June 7, 2026
Sunday, June 7, 2026
spot_img

ವಿಶೇಷ ಮಕ್ಕಳಿಗಾಗಿ ಉಡುಪಿಯಲ್ಲಿ ದೇಶದಲ್ಲೇ ಮೊದಲ ವಿಶಿಷ್ಟ ಸಾಮರ್ಥ್ಯ ವನ ಪಾರ್ಕ್ ನಿರ್ಮಾಣ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ವಿಶೇಷಚೇತನ ಮಕ್ಕಳ ಬೆಳವಣಿಗೆ, ಮನರಂಜನೆ ಹಾಗೂ ಅವರ ಸಾಮರ್ಥ್ಯ ವೃದ್ಧಿಸುವ ನಿಟ್ಟಿನಲ್ಲಿ ದೇಶದಲ್ಲೇ ಮೊದಲ ಬಾರಿಗೆ ಉಡುಪಿ ನಗರದ ಬ್ರಹ್ಮಗಿರಿಯ ಬಾಲಭವನದಲ್ಲಿ ವಿಶೇಷ ಮಕ್ಕಳಿಗಾಗಿ ಸಾಮರ್ಥ್ಯ ವನ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಶೇಷಚೇತನರ ಸಬಲೀಕರಣ ಇಲಾಖೆ ಹಾಗೂ ಉಡುಪಿ ಜಿಪಂ ವತಿಯಿಂದ ಪಾರ್ಕ್ ನಿರ್ಮಿಸಲಾಗುತ್ತಿದ್ದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಇಂದು ಪಾರ್ಕ್ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.

ವಿಶೇಷಚೇತನರಿಗೆ ಸಮಗ್ರ ಪುನರ್ವಸತಿ, ಚಿಕಿತ್ಸಕ ಸೇವೆಗಳು, ಉದ್ಯೋಗವಕಾಶ ಮತ್ತು ಸ್ವತಂತ್ರ ಜೀವನಕ್ಕೆ ಸಾಮರ್ಥ್ಯ ವೃದ್ಧಿಸುವ ನಿಟ್ಟಿನಲ್ಲಿ ವಿಶಿಷ್ಟ ರೀತಿಯ ಪಾರ್ಕ್ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ.

ಪಾರ್ಕ್ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಇದೊಂದು ಇಡೀ ರಾಜ್ಯ, ದೇಶಕ್ಕೆ ಮಾದರಿ ಆಗಬಲ್ಲ ಪಾರ್ಕ್ ಆಗಲಿದೆ. ಇದನ್ನು ನಾಲ್ಕು ವರ್ಷದಲ್ಲಿ ಪೂರ್ಣಗೊಳಿಸಲು ಯೋಜನೆ ಹಾಕಿದ್ದಾರೆ. ಆದರೆ ಎರಡೇ ವರ್ಷದಲ್ಲಿ ಕಾಮಗಾರಿ ಪೂರ್ತಿಗೊಳಿಸಿ ನಮ್ಮ ಅವಧಿಯಲ್ಲೇ ಉದ್ಘಾಟನೆ ಮಾಡುವಂತಾಗಬೇಕು. ನಮ್ಮ ಇಲಾಖೆಯಿಂದಲೂ ಶೀಘ್ರ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಇದಕ್ಕಾಗಿ ಜಿಪಂ ಸಿಇಓ ಅಧ್ಯಕ್ಷತೆಯಲ್ಲಿ ಇತರ ಅಧಿಕಾರಿಗಳನ್ನು ಒಳಗೊಂಡ ಪ್ರತ್ಯೇಕ ಸಾಮರ್ಥ್ಯ ಟ್ರಸ್ಟ್ ರಚಿಸಲಾಗಿದೆ. ಒಂದೂವರೆ ಕೋಟಿ ಸರ್ಕಾರಿ ಅನುದಾನ ಮತ್ತು ಇತರ ಸಂಘ- ಸಂಸ್ಥೆಗಳ ನೆರವಿನಲ್ಲಿ ಒಟ್ಟು 4.90 ಕೋಟಿ ವೆಚ್ಚದಲ್ಲಿ ವಿಶಿಷ್ಟ ರೀತಿಯ ಪಾರ್ಕ್ ನಿರ್ಮಾಣವಾಗಲಿದೆ.

ಉಡುಪಿ ಜಿಲ್ಲೆಯಲ್ಲಿ 15 ವರ್ಷ ಒಳಗಿನ 1228 ವಿಶೇಷ ಚೇತನ ಮಕ್ಕಳಿದ್ದು, ಇವರು ತಮ್ಮ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯಲು ಪಾರ್ಕ್ ಅನುಕೂಲವಾಗಲಿದೆ. ಇದಲ್ಲದೆ, ಇದರಲ್ಲಿ ಥೆರಪಿ ಸ್ವಿಂಗ್ಸ್ ಗಳು, ಬ್ಯಾಲನ್ಸ್ ಬೀಮ್ಸ್ ಗಳು, ಸಂಗೀತ ವಾದ್ಯಗಳು, ಸ್ಪರ್ಶ ಸಂವೇದನಾ ಮಾರ್ಗಗಳು, ಮರಳು ಮತ್ತು ನೀರಿನ ಆಟದ ವಲಯಗಳು ಇರಲಿದೆ. ಹೂಗಳ ಸುವಾಸನೆ ವೈವಿಧ್ಯ ಅರಿಯಲು ಸೆನ್ಸೇಶನ್ ಸೆನ್ಸರಿ ಪಾರ್ಕ್ ಕೂಡ ಬರಲಿದೆ.

ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಯಾಲ್, ಪೋಲಿಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ರುದ್ರಣ್ಣ, ರತ್ನ, ಖ್ಯಾತ ಮನೋವೈದ್ಯ ಡಾ. ಪಿ.ವಿ. ಭಂಡಾರಿ, ಜೈ ವಿಠ್ಠಲ್, ಹರಿಪ್ರಸಾದ ರಾಯ್ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !