ವಿದೇಶಾಂಗನೀತಿಗಳ ಮೇಲೆ ವೋಟ್‌ ಬ್ಯಾಂಕ್‌ ರಾಜಕಾರಣದ ದಿನಗಳು ಕಳೆದು ಹೋಗಿವೆ: ಎಸ್.ಜೈಶಂಕರ್‌ ಖಡಕ್‌ ಮಾತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ವಿದೇಶಾಂಗ ನೀತಿಗಳ ಮೇಲೆ ವೋಟ್ ಬ್ಯಾಂಕ್ ರಾಜಕಾರಣದ ದಿನಗಳು ಕಳೆದುಹೋಗಿವೆ. ಇಸ್ರೆಲ್‌ ಬಗ್ಗೆ ಭಾರತದ ಪ್ರಸ್ತುತ ನಿಲುವು ಈ ಬದಲಾವಣೆಗೆ ಸಾಕ್ಷಿ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಭಾನುವಾರದಂದು ತಮ್ಮ ದಿ ಇಂಡಿಯಾ ವೇ: ಸ್ಟ್ರಾಟಜೀಸ್ ಫಾರ್ ಅನ್ಸರ್ಟೈನ್ ವರ್ಲ್ಡ್ ಪುಸ್ತಕದ ಗುಜರಾತಿ ಭಾಷಾಂತರದ ಪ್ರತಿಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು “ಕೆಲವು ರಾಜಕೀಯ ಕಾರಣಗಳಿಂದಾಗಿ ನಾವು ಇಸ್ರೇಲ್‌ನೊಂದಿಗೆ ಸಂಬಂಧವನ್ನು ಹೆಚ್ಚಿಸುವುದರಿಂದ ನಮ್ಮನ್ನು ನಿರ್ಬಂಧಿಸಬೇಕಾಯಿತು. ಪ್ರಧಾನಿ ಮೋದಿ ಇಸ್ರೇಲ್‌ಗೆ ತೆರಳಿದ ಮೊದಲ ಭಾರತೀಯ ಪ್ರಧಾನಿ… ನಾವು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ರಾಷ್ಟ್ರೀಯ ಹಿತಾಸಕ್ತಿಗಳನ್ನು ಬದಿಗಿಟ್ಟ ಸಮಯ ಕಳೆದುಹೋಗಿದೆ. ಭಾರತದ ಜಲ ನಿರ್ವಹಣಾ ಕ್ಷೇತ್ರದಲ್ಲಿನ ಪ್ರಗತಿಗಾಗಿ ಉತ್ತಮ ಇಸ್ರೇಲಿ ಅಭ್ಯಾಸಗಳು ಮತ್ತು ತಂತ್ರಜ್ಞಾನಗಳನ್ನು ಹಂಚಿಕೊಳ್ಳಲು ಇಸ್ರೇಲ್ ವಾಟರ್ ಅಟ್ಯಾಚೆ ಸ್ಥಾನವನ್ನು ಹೊಂದಿರುವ ಏಕೈಕ ದೇಶ ಭಾರತವಾಗಿದೆ” ಎಂದು ಅವರು ಹೇಳಿದ್ದಾರೆ.

ಮೋದಿ ಸರ್ಕಾರಕ್ಕೆ ಶ್ಲಾಘನೆ:

ಅಲ್ಲದೇ ವಿದೇಶಾಂಗ ನೀತಿಗಳಲ್ಲಿ ಜಾಗತಿಕವಾಗಿ ಭಾರತವನ್ನು ಮುನ್ನಡೆಸಿದ ಮೋದಿ ಸರ್ಕಾರದ ಬಗ್ಗೆ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. “ನರೇಂದ್ರ ಮೋದಿ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿರುವುದೂ ಕೂಡ ದೊಡ್ಡ ಶಕ್ತಿಯಾಗಿದೆ. ಈ ಸರ್ಕಾರದ ಕುರಿತು ಅನೇಕ ನಂಬಿಕೆ, ವಿಶ್ವಾಸಗಳ ಮಹಾಪೂರವೇ ಇದೆ. ಜಗತ್ತು ಅದನ್ನು ಗುರುತಿಸುತ್ತದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರಷ್ಯಾ ತೈಲ ಖರೀದಿಯ ಕುರಿತು:

ರಷ್ಯಾದಿಂದ ತೈಲ ಖರೀದಿಯನ್ನು ಮುಂದುವರಿಸುವ ಭಾರತದ ನಿರ್ಧಾರದ ಬಗ್ಗೆ ಮಾತನಾಡಿದ ಜೈಶಂಕರ್ “ಜನರಿಗೆ ಭಾರತದ ಪರಿಸ್ಥಿತಿ – ಇಲ್ಲಿನ ಆದಾಯದ ಮಟ್ಟದ ಬಗ್ಗೆ ಅರ್ಥವಾಗುತ್ತಿಲ್ಲ, ವಿದೇಶಿ ನೀತಿಗಿಂತ ತೈಲ ಆಮದು ವಿಷಯವು ಜನರ ಹಿತಾಸಕ್ತಿಯಾಗಿದೆ. ನಾವು ಮೊದಲು ನಮ್ಮ ಜನರ ಬಗ್ಗೆ ಯೋಚಿಸಬೇಕು ಎಂಬುದು ಪ್ರಧಾನಿ ಮೋದಿಯವರ ಸೂಚನೆಯಾಗಿದೆ” ಎಂದು ಹೇಳಿದ್ದಾರೆ.

 

ಜಾಗತಿಕ ರಾಜಕೀಯ ಮತ್ತು ಭಾರತದ ನಿಲುವು:

ಇನ್ನು ಜಾಗತಿಕ ಸಮಸ್ಯೆಗಳಲ್ಲಿ ಭಾರತ ಹಸ್ತಕ್ಷೇಪ ಮಾಡಬಾರದೇ ಎಂಬ ಪ್ರಶ್ನೆಗೆ ಅವರ ಉತ್ತರ ಹೀಗಿದೆ ““ಜಗತ್ತಿನಲ್ಲಿ ಏನಾದರೂ ಸಮಸ್ಯೆ ಉದ್ಭವಿಸಿದರೆ, ನಾವು ಅದರಲ್ಲಿ ಹಸ್ತಕ್ಷೇಪ ಮಾಡಬಾರದು. ಇದು ಕೂಡ ಒಂದು ರೀತಿಯ ಸಿದ್ಧಾಂತವಾಗಿದೆ. ಬಹುಶಃ 1950-60ರಲ್ಲಿ ನಮ್ಮಲ್ಲಿ ಸಾಮರ್ಥ್ಯ ಇರಲಿಲ್ಲ. ನಮಗೆ ನಮ್ಮದೇ ಆದ ಆಸಕ್ತಿಗಳಿದ್ದವು. ಆದರೆ ಈಗ, ಕೆಲವೇ ದಿನಗಳ ಹಿಂದೆ, ನಾವು ಆರ್ಥಿಕತೆಯಲ್ಲಿ ವಿಶ್ವದ ಐದನೇ ಸ್ಥಾನವನ್ನು ತಲುಪಿದ್ದೇವೆ. 20 ನೇ ಸ್ಥಾನದಲ್ಲಿರುವ ಮತ್ತು ಐದನೇ ಸ್ಥಾನದಲ್ಲಿರುವ ಘಟಕದ ಚಿಂತನೆಯು ಒಂದೇ ಆಗಿರುವುದಿಲ್ಲ. ಈಗ ಸಮಯ ಮತ್ತು ಪರಿಸ್ಥಿತಿ ಎರಡೂ ಬದಲಾಗಿದೆ.”

ಮುಂದುವರೆದು ವಿದೇಶಾಂಗ ನೀತಿಗಳಲ್ಲಿನ ಬದಲಾವನಣೆಯ ಕುರಿತು ಅವರು “ಇಲ್ಲಿಯವರೆಗೂ ನಮ್ಮ ಸಾಮರ್ಥ್ಯಗಳು ಮತ್ತು ಆತ್ಮವಿಶ್ವಾಸದ ಅಭಿವ್ಯಕ್ತಿಗೆ ಅನುಗುಣವಾಗಿ ಬದಲಾವಣೆ ಇರಲಿಲ್ಲ. ಏಕೆಂದರೆ ಹಳೆಯ ಅಭ್ಯಾಸಗಳು ನಮ್ಮನ್ನು ಕಟ್ಟಿಹಾಕಿದ್ದವು, ಪ್ರಸ್ತುತ ಜಗತ್ತು ನಮ್ಮನ್ನು ಹೇಗೆ ವ್ಯಾಖ್ಯಾನಿಸುತ್ತದೆ ಅಥವಾ ನಾವು ನಮ್ಮನ್ನು ಹೇಗೆ ವ್ಯಾಖ್ಯಾನಿಸಿ ಕೊಳ್ಳುತ್ತೇವೆ ಎಂಬುದೇ ಈಗಿರುವ ಸವಾಲು” ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!