ಶತ್ರುಗಳ 18 ಗುಂಡು ದೇಹ ಹೊಕ್ಕರೂ ಛಲ ಬಿಡದೇ ವಿಜಯಕ್ಕೆ ಕಾರಣನಾದ ʼಪರಮವೀರʼನ ಸಾಹಸಗಾಥೆ

– ಗಣೇಶ ಭಟ್‌, ಗೋಪಿನಮರಿ

ಕಾರ್ಗಿಲ್ ಕದನ ಆರಂಭವಾಗಿತ್ತು. ಪಾಕಿಸ್ತಾನಿ ಶತ್ರು ಸೈನಿಕರು ಆಯಕಟ್ಟಿನ‌ ಜಾಗವಾದ ‘ಟೈಗರ್ ಹಿಲ್‌’ನಲ್ಲಿ‌ ಭದ್ರವಾಗಿ ಕೂತಿದ್ದರು. ಅದನ್ನು‌ ವಶಪಡಿಸಿಕೊಳ್ಳಬೇಕೆಂದರೆ ಕೆಳಗಡೆಯಿಂದ ಹತ್ತಿ ಹೋಗುವುದೊಂದೇ ದಾರಿ. ಇಲ್ಲಿನ‌ ಸನ್ನಿವೇಶ ಅದೆಷ್ಟು ಭೀಕರವಾಗಿದೆಯೆಂದು ಒಮ್ಮೆ ಅವಲೋಕಿಸಿ. ಗುಡ್ಡದ ಮೇಲ್ಗಡೆ ಶತ್ರುವಿದ್ದಾನೆ. ಆತನ ಬಳಿ ಶಸ್ತ್ರಾಸ್ತ್ರ ದಾಸ್ತಾನು ಸಾಕಷ್ಟಿದೆ. ನಮ್ಮ ಸೈನಿಕರು ಕೆಳಗಿನಿಂದ ಹತ್ತಬೇಕು. ನಮಗೆ ಶತ್ರುವು ಸರಿಯಾಗಿ ಗೋಚರಿಸುವುದಿಲ್ಲ. ಆದರೆ ಶತ್ರುವಿಗೆ ನಮ್ಮೆಲ್ಲ ಚಲನವಲನಗಳ ಮೇಲೆ ಕಣ್ಣಿದೆ. ಆತ ಹೆಚ್ಚೇನೂ ಮಾಡಬೇಕಿಲ್ಲ. ಮೇಲಿಂದ ಸುಮ್ಮನೆ ಬಂಡೆಗಳನ್ನು ಉರುಳಿಸಿದರೂ ಸಾಕು. ಆದರೆ ನಮ್ಮ ಸೈನಿಕರು ಕಡಿದಾದ ಪರ್ವತ ಹತ್ತುವುದರ ಜೊತೆಗೆ ಆತನನ್ನೂ ಮಟ್ಟ ಹಾಕಬೇಕು. ಹಿಮಾಲಯದ ಎತ್ತರದ ಶಿಖರಗಳವು. ಸಮುದ್ರಮಟ್ಟದಿಂದ 17 ಸಾವಿರ ಅಡಿಗಿಂತಲೂ ಎತ್ತರ ವಾಗಿರುತ್ತವೆ. ಆಮ್ಲಜನಕದ ಕೊರೆತೆಯೊಂದಿಗೆ ಶಸ್ತ್ರಾಸ್ತ್ರಗಳನ್ನು ಹೊತ್ತು ಮೇಲೆ ಹತ್ತುವುದರೊಳಗೇ ದೇಹ ಹೈರಾಣಾಗಿರುತ್ತದೆ. ಆದರೆ ನಮ್ಮ‌ಭಾರತೀಯ ಸೈನಿಕರ ಶೌರ್ಯಕ್ಕೆ ಮಿತಿಯೆಂಬುದೆಲ್ಲಿದೆ? ಗುಡ್ಡ ಹತ್ತಿ ಶತ್ರುವನ್ನು ಮಟ್ಟಹಾಕಿದ ಅನೇಕ ಕಥೆಗಳು‌ ಕಾರ್ಗಿಲ್ ಯುದ್ಧ ಇತಿಹಾಸದಲ್ಲಿ ಕಾಣಸಿಗುತ್ತದೆ. ಅಂಥಹ ಕಥೆಗಳಲ್ಲಿ ದೇದೀಪ್ಯಮಾನವಾಗಿ ಹೊಳೆಯುತ್ತದೆ ಈ‌‌‌ವೀರನ ಕಥೆ.

ಟೈಗರ್‌ ಹಿಲ್ ಮೇಲಿದ್ದ ಶತ್ರುವನ್ನು ಮಟ್ಟಹಾಕುವ ಸವಾಲು ಸ್ವೀಕರಿಸಿದಾಗ ಆತನ ವಯಸ್ಸಿನ್ನೂ ಕೇವಲ 19. ಆಗ ತಾನೇ ಪದವಿಗೆ ಕಾಲಿಡುವ ಹದಿಹರೆಯದ ಸಮಯ. ಆದರೆ ಆತ ಆಯ್ದುಕೊಂಡಿದ್ದು ಮಾತ್ರ ವೀರರು ಮಾತ್ರವೇ ತುಳಿಯಬಹುದಾದ ದಾರಿಯನ್ನು. ಭಾರತೀಯ‌ ಸೇನೆಯ ಅತ್ಯಂತ ಶೂರ ಸೈನಿಕರ ಗುಂಪಾದ ‘ಘಾತಕ್’ ಪ್ಲಟೂನ್‌ ಭಾಗವಾಗಿ ಶತ್ರುವನ್ನು ಸದೆ ಬಡಿಯಲು ಮುನ್ನುಗ್ಗಿದ ಈತ ಟೈಗರ್ ಹಿಲ್ ನಲ್ಲಿ ಅಂತಿಮವಾಗಿ ವಿಜಯ ಪತಾಕೆಯನ್ನು ಹಾರಿಸಿದ್ದ. ಮೈತುಂಬ ಶತ್ರುವಿನ ಗುಂಡುಗಳು ಹೊಕ್ಕಿದ್ದರೂ ಛಲ ಬಿಡದ ತ್ರಿವಿಕ್ರಮನಂತೆ ಅಪ್ರತಿಮವಾಗಿ ಹೋರಾಡಿ ಭಾರತೀಯ ಸೇನೆಗೆ ಜಯವನ್ನು ದಕ್ಕಿಸಿದ್ದ. ಹೀಗೆ ಸಾಹಸ ಮೆರೆದ ವೀರನ‌ ಹೆಸರು ‘ಗ್ರೆನೇಡಿಯರ್ ಯೋಗಿಂದ್ರ ಸಿಂಗ್ ಯಾದವ್’

Gallantry Awards | Ministry of Defence, Government of India

ಹುಟ್ಟಿದ್ದು 1980 ಮೇ 10ರಂದು ಉತ್ತರ ಪ್ರದೇಶದ ಬುಲಂದ್ ಶಹರದ ಹಳ್ಳಿಯೊಂದರಲ್ಲಿ. ಇವರ ತಂದೆ ಕರಣ್ ಸಿಂಗ್ ಕೂಡ್ ಭಾರತೀಯ ಸೇನೆಯಲ್ಲಿ ಯೋಧರಾಗಿದ್ದರು. 1965 ಮತ್ತು 1971ರ ಭಾರತ-ಪಾಕ್ ಯುದ್ಧದ ಸಮಯದಲ್ಲಿ ಸೇನೆಯಲ್ಲಿ ಹೋರಾಡಿದಂಥವರು. ಹಾಗಾಗಿ ಸೈನಿಕನಾಗುವವನಿಗೆ ಇರಬೇಕಾದ ಗುಣಗಳು ಇವರಿಗೆ ಹುಟ್ಟಿನಿಂದಲೇ ರಕ್ತಗತವಾಗಿತ್ತು. ಪ್ರೌಢ ಶಿಕ್ಷಣದ ನಂತರ ಸೇನೆಗೆ ಸೇರಿದ ಯೋಗಿಂದರ್ ಸಿಂಗ್ ಸೇನೆಯ 18ನೇ ಗ್ರೆನೇಡಿಯರ್ ವಿಭಾಗಕ್ಕೆ 1997ರಲ್ಲಿ ನಿಯುಕ್ತಿಗೊಳ್ಳುತ್ತಾರೆ. ಅವರು ಸೇನೆ ಸೇರಿದ ಎರಡೇ ವರ್ಷಕ್ಕೆ ಅವರ ಶೌರ್ಯ ತೋರಿಸುವ ಕಾಲ ಸನ್ನಿಹಿತವಾಗಿತ್ತು.

