರನ್

ಹೊಸ ದಿಗಂತ ವರದಿ, ಮಡಿಕೇರಿ:

ನರೇಂದ್ರ ಮೋದಿ ಪ್ರಧಾನಿಯಾದ ನಂತರ ವಿಶ್ವದೆಲ್ಲೆಡೆ ಭಾರತದ ಗೌರವವನ್ನು ಹೆಚ್ಚಿಸಿದ್ದಾರೆ. ಉಕ್ರೇನ್, ರಷ್ಯಾ, ಅಮೇರಿಕಾದ ಪ್ರಧಾನಿಗಳು ಕೂಡಾ ಯುದ್ಧದ ಬಗ್ಗೆ ಮೋದಿ ಸಲಹೆಯನ್ನು ಕೇಳುತ್ತಿದ್ದಾರೆ ಎಂದು ಕೇರಳದ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಿಜೋರಾಂನ ಮಾಜಿ ರಾಜ್ಯಪಾಲ ಕುಮ್ಮನಂ ರಾಜಶೇಖರನ್ ವ್ಯಾಖ್ಯಾನಿಸಿದರು.
ಗೋಣಿಕೊಪ್ಪಲು ರಾಧಾ ಟೂರಿಸ್ಟ್ ಹೋಂನ ಸಭಾಂಗಣದಲ್ಲಿ ವೀರಾಜಪೇಟೆ ಓಬಿಸಿ ಮೋರ್ಚಾ ಹಾಗೂ ಗೋಣಿಕೊಪ್ಪಲು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಜರುಗಿದ ‘ಅಭಿನಂದನಾ ಸಮಾರಂಭ’ದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮಹಿಳೆಯರು ಹಾಗೂ ಮಕ್ಕಳ ರಕ್ಷಣೆಗೆ ಮೋದಿ ಸರ್ಕಾರ ಕಠಿಣ ಕಾನೂನು ರೂಪಿಸಿದೆ. ಜಾತ್ಯತೀತವಾಗಿ ಮೋದಿ ಸರ್ಕಾರ ಭಾರತದಲ್ಲಿ ಹೊಸ ವಿಪ್ಲವವನ್ನೇ ಸೃಷ್ಟಿಸಿದೆ. ‘ಕೊರೋನಾ ವ್ಯಾಕ್ಸಿನ್’ನ್ನು ಭಾರತದ ಎಲ್ಲಾ ಪ್ರಜೆಗಳಿಗೂ ಉಚಿತವಾಗಿ ಕಲ್ಪಿಸಿದ ಕೇಂದ್ರ ಸರ್ಕಾರ ಮಾನವೀಯ ದೃಷ್ಟಿಯಿಂದ ಶತ್ರು ರಾಷ್ಟ್ರಗಳಾದ ಪಾಕಿಸ್ತಾನ ಹಾಗೂ ಅಪ್ಘಾನಿಸ್ತಾನಕ್ಕೂ ಸರಬರಾಜು ಮಾಡುತ್ತಿದೆ ಎಂದು ನುಡಿದರು.

ನಿರೀಕ್ಷಿತ ಅಭಿವೃದ್ಧಿಯಾಗುತ್ತಿಲ್ಲ
ಕೇರಳದಲ್ಲಿ ಈ ಹಿಂದಿನ ಕಾಂಗ್ರೆಸ್ ಹಾಗೂ ಈಗಿನ ಕಮ್ಯೂನಿಸ್ಟ್ ಸರ್ಕಾರದಿಂದ ನಿರೀಕ್ಷಿತ ಅಭಿವೃದ್ಧಿ ಆಗುತ್ತಿಲ್ಲ. ಮೋದಿಯ ವಿರುದ್ಧ ಅಸಭ್ಯ ನುಡಿಯಾಡುವ ಕಮ್ಯುನಿಸ್ಟ್ ಸರ್ಕಾರ ಇತ್ತೀಚೆಗೆ ಗುಜರಾತ್ ರಾಜ್ಯದ ಅಭಿವೃದ್ಧಿ ಬಗ್ಗೆ ಅಧ್ಯಯನಕ್ಕಾಗಿ ತನ್ನ ತಂಡವನ್ನು ಕಳುಹಿಸಿಕೊಟ್ಟಿತ್ತು. ಇತರೆ ರಾಜಕೀಯ ಪಕ್ಷಗಳ ನಾಯಕರು ಮೋದಿಯಿಂದ ಕಲಿಯುವದು ತುಂಬಾ ಇದೆ ಎಂದು ಕುಮ್ಮನಂ ಹೇಳಿದರು.
ಕೇರಳದಲ್ಲಿ ಇತ್ತೀಚೆಗೆ ಸ್ತ್ರೀಯರ ಮೇಲಿನ ದೌರ್ಜನ್ಯ, ಕೊಲೆ, ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಅಧಿಕವಾಗುತ್ತಿವೆ. ಕೇರಳದಲ್ಲಿ ಲವ್ ಜಿಹಾದ್ ಹಾಗೂ ಹಲಾಲ್ ವಿರುದ್ಧವೂ ನಮ್ಮ ಪಕ್ಷ ಹಾಗೂ ಹಿಂದೂ ಸಂಘಟನೆಗಳು ನಿರಂತರ ಹೋರಾಟ ಮಾಡುತ್ತಿವೆ ಎಂದರು.
ನರೇಂದ್ರ ಮೋದಿ ಅವರು ಇತ್ತೀಚೆಗೆ ನಾರಾಯಣ ಗುರು ಜಯಂತಿಯನ್ನು ಆಚರಣೆ ಮಾಡಿದ್ದರು. ನಾರಾಯಣ ಗುರು ಜಾತ್ಯತೀತ ಗುರುಗಳಾಗಿದ್ದು ಮನುಷ್ಯರಲ್ಲಿರುವದು ಒಂದೇ ಜಾತಿ,ಒಂದೇ ದೇವರೆಂದು ಪ್ರತಿಪಾದಿಸಿದ್ದರು. ಭಾರತದ ಆಧ್ಯಾತ್ಮಿಕ ಚೈತನ್ಯ, ಸಂವಿಧಾನ ಶಿಲ್ಪಿ ಡಾ.ಬಿ.ಅಂಬೇಡ್ಕರ್ ಅವರ ಸಾಮಾಜಿಕ ಕಳಕಳಿ ಇಂದು ದೇಶಕ್ಕೇ ಮಾದರಿಯಾಗಿದೆ. ಭಾರತದ ಹಳ್ಳಿ ಹಳ್ಳಿಗಳು ವಿಕಸನವಾಗಲು ಡಾ.ಅಂಬೇಡ್ಕರ್ ಚಿಂತನೆ ಕಾರಣವಾಗಿದೆ ಎಂದರು.

ಸಂಘ ಪರಿವಾರ-ಬಿಜೆಪಿಗೆ ಬಲ
ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಕೇರಳದಲ್ಲಿ ಬಿಜೆಪಿ ಪಕ್ಷ ಸಂಕಷ್ಟದಲ್ಲಿದ್ದಾಗ ಸಂಘ ಪರಿವಾರವನ್ನು,ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದವರು ಕುಮ್ಮನಂ ರಾಜಶೇಖರ್ ಅವರು. ಅವರ ಆದರ್ಶವನ್ನು ನಾವು ಪಾಲನೆ ಮಾಡಬೇಕಾಗಿದೆ. ಓಬಿಸಿ ಘಟಕದಲ್ಲಿ ಎಲ್ಲಾ ಹಿಂದುಳಿದ ವರ್ಗಗಳ ಪಾತ್ರವೂ ಮಹತ್ವದ್ದು ಎಂದರು.
ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಅವರು, ಕೇರಳದಲ್ಲಿ ಜೀವದ ಹಂಗು ತೊರೆದು ರಾಜಶೇಖರನ್ ಅವರು ಬಿಜೆಪಿ ಹಾಗೂ ಸಂಘ ಪರಿವಾರವನ್ನು ಬೆಳೆಸಿದರು. ರಾಜಕಾರಣ ಇವತ್ತು ವಾಣಿಜ್ಯ ರಾಜಕಾರಣವಾಗಿ ಮಾರ್ಪಾಡಾಗುತ್ತಿರು ಸಂದರ್ಭ ದೇಶದ ಸ್ವಾಭಿಮಾನ ಹಾಗೂ ಹಿಂದುತ್ವಕ್ಕಾಗಿ ಹೋರಾಟ ಮಾಡಿರುವುದಾಗಿ ಬಣ್ಣಿಸಿದರು.
ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ನೆಲ್ಲೀರ ಚಲನ್, ವೀರಾಜಪೇಟೆ ತಾಲೂಕು ಓಬಿಸಿ ಮೋರ್ಚಾ ಅಧ್ಯಕ್ಷ ಕೆ.ರಾಜೇಶ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಕೊಡಗು ಉಸ್ತುವಾರಿ ವಿಠಲ ಪೂಜಾರಿ ಪ್ರಾಸ್ತಾವಿಕ ನುಡಿಯಾಡಿದರು.
ಕೊಡಗು ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ಎಂ.ಗಣೇಶ್, ಓಬಿಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಹಾಗೂ ಕೊಡಗು ಎಸ್.ಎನ್.ಡಿ.ಪಿ. ಜಿಲ್ಲಾಧ್ಯಕ್ಷ ವಿ.ಕೆ.ಲೋಕೇಶ್, ವೀರಾಜಪೇಟೆ ಓಬಿಸಿ ಘಟಕದ ನವೀನ್ ಉತ್ತಯ್ಯ, ಜಿಲ್ಲಾ ಭಾಜಪ ಪ್ರಧಾನ ಕಾರ್ಯದರ್ಶಿ ಗುಮ್ಮಟೀರ ಕಿಲನ್‍ಗಣಪತಿ, ಗೋಣಿಕೊಪ್ಪಲು ಶಕ್ತಿ ಕೇಂದ್ರದ ಪ್ರಮುಖ್ ಸುರೇಶ್ ರೈ ಹಾಗೂ ರಂಜಿ, ವೀರಾಜಪೇಟೆ ತಾ. ಮಾಜಿ ಓಬಿಸಿ ಮೋರ್ಚಾ ಅಧ್ಯಕ್ಷ ಚಂದ್ರಶೇಖರ್, ಶಿವಂ ದಿವಾಕರನ್ ಉಪಸ್ಥಿತರಿದ್ದರು.
ಓಬಿಸಿ ಮೋರ್ಚಾ ತಾಲೂಕು ಉಪಾಧ್ಯಕ್ಷ ಬಿ.ಎನ್.ಪ್ರಕಾಶ್ ಸ್ವಾಗತಿಸಿದರೆ, ಸುಮಿ ಸುಬ್ಬಯ್ಯ ಪ್ರಾರ್ಥಿಸಿದರು. ವೀರಾಜಪೇಟೆ ತಾಲೂಕು ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನೋದ್ ಪೂಜಾರಿ ವಂದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!