ಹೊಸ ದಿಗಂತ ವರದಿ, ಮೈಸೂರು:
ಮನೆಯೊಂದರ ಬಾಗಿಲು ಮೀಟಿ ತೆಗೆದು ನುಗ್ಗಿರುವ ಕಳ್ಳರು ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಘಟನೆ ಮೈಸೂರಿನ ಬೆಮಲ್ನಗರದಲ್ಲಿ ನಡೆದಿದೆ.
ಬೆಮಲ್ ನಗರದ ನಿವಾಸಿ ದಿನಕರ್ ಎಂಬುವರು ತಮ್ಮ ಮನೆಗೆ ಬೀಗ ಹಾಕಿ ಕುಟುಂಬ ಸಮೇತ ಊರಿಗೆ ಹೋಗಿದ್ದರು. ವಾಪಾಸ್ ಬಂದಾಗ ಮನೆ ಬಾಗಿಲು ಮೀಟಿ ತೆಗೆದಿದ್ದು, ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಲಾಗಿತ್ತು. ಪರಿಶೀಲನೆ ನಡೆಸಿದಾಗ 142 ಗ್ರಾಂ ಚಿನ್ನಾಭರಣಗಳನ್ನು ಕಳ್ಳರು ಕಳುವು ಮಾಡಿಕೊಂಡು ಹೋಗಿರುವುದು ಕಂಡು ಬಂತು. ಈ ಬಗ್ಗೆ ಅವರು ನೀಡಿದ ದೂರಿನ ಮೇಲೆ ಸ್ಥಳಕ್ಕೆ ಶ್ವಾನದಳದೊಂದಿಗೆ ಆಗಮಿಸಿದ ಸರಸ್ವತಿಪುರಂ ಠಾಣೆಯ ಪೊಲೀಸರು, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.