ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ವತಂತ್ರ ಭಾರತದ ಮೊದಲ ಮತದಾರನೆಂಬ ಖ್ಯಾತಿಗೆ ಪಾತ್ರವಾಗಿದ್ದ ಶ್ಯಾಮ್ ಸರಣ್ ನೇಗಿ ಶನಿವಾರ ಮುಂಜಾನೆ 106 ನೇ ವಯಸ್ಸಿನಲ್ಲಿ ನಿಧನರಾದರು. ನೇಗಿ ಹಿಮಾಚಲ ಪ್ರದೇಶದ ಕಿನ್ನೌರ್ ನಿವಾಸಿಯಾಗಿದ್ದು, ಮುಂಬರುವ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ನವೆಂಬರ್ 2 ರಂದು ಅಂಚೆ ಮತ ಚಲಾಯಿಸಿದ್ದರು.
ವರದಿಗಳ ಪ್ರಕಾರ 106ನೇ ವಯಸ್ಸಿನ ನೇಗಿಯವರು ಇತ್ತೀಚೆಗೆ ಅಸ್ವಸ್ಥರಾಗಿದ್ದರೂ ಆದರೂ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಅಂಚೆ ಮತದ ಚಲಾವಣೆ ಮಾಡಿದ್ದರು. ಪ್ರಸ್ತುತ ಅವರನ್ನು ಗೌರವಯುತವಾಗಿ ಬೀಳ್ಕೊಡಲು ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸುತ್ತಿದೆ.
ಜುಲೈ 1, 1917 ರಂದು ಜನಿಸಿದ ನೇಗಿ ಕಲ್ಪಾದಲ್ಲಿ ಶಾಲಾ ಶಿಕ್ಷಕರಾಗಿ ಕೆಲಸ ನಿರ್ವಹಿಸಿದ್ದರು. 1947 ರಲ್ಲಿ ಬ್ರಿಟಿಷ್ ಆಳ್ವಿಕೆಯ ಅಂತ್ಯದ ನಂತರ ಭಾರತವು 1951 ರಲ್ಲಿ ತನ್ನ ಮೊದಲ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಿದಾಗ, ನೇಗಿ ಅವರು ಅಕ್ಟೋಬರ್ 25 ರಂದು ತಮ್ಮ ಮತವನ್ನು ಚಲಾಯಿಸಿದ ಮೊದಲ ವ್ಯಕ್ತಿಯಾಗಿದ್ದರು. ಆ ಮೊದಲ ಚುನಾವಣೆಯ ಹೆಚ್ಚಿನ ಮತದಾನವು ಫೆಬ್ರವರಿ 1952 ರಲ್ಲಿ ನಡೆದಿದ್ದರೂ ಮೊದಲು ಹಿಮಾಚಲ ಪ್ರದೇಶದಲ್ಲಿ ನಡೆಸಲಾಗಿತ್ತು. ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಹವಾಮಾನವು ಪ್ರತಿಕೂಲವಾಗಿರುತ್ತದೆ ಮತ್ತು ಆ ಅವಧಿಯಲ್ಲಿ ಭಾರೀ ಹಿಮಪಾತವು ನಾಗರಿಕರಿಗೆ ಮತದಾನ ಕೇಂದ್ರಗಳನ್ನು ತಲುಪಲು ಅಸಾಧ್ಯವಾಗುವುದರಿಂದ ಐದು ತಿಂಗಳ ಮುಂಚಿತವಾಗಿ ಹಿಮಾಚಲ ಪ್ರದೇಶದಲ್ಲಿ ಚುನಾವಣೆಗಳು ನಡೆಯುತ್ತವೆ.
ಶ್ಯಾಮ್ ಸರಣ್ ನೇಗಿ ಹಿಂದಿಯ ಸನಮ್ ರೇ ಚಿತ್ರದಲ್ಲಿಯೂ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ಕೊನೆಯುಸಿರೆಳೆಯುವಾಗಲೂ ಮತದಾನ ಚಲಾಯಿಸಿದ್ದಾರೆ. ಆಮೂಲಕ ಭಾರತದ ಪ್ರಜ್ಞಾವಂತ ನಾಗರಿಕನಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದಾರೆ.