ವರುಣನ ಆರ್ಭಟಕ್ಕೆ ನಡುಗುತ್ತಿದೆ ಭೂಮಿ: ಭಾರೀ ವಾಹನಗಳ ಸಂಚಾರಕ್ಕೆ ಬಿತ್ತು ಬ್ರೇಕ್!

ಹೊಸದಿಗಂತ ವರದಿ,ಮಡಿಕೇರಿ:

ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ರಸ್ತೆಗಳು ಹಾಳಾಗುತ್ತಿದ್ದು, ಇನ್ನಷ್ಟು ಮಳೆ ಸುರಿದರೆ ರಸ್ತೆಗಳು ಕುಸಿಯುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಭಾರಿ ವಾಹನಗಳ ಸಂಚಾರವನ್ನು ಅಕ್ಟೋಬರ್ 15 ರವರೆಗೂ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಅವರು ಶನಿವಾರ ಆದೇಶ ಹೊರಡಿಸಿದ್ದಾರೆ.
ಮರದ ದಿಮ್ಮಿಗಳು ಹಾಗೂ ಮರಳು ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. 16,200 ಕೆ.ಜಿಗಿಂತ ಹೆಚ್ಚಿನ ತೂಕದ ಸರಕು ಸಾಗಾಣಿಕೆ ಮಾಡುವ ವಾಹನಗಳು, ಭಾರಿ ವಾಹನಗಳಾದ ಬುಲೆಟ್ ಟ್ಯಾಂಕರ್ಸ್, ಶಿಪ್ ಕಾರ್ಗೋ ಕಂಟೈನರ್ಸ್, ಮಲ್ಟಿ ಆಕ್ಸಲ್ ವಾಹನಗಳ ಸಂಚಾರವನ್ನೂ ನಿಷೇಧಿಸಲಾಗಿದೆ.
ಅಡುಗೆ ಅನಿಲ, ಇಂಧನ, ಹಾಲು, ಸರ್ಕಾರಿ ಕೆಲಸಕ್ಕಾಗಿ ಬಳಸುವ ವಾಹನಗಳು, ಶಾಲಾ, ಕಾಲೇಜು, ಸಾರ್ವಜನಿಕ ಪ್ರಯಾಣಿಕ ವಾಹನಗಳಿಗೆ ವಿನಾಯಿತಿ ನೀಡಲಾಗಿದೆ.
ಕೊಡಗು ಜಿಲ್ಲೆಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಕುಶಾಲನಗರ ಹಾಗೂ ಸಂಪಾಜೆಯಲ್ಲಿ ಚೆಕ್‌ಪೋಸ್ಟ್‌ ರಚಿಸಿ ದಿನದ 24 ಗಂಟೆಗಳ ಕಾಲ ಸಂಚರಿಸುವ ವಾಹನಗಳ ಮೇಲೆ ನಿಗಾ ಇಡಲು ನಿರ್ಧರಿಸಲಾಗಿದೆ. ಜತೆಗೆ, ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!