ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ಪ್ರಧಾನಿ, ರಾಷ್ಟ್ರಪತಿ ಮತ್ತು ಯಾವುದೇ ವಿವಿಐಪಿ ವ್ಯಕ್ತಿಯ ಸುರಕ್ಷತೆಗೆ ನಾವು Z ಪ್ಲಸ್ ಸೆಕ್ಯುರಿಟಿ ನೀಡಿರುವುದನ್ನು ನೋಡಿರುತ್ತೇವೆ.
ಆದರೆ ಇಲ್ಲಿ ಒಂದು ಮರಕ್ಕೆ 24 ಗಂಟೆ ಝಡ್ ಪ್ಲಸ್ (Z+ security) ಸೆಕ್ಯುರಿಟಿ ನೀಡಲಾಗುತ್ತದೆ ಎಂದು ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದು.
ಆದರೆ ಇದು ನಿಜ. ಒಂದು ವಿವಿಐಪಿ ಮರವೂ ಇದೆ, ಅದರ ಸುರಕ್ಷತೆಗಾಗಿ 24 ಗಂಟೆ ಗಾರ್ಡ್‌ಗಳು ನೇಮಕ ಆಗಿರುತ್ತಾರೆ. ಅದು ಕೂಡ ಭಾರತದಲ್ಲಿ.
ಈ ಮರಕ್ಕೆ ಇಷ್ಟೊಂದು ಬಿಗಿ ಭದ್ರತೆ ಏಕೆ ನೀಡಲಾಗುತ್ತದೆ ಅಂದರೆ. ನಾವು ಇದೀಗ ಭಗವಾನ್ ಗೌತಮ ಬುದ್ಧನಿಗೆ ಜ್ಞಾನೋದಯವಾದ ನಿಜವಾದ ‘ಬೋಧಿ ವೃಕ್ಷ’ದ ಬಗ್ಗೆ ಹೇಳುತ್ತಿದ್ದೇವೆ.
ಇದೀಗ ಭಾರತದಲ್ಲಿ ಭಾರೀ ಚರ್ಚೆಯಲ್ಲಿರುವ ಹೈ ಸೆಕ್ಯುರಿಟಿ ಮರ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ಮತ್ತು ವಿದಿಶಾ ನಡುವಿನ ಸಲಾಮತ್‌ಪುರ ಬೆಟ್ಟಗಳಲ್ಲಿದೆ. ಈ ವಿಶೇಷ ಮರವನ್ನು ಶ್ರೀಲಂಕಾದ ಅಂದಿನ ಪ್ರಧಾನಿ ಮಹಿಂದ್ರ ರಾಜಪಕ್ಸೆ 2012ರಲ್ಲಿ ತಮ್ಮ ಭಾರತ ಪ್ರವಾಸದ ಸಂದರ್ಭದಲ್ಲಿ ನೆಟ್ಟರು ಎಂದು ಹೇಳಲಾಗುತ್ತದೆ. ಈ ಮರದ ಸೆಕ್ಯೂರಿಟಿಗೆ ಸರ್ಕಾರದಿಂದ ಝಡ್ ಪ್ಲಸ್ ಸೆಕ್ಯೂರಿಟಿಯನ್ನು ಒದಗಿಸಲಾಗಿದೆ. ದಿನದ 24 ಗಂಟೆಯೂ ಈ ಮರವನ್ನು ಕಾಯಲಾಗುತ್ತಿದೆ.
ಇನ್ನು ಈ ಮರ ತುಂಬಾ ಅಮೂಲ್ಯವಾದುದರಿಂದ ಮಧ್ಯಪ್ರದೇಶ ಸರ್ಕಾರ ಇದರ ಸುರಕ್ಷತೆಗಾಗಿ ವಾರ್ಷಿಕ ಸುಮಾರು 12 ರಿಂದ 15 ಲಕ್ಷ ರೂಪಾಯಿ ಖರ್ಚು ಮಾಡುತ್ತದೆ. ಈ ಮರ 100 ಎಕರೆ ವಿಸ್ತೀರ್ಣದ ಬೆಟ್ಟದ ಮೇಲೆ 15 ಅಡಿ ಎತ್ತರದ ಕಬ್ಬಿಣದ ಬೇಲಿಗಳ ಒಳಗೆ ಇದೆ ಎಂದು ಹೇಳಲಾಗುತ್ತದೆ. ಇದನ್ನು ಬೋಧಿ ವೃಕ್ಷ ಎಂದು ಕರೆಯುತ್ತಾರೆ.
