ಆ ಹದಿನೆಂಟರ ಎಳೆತರುಣ ಸೂರ್ಯಮುಳುಗದ ಸಾಮ್ರಾಜ್ಯವನ್ನೇ ನಡುಗಿಸಿದ್ದ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ (ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವಿಶೇಷ)
1908 ನೇ ಇಸವಿಯ ಆಗಸ್ಟ್‌ 11 ರ ದಿನ. ಆಗಷ್ಟೇ ಹದಿನೆಂಟರ ಹರೆಯಕ್ಕೆ ಕಾಲಿಟ್ಟಿದ್ದ ತೇಜಸ್ವಿ ಯುವಕನೊಬ್ಬ ನಗುನಗುತ್ತಲೇ ನೇಣುಗಂಬದೆಡೆಗೆ ಸಾಗಿ ಬಂದು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ. ಭಾರತಾಂಬೆಯ ರಕ್ಷಣೆಗಾಗಿ ತನ್ನ ಜೀವವನ್ನೇ ಅರ್ಪಿಸಿದ ಆ ಮಹಾನ್ ಚೇತನದ ಹೆಸರು ಖುದಿರಾಮ್ ಬೋಸ್. ಆತ ವಯಸ್ಸಿನಲ್ಲಿ ಎಳೆಯನಾಗಿದ್ದ ಆದರೆ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಆತನದ್ದೇ ಒಂದು ಪ್ರತ್ಯೇಕ ಅಧ್ಯಾಯ. ಇಡೀ ಭವ್ಯ ಭಾರತ ತಮ್ಮ ಅಂಗೈನಲ್ಲಿದೆ ಎಂದು ಬೀಗುತ್ತಿದ್ದ ಬ್ರಿಟೀಷ್‌ ಸಾಮ್ರಾಜ್ಯ ಆ ಹದಿಹರೆಯದ ಯುವಕನ ಹೆಸರು ಕೇಳಿದರೆ ಹೆದರಿ ನಡುಗುತ್ತಿತ್ತು. ಅದು ಆತನ ತಾಕತ್ತು. ಅಷ್ಟಕ್ಕೂ ಆತ ಮಾಡಿದ್ದು ಏನು ಗೊತ್ತಾ?. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿಯೇ ಮೊತ್ತಮೊದಲ ಬಾಂಬ್‌ ಎಸೆದು ಬ್ರಿಟೀಷರನ್ನು ಇನ್ನಿಲ್ಲದಂತೆ ಕಂಗೆಡಿಸಿಬಿಟ್ಟಿದ್ದ.
ಸಾಮ್ರಾಜ್ಯ- ಸಾಮ್ರಾಜ್ಯಗಳನ್ನು ಪರಸ್ಪರ ಎತ್ತಿಕಟ್ಟಿ, ಸೇನೆ- ಶಸ್ರ್ತಾಸ್ತ್ರಗಳ ಬಲದಲ್ಲಿ ಭಾರತವನ್ನು ಮೋಸದಿಂದ ಆಳುತ್ತಿದ್ದ ಬ್ರಿಟೀಷರರಿಗೆ ಅವರದ್ದೇ ಶೈಲಿಯಲ್ಲಿ ಉತ್ತರ ಕೊಟ್ಟಿದ್ದ. ಭಾರತೀಯರು ಅಹಿಂಸಾ ಹೋರಾಟಕ್ಕೆ ಮಾತ್ರವಲ್ಲ, ದೇಶ, ಸ್ವಾಭಿಮಾನದ ವಿಚಾರ ಬಂದಾಗ ಕ್ರಾಂತಿಗೂ ಸಿದ್ದ ಎಂಬುದನ್ನು ಅರ್ಥ ಮಾಡಿಸಿದ್ದ. ಮುಂದೆ ಸಾವಿರಾರು ಕ್ರಾಂತಿಕಾರಿಗಳಿಗೆ ಗುರುವಾದ, ಎಲ್ಲದಕ್ಕಿಂತ ಮುಖ್ಯವಾಗಿ ಸೂರ್ಯಮುಳುಗದ ಸಾಮ್ರಾಜ್ಯ ಕಟ್ಟಿ ಮೆರೆಯುತ್ತಿದ್ದ ಬ್ರಿಟೀಷರ ಅಷ್ಟೂ ದರ್ಪವನ್ನು ಮಣ್ಣುಪಾಲು ಪಾಲಾಗುವಂತೆ ಮಾಡಿದ್ದ.
ಖುದಿರಾಮ್ ಬೋಸ್‌ 03 ಡಿಸೆಂಬರ್ 1889 ರಂದು ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ಹಬೀಬ್ಪುರ್ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ. ಆತ ಎಳವೆಯಿಂದಲೇ ಕಷ್ಟಗಳೊಂದಿಗೆ ಗುದ್ದಾಡುತ್ತಲೇ ಬೆಳೆದ. ಸಣ್ಣವಯಸ್ಸಿಗೆ ಹೆತ್ತವರನ್ನು ಕಳೆಕೊಂಡ. ಕಿತ್ತು ತಿನ್ನುವ ಬಡತನವಿತ್ತು. ಆದರೆ ಮೂವರು ಅಕ್ಕಂದಿರ ಮುದ್ದಿನ ಮುಂದೆ ಅವನಿಗೆ ಕಷ್ಟಗಳೆಲ್ಲಾ ಗೌಣವಾಗಿತ್ತು. ಖುದೀರಾಮನ ಮನಸ್ಸು ಸದಾ ಸ್ವಾತಂತ್ರ್ಯಕ್ಕೆ ತುಡಿಯುತ್ತಿತ್ತು. ಬ್ರಿಟೀಷ್‌ ಚಕ್ರಾಧಿಪತ್ಯದ ಅಡಿಯಲ್ಲಿ ನಾನಾ ಕಷ್ಟಕೋಟಲೆಗಳನ್ನು ಎದುರಿಸುತ್ತಿರುವ ಭಾರತೀಯರಿಗಾಗಿ ಮಿಡಿಯುತ್ತಿತ್ತು. ಭಾರತಮಾತೆಯೂ ತನ್ನ ವೀರಪುತ್ರನನ್ನು ಬಹಳಾ ಕಾಲ ಚಳವಳಿಗಳಿಂದ ದೂರ ಬಿಟ್ಟಿರಲಿಲ್ಲ. 1900 ರ ದಶಕದ ಆರಂಭದಲ್ಲಿ, ಅರಬಿಂದೋ ಘೋಸ್ ಮತ್ತು ಸಹೋದರಿ ನಿವೇದಿತಾರ ಕ್ರಾಂತಿಕಾರಿ ಮಾತುಗಳು ಖುದಿರಾಮನ್ನು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಲು ಪ್ರೇರೇಪಿಸಿತು. 1905ರ ಬಂಗಾಳದ ವಿಭಜನೆಯ ಸಮಯದಲ್ಲಿ ಖುದೀರಾಮ ಸಕ್ರಿಯ ಹೋರಾಟದಲ್ಲಿ ತೊಡಗಿಸಿಕೊಂಡ. ಬ್ರಿಟಿಷ್ ಆಡಳಿತದ ವಿರುದ್ಧ ಕರಪತ್ರಗಳನ್ನು ಹಂಚಿದ್ದಕ್ಕಾಗಿ ಮೊದಲ ಬಾರಿಗೆ ಬಂಧನಕ್ಕೆ ಒಳಗಾದಾಗಿನ್ನೂ ಖುದಿರಾಮ್ ಗೆ 15 ವರ್ಷ.
1908 ರಲ್ಲಿ ಖುದಿರಾಮ ಕ್ರಾಂತಿಕಾರಿ ಗುಂಪಾದ ಅನುಶೀಲನ್ ಸಮಿತಿಗೆ ಸೇರಿದ. ಅಲ್ಲಿ ಅರಬಿಂದೋ ಘೋಸ್ ಮತ್ತು ಅವರ ಸಹೋದರ ಬರೀಂದ್ರ ಘೋಸ್ ಅವರಂತಹ ಮಹಾನ್‌ ರಾಷ್ಟ್ರೀಯವಾದಿಗಳು ಈ ಸಮಿತಿಯನ್ನು ಮುನ್ನಡೆಸುತ್ತಿದ್ದರು. ಇಲ್ಲಿ ಖುದಿರಾಮ್ ಬ್ರಿಟಿಷ್ ವಿರೋಧಿ ಚಟುವಟಿಕೆಗಳಲ್ಲಿ ಸಂಪೂರ್ಣ ತೊಡಗಿಸಿಕೊಂಡ. ಬಾಂಬ್ ತಯಾರಿಸುವುದರಲ್ಲಿ ನಿಷ್ಣಾತನಾದ.
ಅದೇ ಸಮಯದಲ್ಲಿ ಡಗ್ಲಾಸ್ ಎಚ್ ಕಿಂಗ್ಸ್‌ಫೋರ್ಡ್ ಎಂಬಾತ ಕಲ್ಕತ್ತಾದ ಮುಖ್ಯ ಪ್ರೆಸಿಡೆನ್ಸಿ ಮ್ಯಾಜಿಸ್ಟ್ರೇಟ್ ಆಗಿದ್ದ. ಆತ ಅದೆಂತಹ ಕ್ರೂರಿಯೆಂದರೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಘೋರಾತಿಘೋರ ಶಿಕ್ಷೆಗಳನ್ನು ಕೊಡುತ್ತಾ ವಿಕೃತವಾಗಿ ಆನಂದಿಸುತ್ತಿದ್ದ. ಅವನ ದರ್ಪ, ದೌರ್ಜನ್ಯಗಳು ಅಂಕೆ ಮೀರಿ ಹೋಗಿದ್ದವು. ಆತನ ಅಂತ್ಯಕಾಲ ಸಮೀಪಿಸಿದೆ ಎಂದು ಕ್ರಾಂತಿಕಾರಿಗಳು ಮಾತಾಡಿಕೊಂಡರು. ಕಿಂಗ್ಸ್ ಫೊರ್ಡ್ ನನ್ನ ಕೊಲ್ಲಲು ಖುದಿರಾಮ ಮುಂದೆಬಂದ. ಹತ್ಯೆಗೆ ಹಲವಾರು ಪ್ರಯತ್ನಗಳು ನಡೆದರೂ ಕಿಂಗ್ಸ್‌ ಫೋರ್ಡ್ ಅದುಹೇಗೋ ಕೊನೆ ಕ್ಷಣದಲ್ಲಿ ತಪ್ಪಿಸಿಕೊಳ್ಳುತ್ತಿದ್ದ. ಅವನ ಆಯಸ್ಸು ಗಟ್ಟಿಯಾಗಿರಬಹುದು ಆದರೆ, ಪಾಪಿಯ ಅಂತ್ಯ ಮಾತ್ರ ನಮ್ಮಿಂದಲೇ ಎಂದು ಕ್ರಾಂತಿಕಾರಿಗಳು ಮತ್ತೊಂದು ಪ್ರಯತ್ನಕ್ಕೆ ಮುಂದಾದರು. ಆದರೆ ಈ ಬಗ್ಗೆ ಸುಳಿವು ಸಿಕ್ಕಿದ ಬ್ರಿಟಿಷ್ ಅಧಿಕಾರಿಗಳು ಫೋರ್ಡ್‌ನನ್ನು ಮುಜಾಫರ್‌ಪುರಕ್ಕೆ ವರ್ಗಾಯಿಸಿದರು.
ಆದಾಗ್ಯೂ ಕ್ರಾಂತಿಕಾರಿಗಳು ಬಿಡಲಿಲ್ಲ. ತೋಳವನ್ನು ಬೆನ್ನಟ್ಟಿದ ಹುಲಿಯಂತೆ ಅವನನ್ನು ಹಿಂಬಾಲಿಸಿದರು. ಸ್ವಾತಂತ್ರ್ಯ ಯಜ್ಞ ಮತ್ತಷ್ಟು ಧಗದಗಿಸಲು ಪೊರ್ಡನ ಆಹುತಿ ಕೇಳುತ್ತಿತ್ತು. ಯುಗಾಂತರ ಗುಂಪಿನ ನಾಯಕರಾದ ಸತ್ಯೇಂದ್ರನಾಥ ಬೋಸ್, ಖುದಿರಾಮ್ ಬೋಸ್ ಮತ್ತು ಪ್ರಫುಲ್ ಚಾಕಿ ಈ ಜವಾಬ್ದಾರಿಯನ್ನು ಹೊತ್ತುಕೊಂಡರು.
ಕಿಂಗ್ಸ್ ಫೋರ್ಡ್ ಸಂಜೆ ಕ್ಲಬ್ಬಿನಿಂದ ಮನೆಗೆ ಬರುವ ದಾರಿಯಲ್ಲಿ ಕಾದುನಿಂತಿದ್ದ ಕ್ರಾಂತಿಕಾರಿಗಳು ಕಿಂಗ್ಸ್‌ಫೋರ್ಡ್‌ನ ಗಾಡಿಯ ಮೇಲೆ ದಾಳಿ ಮಾಡಿದರು. ಕುದುರೆ ಗಾಡಿ ಹತ್ತಿರ ಬರುತ್ತಿದ್ದಂತೆ ಖುದಿರಾಮ್ ಅದರ ಮೇಲೆ ಬಾಂಬ್ ಎಸೆದ. ಆದರೆ ಕ್ರಾಂತಿಕಾರಿಗಳ ಗ್ರಹಿಕೆ‌ ಕೊಂಚವೇ ಕೊಂಚ ತಪ್ಪಿತ್ತು. ಪಾಪಿ ಚಿರಾಯು ಎನ್ನುವಂತೆ ಪೂರ್ಡ್‌ ಮತ್ತೆ ಬದುಕಿಕೊಂಡ. ಗಾಡಿಯಲ್ಲಿ ಪ್ರಿಂಗಲ್ ಕೆನಡಿ ಎಂಬ ನ್ಯಾಯವಾದಿಯ ಹೆಂಡತಿ ಮತ್ತು ಮಗಳು ಪ್ರಯಾಣಿಸುತ್ತಿದ್ದರು. ಈ ಘಟನೆ ನಡೆದದ್ದು 1908ನೆ ಏಪ್ರಿಲ್ 3 0ರಂದು.
ಕ್ರಾಂತಿಕಾರಿಗಳು ಎಸೆದ ಬಾಂಬು ಕಿಂಗ್ಸ್ ಫೋರ್ಡನನ್ನು ಕೊಲ್ಲಲಿಲ್ಲವಾದರೂ, ಇಡೀ ಬ್ರಿಟಿಷ್ ಸಾಮ್ರಾಜ್ಯಕ್ಕೇ ಮೊದಲ ನಡುಕ ಹುಟ್ಟಿಸಿತು. ಖುದಿರಾಮ್‌ ಎಸೆದ ಬಾಂಬು ಕಿಂಗ್ಸ್ ಫೋರ್ಡನ ವಾಹನವನ್ನು ಮಾತ್ರವೇ ಛಿದ್ರಚಿದ್ರ ಮಾಡಲಿಲ್ಲ, ಬ್ರಿಟಿಷ್ ಸಾಮ್ರಾಜ್ಯದ ಅಷ್ಟೂ ಅಹಂಕಾರ ಮತ್ತು ದರ್ಪವನ್ನು ನುಚ್ಚುನೂರಾಗಿಸಿತು.
ಮುಜಾಫುರದಿಂದ ಸುಮಾರು, 25 ಮೈಲುಗಳಾಚೆ ಯುವಕ ಖುದಿರಾಮ ಬ್ರಿಟೀಷರೊಂದಿಗೆ ಹೋರಾಡುತ್ತಾ ಸೆರೆಸಿಕ್ಕ.
ಬಳಿಕ ವಿಚಾರಣೆಯ ನಾಟಕ ನಡೆಯಿತು. ಹರೆಯದ ಹುಡುಗ ಖುದಿರಾಮ್‌ ಬದುಕಿರುವಷ್ಟು ಕಾಲ ಭಾರತೀಯರ ಎದೆಯಲ್ಲಿ ಸ್ವಾತಂತ್ರ್ಯದ ಜ್ವಾಲೆ ತಣ್ಣಗಾಗಲು ಸಾಧ್ಯವೇ ಇಲ್ಲ ಎಂಬುದನ್ನು ಅರಿತಿದ್ದ ಬ್ರಿಟೀಷರು ಆತನನ್ನು ತರಾತುರಿಯಲ್ಲಿ ಗಲ್ಲಿಗೇರಿಸಿದರು. 1908 ರ ಆಗಸ್ಟ್ 11 ರಂದು ಖುದಿರಾಮ ತನ್ನ 18ರ ಹರೆಯದಲ್ಲೇ ನೇಣುಗಂಬಕ್ಕೆ ತಲೆಕೊಟ್ಟ. ಆದರೆ ಹಾಗೆ ಹೋಗುವಾಗ ಕೋಟ್ಯಂತರ ಕ್ರಾಂತಿಕಾರಿ ದೀಪಗಳನ್ನು ಹಚ್ಚಿಹೋದ. ಭಾರತೀಯರಿಗೆ ಪ್ರಾತಃ ಸ್ಮರಣೀಯನಾದ. ಜನಪದ ಗೀತೆಗಳಲ್ಲಿ ಅಮರನಾದ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!