ಅರಣ್ಯ ಇಲಾಖೆಯ ಬೋನಿನೊಳಗೆ ಬಿತ್ತು ಎಲ್ಲರನ್ನು ಆತಂಕಗೊಳಿಸಿದ್ದ ಮೊಸಳೆ!

ಹೊಸ ದಿಗಂತ ವರದಿ, ಮೈಸೂರು:

ಇಲ್ಲಿನ ಜೆಎಸ್‌ಎಸ್ ಆಸ್ಪತ್ರೆ ಹಿಂಭಾಗವಿರುವ ಎಲೆ ತೋಟದ ರಾಜಕಾಲುವೆಯಲ್ಲಿ ಆಗಾಗ ಕಾಣಿಸಿಕೊಳ್ಳುತ್ತಾ, ಕರುವೊಂದನ್ನು ಬಲಿ ತೆಗೆದುಕೊಂಡಿದ್ದ ಮೊಸಳೆಯನ್ನು ಕೊನೆಗೂ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಗುರುವಾರ ಸಂಜೆ ಸೆರೆ ಹಿಡಿದಿದ್ದಾರೆ.

ಕಳೆದ ಒಂದು ತಿಂಗಳ ಹಿಂದೆ ರಾಜಕಾಲುವೆಯಲ್ಲಿ ಪ್ರತ್ಯಕ್ಷವಾದ ಈ ಮೊಸಳೆ ಆಗಾಗ ಪ್ರತ್ಯಕ್ಷವಾಗುತ್ತಿತ್ತು. ಅದನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯವರು ಪ್ರಯತ್ನ ನಡೆಸಿದ್ದರು, ಮೊಸಳೆ ಮಾತ್ರ ಸಿಗದೆ ಚಳ್ಳೆ ಹಣ್ಣು ತಿನ್ನಿಸುತ್ತಿತ್ತು. ಅಲ್ಲದೇ ಕಳೆದ ಭಾನುವಾರ ನಗರದ ರಾಮಾನುಜ ರಸ್ತೆಯ 9 ನೇ ಕ್ರಾಸ್‌ನಲ್ಲಿರುವ ಕೆರೆಯಲ್ಲಿ ಕಾಣಿಸಿಕೊಂಡು, ಮೇವು ತಿನ್ನಲು ಬಂದ ಕರುವೊಂದರ ಮೇಲೆ ದಾಳಿ ನಡೆಸಿ, ಅದನ್ನು ಕೆರೆಯ ಒಳಕ್ಕೆ ಎಳೆದುಕೊಂಡು ಹೋಗಿ ಕೊಂದು ಹಾಕಿತ್ತು. ಇದರಿಂದ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿತ್ತು. ಈ ಮೊಸಳೆಯನ್ನು ಸೆರೆ ಹಿಡಿಯಲೇಬೇಕೆಂದು ಹಠಕ್ಕೆ ಬಿದ್ದ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇಂದು ಜೆಸಿಬಿ ಬಳಸಿ ಕಾರ್ಯಚರಣೆಯನ್ನು ನಡೆಸಿತು. ಆರ್‌ಎಫ್‌ಒ ಸುರೇಂದ್ರ, ಡಿಎಫ್‌ಆರ್‌ಒ ವೆಂಕಟಾಚಲ ಹಾಗೂ ಸಿಬ್ಬಂದಿಗಳು, ಸ್ಥಳೀಯರ ನೆರವಿನೊಂದಿಗೆ ಮೊಸಳೆಯನ್ನು ಕೊನೆಗೂ ಸೆರೆ ಹಿಡಿದರು.

ಸುಮಾರು 6 ಅಡಿ ಉದ್ದವಿರುವ ಈ ದೈತ್ಯ ಮೊಸಳೆಯನ್ನು ಕಟ್ಟಿ, ಅದನ್ನು ಹೊತ್ತುಕೊಂಡು ಬಂದು ವಾಹನದ ಮೇಲೆ ಹಾಕಿದಾಗ ನೆರೆದಿದ್ದ ಜನರು ಆ ದೃಶ್ಯಗಳನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದರು. ಅಬ್ಬಾ ಇಷ್ಟೊಂದು ದೊಡ್ಡದಾಗಿದೆಯಾ ಈ ಮೊಸಳೆ ಎಂದು ಅಚ್ಚರಿ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!