ಮಧ್ಯ ಪ್ರದೇಶದಲ್ಲಿರುವ ಬೋಧಿ ವೃಕ್ಷದ ಮೇಲ್ವಿಚಾರಣೆಯನ್ನು ಡಿಎಂ (ಜಿಲ್ಲೆಯ ಅಧಿಕಾರಿ) ಸ್ವತಃ ಮಾಡುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಈ ಮರಕ್ಕೆ ನೀರುಣಿಸಲು ಪ್ರತ್ಯೇಕ ನೀರಾವರಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಕೃಷಿ ಇಲಾಖೆಯ ಅಧಿಕಾರಿಗಳು ಸಹ ಸಮಯ ಸಮಯಕ್ಕೆ ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿಗೆ ತಲುಪಲು ವಿದಿಶಾ ಹೆದ್ದಾರಿಯಿಂದ ಬೆಟ್ಟದವರೆಗೆ ಪಕ್ಕಾ ರಸ್ತೆ ನಿರ್ಮಿಸಲಾಗಿದೆ. ಇದರಿಂದ ಪ್ರವಾಸಿಗರು ಸುಲಭವಾಗಿ ಇಲ್ಲಿಗೆ ತಲುಪಬಹುದು. ಇದೊಂದು ಪ್ರವಾಸಿ ತಾಣವಾಗಿಯೂ ಪ್ರಸಿದ್ಧಿಯಾಗಿದೆ
ಭಗವಾನ್ ಬುದ್ಧರಿಗೆ ಜ್ಞಾನೋದಯವಾದ ಮರ: ಭಾರತದಲ್ಲಿ ಬೌದ್ಧ ಧರ್ಮ ಸ್ಥಾಪನೆ ಮಾಡಿ ವಿಶ್ವದಾದ್ಯಂತ ಪ್ರಚಾರ ಮಾಡಿದ ಭಗವಾನ್ ಬುದ್ಧ ಈ ಮರದ ಕೆಳಗೆ ಕುಳಿತು ಪ್ರಾರ್ಥನೆ ಮಾಡಿದ ನಂತರ ಜ್ಞಾನೋದಯವಾಯಿತು ಎಂದು ಹೇಳಲಾಗುತ್ತದೆ. ಆದರೆ, ಇದು ಮೂಲ ಮರವಲ್ಲ. ಈಗಾಗಲೇ ಮೂಲ ಮರವು 1857ರಲ್ಲಿಯೇ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಅವಧಿಯಲ್ಲಿ ಪ್ರಕೃತಿ ವಿಕೋಪದಿಂದ ಹಾನಿಗೀಡಾಗಿದೆ ಎಂದು ಹೇಳಲಾಗುತ್ತಿದೆ. ಇದಾದ ನಂತರ ಲಾರ್ಡ್ ಕನ್ನಿಂಗ್ ಹ್ಯಾಮ್ ನೆಟ್ಟಿದ್ದರಾದರೂ ಅದು ಕೂಡ ನಾಶವಾಗಿದೆ. ಇದಾದ ನಂತರ ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಷೆ ಅವರು ತಂದು ನೆಟ್ಟಿರುವ ಮರ ಇದಾಗಿದೆ ಎಂದು ಹೇಳಲಾಗುತ್ತಿದೆ.
ಭಾರತೀಯ ಇತಿಹಾಸ ತಜ್ಞರು ಹೇಳುವಂತೆ ಗೌತಮ ಬುದ್ಧನಿಗೆ ಜ್ಞಾನೋದಯವಾದ ಬೋಧಿ ವೃಕ್ಷವು 1857ರ ನೈಸರ್ಗಿಕ ವಿಕೋಪದಿಂದ ನಾಶವಾಯಿತು ಎಂದು ಹೇಳುತ್ತಾರೆ. ನಂತರ 1880ರಲ್ಲಿ ಬ್ರಿಟಿಷ್ ಅಧಿಕಾರಿ ಲಾರ್ಡ್ ಕನ್ನಿಂಗ್ ಹ್ಯಾಮ್ ಶ್ರೀಲಂಕಾದ ಅನುರಾಧಪುರಂನಿಂದ ಬೋಧಿ ವೃಕ್ಷದ ಒಂದು ಕೊಂಬೆಯನ್ನು ತಂದು ಬೋಧಗಯಾದಲ್ಲಿ ಮತ್ತೆ ನೆಟ್ಟರು. ಅದು ನಂತರ ಭಾರತದ ಬೋಧಿ ವೃಕ್ಷವಾಗಿ ಒಂದು ಅವಧಿವರೆಗೆ ಬೆಳೆಯುತ್ತದೆ.
ಕ್ರಿ.ಪೂ. ಮೂರನೇ ಶತಮಾನದಲ್ಲಿ ಭಾರತದ ಚಕ್ರವರ್ತಿ ಅಶೋಕ ಅವರು ಬೌದ್ಧ ಧರ್ಮದ ಪ್ರಚಾರಕ್ಕಾಗಿ ಸಾಕಷ್ಟು ಪ್ರಯತ್ನಿಸಿದರು ಎಂದು ಇತಿಹಾಸದಲ್ಲಿ ಉಲ್ಲೇಖ ಮಾಡಲಾಗಿದೆ. ಈ ಸಂದರ್ಭದಲ್ಲಿ ಅವರು ತಮ್ಮ ಮಗ ಮಹೇಂದ್ರ ಮತ್ತು ಮಗಳು ಸಂಘಮಿತ್ರಾಳನ್ನು ಬೌದ್ಧ ಧರ್ಮ ಪ್ರಚಾರಕ್ಕೆ ಶ್ರೀಲಂಕಾಗೆ ಕಳುಹಿಸಿದರು. ಅವರನ್ನು ಶ್ರೀಲಂಕಾಗೆ ಕಳುಹಿಸುವಾಗ ಅವರೊಂದಿಗೆ ಬುದ್ಧನಿಗೆ ಜ್ಞಾನೋದಯವಾಗಿದ್ದ ಬೋಧಿ ವೃಕ್ಷದ ಒಂದು ಕೊಂಬೆಯನ್ನು ಕಳುಹಿಸಿಕೊಟ್ಟಿದ್ದರು. ಇಲ್ಲಿನ ಮೂಲಕ ಬೋಧಿ ವೃಕ್ಷದ ಒಂದು ಕೊಂಬೆಯನ್ನು ಶ್ರೀಲಂಕಾದಲ್ಲಿ ನೆಟ್ಟು ಬೆಳೆಸಿದ್ದರು. ಈಗಲೂ ಶ್ರೀಲಂಕಾದ ದೇಶದ ಅನುರಾಧಪುರದಲ್ಲಿ ಮೂಲ ಬೋಧಿ ವೃಕ್ಷದಿಂದ ಬೆಳೆಯಲಾದ ಮರವಿದೆ.