1999ರ ಕಾರ್ಗಿಲ್ ಯುದ್ಧ ಆರಂಭವಾಗಿತ್ತು. ಅದಾಗಲೇ ತೋಲೋಲಿಂಗ್ ಪರ್ವತದ ಮೇಲೆ ವಿಜಯಪತಾಕೆ ಹಾರಿಸಲಾಗಿತ್ತು.‌ ಮುಂದಿನ ಗುರಿ ಇದ್ದಿದ್ದು ‘ಟೈಗರ್ ಹಿಲ್’. ಇದನ್ನು ವಶಪಡಿಸಿಕೊಳ್ಳುವ ಜವಾಬ್ದಾರಿಯನ್ನು18ನೇ ಗ್ರೆನೇಡಿಯರ್ ವಿಭಾಗಕ್ಕೆ ವಹಿಸಲಾಗಿತ್ತು. ಈ ಕಾರ್ಯಾಚರಣೆಗೆಂದು 35ಜನರ ತಂಡವೊಂದನ್ನು ಕಳುಹಿಸಲಾಯಿತು. ಆ ಗುಂಪಿನ‌ ಸದಸ್ಯರಲ್ಲೊಬ್ಬರಾಗಿ ಯೋಗಿಂದ್ರಸಿಂಗ್ ಯಾದವ್ ಇದ್ದರು. ಯೋಗೀಂದ್ರ ಸಿಂಗ್ ಯಾದವ್ ಇದ್ದ 7 ಜನರ ತಂಡ ಮುಂಚೂಣಿಯಲ್ಲಿತ್ತು. ಸುಮಾರು ನಾಲ್ಕುದಿನಗಳಿಂದ ಶಿಖರವನ್ನೇರುವ ಸಾಹಸ ಮುಂದುವರೆದಿತ್ತು. ಜುಲೈ 3 ರ ರಾತ್ರಿಯ ಸಮಯ‌ ಕಳೆಯುತ್ತಿತ್ತು. ಶತ್ರುವು ಮೇಲೆಯೇ ಇದ್ದುದರಿಂದ ತಮ್ಮ ಆಗಮನದ ಯಾವುದೇ ಸೂಚನೆ ಶತ್ರುವಿಗೆ ಸಿಗಬಾರದು ಎಂದು ಶಿಖರವನ್ನೇರಲು ರಾತ್ರಿಯ ಸಮಯವನ್ನೇ ಆಯ್ದುಕೊಳ್ಳಲಾಗಿತ್ತು. ಹಗಲಿಡೀ ಕೊರಡಿನಂತೆ ಕದಲದೇ ಕಳೆದು ರಾತ್ರಿ ಗಾಢ ಕತ್ತಲೆಯ‌ಲ್ಲಿ ಮುಂದುವರೆಯುತ್ತ‌ ಯೋಗಿಂದ್ರಸಿಂಗ್ ಮತ್ತವರ ಸಹಸೈನಿಕರು ಶತ್ರುಗಳಿಗೆ ಹತ್ತಿರಾಗುತ್ತಿದ್ದರು.

16,500 ಅಡಿ ಎತ್ತರದ ಕಡಿದಾದ ಪರ್ವತವನ್ನೇರುವುದು‌ ಸುಲಭವಾಗಿರಲಿಲ್ಲ. ಒಂದೆಡೆ ಕೊರೆಯುವ ಚಳಿ‌, ಇನ್ನೊಂದೆಡೆ ಉಸಿರಾಡಲು ಆಮ್ಲಜನಕದ ಕೊರತೆ.ಅಂಥಹ‌ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಶತ್ರುವನ್ನು ಮಟ್ಟಹಾಕಿ ತಾಯಿ ಭಾರತಿಯನ್ನು ಕಾಪಾಡಬೇಕೆಂಬ ಒಂದೇ ಗುರಿಯೊಂದಿಗೆ ಯೋಗೀಂದ್ರಸಿಂಗ್ ಮತ್ತು ಸಹಸೈನಿಕರು ಮುಂದುವರೆಯುತ್ತಿದ್ದರು. ರಾತ್ರಿಯ ಸಮಯವಾದ್ದರಿಂದ ಶತ್ರು ಸೈನಿಕರು ಬಂಕರ್ ಒಳಗಡೆ ಕೂತಿದ್ದರು. 7 ಜನರ ಪೈಕಿ 6 ಜನರು ಮೇಲೆ ಹೋಗಿದ್ದರು. ಕೊನೆಯ ಸೈನಿಕ ಮೇಲೆರುವಾಗ ಕಲ್ಲುಜಾರಿ ದೊಡ್ಡದಾಗಿ ಸದ್ದಾಗಿತ್ತು. ಎಚ್ಚರಗೊಂಡ ಶತ್ರು ಸೈನಿಕರು ಗುಂಡಿನ‌ ದಾಳಿ ಆರಂಭಿಸಿದರು. ಈ ವೇಳೆ ಯೋಗೀಂದ್ರ ಸಿಂಗ್ ಯಾದವ್ ದೇಹಕ್ಕೆ 3 ಗುಂಡುಗಳು ತಗುಲಿದ್ದವು. ಆದರೂ ಎದೆಗುಂದದೇ ಮೊದಲನೇ ಬಂಕರಿನಲ್ಲಿದ್ದ ಪಾಕಿಸ್ತಾನಿ ಸೈನಿಕರನ್ನು ಹತ್ತಿಕ್ಕಿ ಬಂಕರ್ ವಶಪಡಿಸಿಕೊಳ್ಳಲಾಯಿತು.

ಆದರೆ ಮೇಲಿದ್ದ ಇನ್ನೊಂದು ಬಂಕರಿನಿಂದ ಮತ್ತೆ 10 ಪಾಕಿಸ್ತಾನಿ ಸೈನಿಕರು‌ ಆಕ್ರಮಣ ಮಾಡಿದರು. ಈ ವೇಳೆ ಕಾದು ಕೂತಿದ್ದ ಯೋಗೀಂದ್ರ ಸಿಂಗ್ ಅವರ ತಂಡ 8 ಜನ ಶತ್ರು ಸೈನಿಕರಿಗೆ ನರಕದ ಹಾದಿ ತೋರಿಸಿತ್ತು. ಇಬ್ಬರು ಸೈನಿಕರು‌ ಓಡಿ‌ಹೋಗಿದ್ದರು. 7 ಜನ ಭಾರತೀಯ ಸೈನಿಕರು ಮಾತ್ರವೇ ಇದ್ದಾರೆಂದು ಅವರು ಶತ್ರು ಪಾಳಯಕ್ಕೆ ಸುದ್ದಿ ತಲುಪಿಸಿದ್ದರು. ಅದಾಗಲೇ ನೂರಾರು ಸೈನಿಕರನ್ನು ಪಾಕ್ ಬೆಟ್ಟದ ತುದಿಯಲ್ಲಿ ತಂದು ನಿಲ್ಲಿಸಿತ್ತು. ಅವರೆಲ್ಲರೂ ನಮ್ಮ ಸೈನಿಕರ ಮೇಲೆ ಮುಗಿಬಿದ್ದರು. ಭೀಕರ ಗುಂಡಿನ ಚಕಮಕಿ ನಡೆಯಿತು. ನಮ್ಮ ಸೈನಿಕರ ಪರಾಕ್ರಮಕ್ಕೆ 35ಮಂದಿ ಪಾಕ್ ಸೈನಿಕರು ಹತರಾಗಿದ್ದರು. ಗಂಟೆಗಳ ನಂತರ ಗುಂಡಿನ ಚಕಮಕಿ ಶಾಂತವಾಯಿತು. ನಮ್ಮ 6 ಜನ ಸೈನಿಕರು‌ ವೀರಮರಣವನ್ನಪ್ಪಿದ್ದರು. ಯೋಗೆಂದ್ರ ಸಿಂಗ್ ಮೈ ತುಂಬಾ ಶತ್ರುವಿನ 12ಗುಂಡುಗಳು ಹೊಕ್ಕಿದ್ದವು. ಶತ್ರುಗಳು ಮುಂದೆ ಬರುತ್ತಿದ್ದಂತೆಯೇ ಸತ್ತಂತೆ ನಟಿಸುತ್ತ ಯೋಗೇಂದ್ರ ಮಲಗಿಬಿಟ್ಟರು.‌

ಯುದ್ಧದಲ್ಲಿ ಸೈನಿಕರು ಸತ್ತು ಮಲಗಿದ್ದರೂ ತಪಾಸಣೆಗೆ ಬಂದ ಎದುರಾಳಿ ತಂಡ ಮತ್ತೊಮ್ಮೆ ಅವರ ಮೇಲೆ ಗುಂಡು ಹಾರಿಸಿ ಕನ್ಫರ್ಮ್ ಮಾಡಿಯೇ ಹೋಗುತ್ತದೆ. ಇಲ್ಲಿಯೂ ಪಾಕ್ ಸೈನಿಕರು ಹಾಗೆಯೇ ಮಾಡಿದರು. ಯೋಗೇಂದ್ರ ಸಿಂಗರ ಕೈ ಕಾಲು ಎಲ್ಲೆಂದರಲ್ಲಿ ಗುಂಡು ಹೊಕ್ಕಿತು. ಆದರೆ ಅವರ ಎದೆಯ ಜೇಬಿ ನಲ್ಲಿದ್ದ 5 ರೂ ನಾಣ್ಯವೊಂದು ಎದೆಗೆ ಗುಂಡು ಹೊಕ್ಕುವುದನ್ನು ತಡೆದಿತ್ತು. ಎಲ್ಲರನ್ನೂ ಮಟ್ಟಹಾಕಿದ ಖುಷಿಯಲ್ಲಿ ನಮ್ಮ ಸೈನಿಕರ ಕೈಲಿದ್ದ ಬಂದೂಕುಗಳೆಲ್ಲವನ್ನೂ ಕಿತ್ತುಕೊಂಡು ಪಾಕಿಗಳು ವಾಪಸ್ಸಗುತ್ತಿದ್ದರು. ಯೋಗೀಂದ್ರ ಸಿಂಗರ ಜೇಬಿನಲ್ಲಿ ಗ್ರೆನೇಡೊಂದು ಹಾಗೆಯೇ ಉಳಿದಿತ್ತು. ತಡ ಮಾಡದೇ ಸಮಯ ನೋಡಿಕೊಂಡು ಎಸೆದೇ ಬಿಟ್ಟರು. ಪಾಕಿಸ್ತಾನಿ ಸೈನಿಕನೊಬ್ಬನ ದೇಹ ಛಿದ್ರವಾಯಿತು. ಈಗ ತಾನೆ ನೋಡಿಕೊಂಡು ಬಂದಾಗ ಎಲ್ಲರೂ ಸತ್ತಿದ್ದಾರೆ ಈಗ ಮತ್ತೆ ಗ್ರೆನೇಡು ದಾಳಿಯಾಗುತ್ತಿದೆಯೆಂದರೆ ಭಾರತೀಯರ ದೊಡ್ಡ ಪಡೆಯೇ ಮೇಲೆ ಬಂದಿದೆಯೆಂದು ಊಹಿಸಿದ ಪಾಕಿಸ್ತಾನಿಗಳು ಅಲ್ಲಿಂದ ಕಾಲ್ತಿತ್ತು ಓಡಿ ಹೋಗಿ ಹೆಚ್ಚಿನ ಪಡೆಗೆ ಮೊರೆಯಿಟ್ಟವು. ಪಾಕಿಗಳ ದೊಡ್ಡ ತಂಡ ಬರಲು ಅಣಿಯಾಗುತ್ತಿತ್ತು.

ಈ ವಿಷಯವನ್ನು ತನ್ನ ಕಮಾಂಡಿಂಗ್ ಅಧಿಕಾರಿಗೆ ತಿಳಿಸಲೇಬೇಕೆಂದು ಗಾಯವಾದ ದೇಹದಲ್ಲಿಯೇ ತೆವಳಿಕೊಂಡು ಸೊಂಟದಲ್ಲಿದ್ದ ಬೆಲ್ಟ್ ತೆಗೆದು ಛಿದ್ರವಾಗಿದ ಕೈಗಳನ್ನು ಕಟ್ಟಿಕೊಂಡು ಪಕ್ಕದಲ್ಲಿದ್ದ ನೀರಿನ ತೊರೆಯಲ್ಲಿ ಉರುಳಿಕೊಂಡು ತನ್ನ ಸಹ ಸೈನಿಕರಿದ್ದ ಸ್ಥಳ ತಲುಪಿದ ಯೋಗಿಂದ್ರ‌ ಸಿಂಗ್ ‘ಟೈಗರ್‌ ಹಿಲ್ ಖಾಲಿಯಾಗಿದೆ.‌ ಆದರೆ ಶತ್ರುಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಪಸ್ಸಾಗುವ ಕುತಂತ್ರದಲ್ಲಿದ್ದಾರೆ’ ಎಂದು ತನ್ನ ಮೇಲಧಿಕಾರಿ ಕರ್ನಲ್ ಕುಶಾಲ್ ಠಾಕೂರರಿಗೆ ಮಾಹಿತಿ ನೀಡಿದ್ದ. ಆತನ ಶೌರ್ಯ ನೋಡಿ ಕರ್ನಲ್ ಠಾಕೂರ್ ದಂಗಾಗಿದ್ದರು. ನಂತರದಲ್ಲಿ ಭಾರತೀಯ ಸೇನೆ ತನ್ನ ತುಕಡಿ ಕಳುಹಿಸಿ ಅಂತಿಮ ವಿಜಯ ಸಾಧಿಸಿತು. ರಕ್ತದ ಮಡುವಿನಲ್ಲಿದ್ದ ಯೋಗೀಂದ್ರ ಸಿಂಗ್ ಅವರನ್ನು ಆಸ್ಪತ್ರೆಗೆ ರವಾನಿಸಲಾಯಿತು. ಪವಾಡ ಸದೃಶವೆಂಬಂತೆ ಯೋಗೀಂದ್ರ ಸಿಂಗ್ ಬದುಕುಳಿದಿದ್ದರು. ಅವರು ತೋರಿದ ಈ ಅಪ್ರತಿಮ ಶೌರ್ಯಕ್ಕೆ ಸೇನೆಯ ಅತ್ಯುನ್ನತ‌ ಗೌರವ ‘ಪರಮ ವೀರಚಕ್ರ’ ವನ್ನು ನೀಡಿ ಸನ್ಮಾನಿಸಲಾಯಿತು.

ತಿಂಗಳುಗಳ ಆರೈಕೆಯ ನಂತರ ಚೇತರಿಸಿಕೊಂಡ ಯೋಗೀಂದ್ರ ಸಿಂಗ್ ಸೇನೆಯ ತರಬೇತುದಾರರಾಗಿ ಸೇವೆ ಮುಂದುವರಿಸಿದರು. ಅಂತಿಮವಾಗಿ 2021ರಲ್ಲಿ ನಿವೃತ್ತಿಯದರು. ನಿವೃತ್ತಿಯ ವೇಳೆಗೆ ಜೂನಿಯರ್ ಕಮಿಷನ್ಡ್ ಆಫ಼ೀಸರ್ ಆಗಿದ್ದ ಅವರಿಗೆ ಗೌರವಯುತವಾಗಿ ‘ಕ್ಯಾಪ್ಟನ್’ ಪದವಿ ನೀಡಿ ಗೌರವಿಸಲಾಗಿದೆ. ಹೀಗೆ ಅಪ್ರತಿಮ ಸಾಹಸ ತೋರಿ ಭಾರತಾಂಬೆಯನ್ನು ರಕ್ಷಿಸಿದ ಲಿವಿಂಗ್ ಲೆಜೆಂಡ್ ಯೋಗಿಂದ್ರ‌ಸಿಂಗ್ ಯಾದವ್ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿ ನಿಲ್ಲುತ್ತಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!