10 ಸಾವಿರ ಉದ್ಯೋಗಿಗಳನ್ನು ತೆಗೆವ ಬಗ್ಗೆ ಮೈಕ್ರೋಸಾಫ್ಟ್‌ ನಾಡೆಲ್ಲಾ ಬರೆದ ಪತ್ರದಲ್ಲಿದೆ ಭವಿಷ್ಯದ ಟ್ರೆಂಡ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಇತ್ತೀಚೆಗಷ್ಟೇ 10 ಸಾವಿರ ಉದ್ಯೋಗಿಗಳನ್ನು ಹೊರಹಾಕುವುದಾಗಿ ಸಾಫ್ಟ್‌ ವೇರ್‌ ದಿಗ್ಗಜ ಮೈಕ್ರೋಸಾಫ್ಟ್‌ ಘೋಷಿಸಿದ್ದು ಆರ್ಥಿಕ ಹಿಂಜರಿತದ ಕಾರಣ ಕಂಪನಿಯ ವೆಚ್ಚಕಡಿತದ ಭಾಗವಾಗಿ ಉದ್ಯೋಗ ಕಡಿತಗೊಳಿಸಲಾಗುತ್ತಿದೆ ಎಂದು ಹೇಳಿದೆ. 2023ರವರೆಗೂ ಈ ಉದ್ಯೋಗಕಡಿತಗಳು ಮುಂದುವರೆಯಲಿದೆ ಎಂದು ಕಂಪನಿ ಹೇಳಿದ್ದು ಇದರ ಕುರಿತು ಕಂಪನಿಯ ಮುಖ್ಯ ಕಾರ್ಯ ನಿರ್ವಾಹಕ ಸತ್ಯಾನಾಡೆಲ್ಲಾ ಪತ್ರವೊಂದನ್ನು ಹಂಚಿಕೊಂಡಿದ್ದು ಉದ್ಯೋಗಕಡಿತಗಳ ಕಾರಣಗಳನ್ನು ವಿವರಿಸುವುದರ ಜೊತೆಗೆ ಭವಿಷ್ಯದಲ್ಲಿ ಟೆಕ್‌ ಜಗತ್ತಿನ ಹೊಸ ಹೊಳಹುಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಮುಂಬರುವ ದಿನಗಳಲ್ಲಿ ಟೆಕ್‌ ಜಗತ್ತು ಹೇಗೆ ಬದಲಾಗಲಿದೆ ಎಂಬುದರ ಬಗ್ಗೆ ಅವರ ಈ ಪತ್ರ ಬೆಳಕು ಚೆಲ್ಲುತ್ತದೆ.

ಕಂಪನಿಯು ಉದ್ಯೋಗ ಕಡಿತಗಳಿಗೆ ಮುಂದಾಗಿರುವುದೇಕೆ ಎಂಬುದನ್ನು ವಿವರಿಸಿರುವುದರ ಜೊತೆಗೆ ಕೃತಕ ಬುದ್ಧಿಮತ್ತೆ (AI) ಇದು ಭವಿಷ್ಯದ ತಂತ್ರಜ್ಞಾನ ಜಗತ್ತನ್ನು ಬದಲಿಸಲಿರೋ ಅಂಶ ಎಂಬುದು ನಾಡೆಲ್ಲಾ ಬರೆದ ಪತ್ರದಲ್ಲಿ ಬಹಿರಂಗವಾಗಿರೋ ಅಂಶ. ʼಇದು ಬದಲಾವಣೆಯ ಸಮಯʼ ಎಂದು ಉಲ್ಲೇಖಿಸಿರುವ ಅವರು ವಿವರಿಸಿರುವುದೇನೆಂದರೆ “ಕೃತಕ ಬುದ್ಧಿಮತ್ತೆಯಲ್ಲಿನ ಪ್ರಗತಿಯು ಕಂಪ್ಯೂಟಿಂಗ್‌ನ ಹೊಸ ಅಲೆಯನ್ನು ಪ್ರಾರಂಭಿಸುತ್ತಿದೆ. ಕಂಪನಿಯು ಭವಿಷ್ಯದ ದೀರ್ಘಾವಧಿಯ ಅವಕಾಶಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದು ಕೃತಕ ಬುದ್ಧಿಮತ್ತೆ (AI)ಯು ಅಂತಹ ನಿರ್ಣಾಯಕ ಹೂಡಿಕೆ ಮಾಡಬಹುದಾದ ಕ್ಷೇತ್ರವಾಗಿದೆ. ಹಾಗಾಗಿಯೇ ಕಂಪನಿಯು ಈ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಯೋಚಿಸುತ್ತಿದೆ. Open AIನ ಸ್ಟಾರ್ಟಪ್‌ ಗಳಾದ ಚಾಟ್‌ಜಿಪಿಟಿ, ಡಾಲ್-ಇ ಗಳಲ್ಲಿ ಕಂಪನಿಯು 10 ಬಿಲಿಯನ್‌ ಡಾಲರ್‌ಗಳನ್ನು ಹೂಡಿಕೆ ಮಾಡಲು ಮಾತು ಕತೆ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ತನ್ನ Azure OpenAI (ಕೃತಕ ಬುದ್ಧಿಮತ್ತೆ) ಸೇವೆಗಳ ಭಾಗವಾಗಿ ಚಾಟ್‌ಜಿಪಿಟಿಗಳನ್ನು ಗ್ರಾಹಕರಿಗೆ ನೀಡಲು ಮೈಕ್ರೋಸಾಫ್ಟ್‌ ಯೋಚಿಸುತ್ತಿದೆ”

ಹೀಗಾಗಿ ಈ ವ್ಯವಸ್ಥೆಯನ್ನುಅಳವಡಿಸಿಕೊಳ್ಳುವ ಭಾಗವಾಗಿ ಕಂಪನಿಯು ತನ್ನ ಮರು ರಚನೆಗಳನ್ನು ನಡೆಸಲು ಮುಂದಾಗಿದ್ದು ಇದರ ಭಾಗವಾಗಿಯೇ ವೆಚ್ಚಕಡಿತ, ಉದ್ಯೋಗ ಕಡಿತಗಳು ಸಂಭವಿಸಿವೆ ಎನ್ನುವುದು ನಾಡೆಲ್ಲಾ ಉಲ್ಲೇಖಿಸಿರುವ ಅಂಶ. ಅಲ್ಲದೇ ಮರುರಚನೆಯ ಭಾಗವಾಗಿ ಕಂಪನಿಯು ಭವಿಷ್ಯದ ದೀರ್ಘಾವಧಿ ಯೋಜನೆಗಳಿಗೆ ಹೂಡಿಕೆ ಮಾಡುತ್ತಿದ್ದು ಕೃತಕ ಬುದ್ಧಿಮತ್ತೆ (AI) ಭವಿಷ್ಯದ ನಿರ್ಣಾಯಕ ಕ್ಷೇತ್ರ ಎಂಬುದನ್ನೂ ಕೂಡ ಅವರು ಉಲ್ಲೇಖಿಸಿದ್ದಾರೆ ಎಂಬುದು ಗಮನಾರ್ಹ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!