ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದು ಕುಟುಂಬ ತನ್ನ ಲಾಭಕ್ಕಾಗಿ ಸಂವಿಧಾನವನ್ನು ತಿದ್ದುಪಡಿ ಮಾಡಿತ್ತು ಎಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಾಗ್ದಾಳಿ ನಡೆಸಿದ್ದಾರೆ.
ಸಂವಿಧಾನ ಜಾರಿಗೆ 75 ವರ್ಷ ಪೂರ್ಣಗೊಂಡ ಹಿನ್ನೆಲೆ ನಡೆದ ವಿಶೇಷ ಚರ್ಚೆಯಲ್ಲಿ ಮಾತನಾಡಿದ ಅವರು, ನೆಹರೂ ಉತ್ತರಾಧಿಕಾರಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರು ಕುಟುಂಬ ಮತ್ತು ರಾಜವಂಶಕ್ಕೆ ಸಹಾಯವಾಗುವಂತೆ ಸಂವಿಧಾನವನ್ನು ತಿದ್ದುಪಡಿ ಮಾಡುತ್ತಿದ್ದರು. ಈ ತಿದ್ದುಪಡಿಗಳು ಪ್ರಜಾಪ್ರಭುತ್ವವನ್ನು ಬಲಪಡಿಸಲು ಅಲ್ಲ ಅಧಿಕಾರದಲ್ಲಿರುವವರನ್ನು ರಕ್ಷಿಸಲು ಮಾಡಲಾಯಿತು ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜೀವ್ ಗಾಂಧಿ ಆಡಳಿತದಲ್ಲಿ ಶಾ ಬಾನೋ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ರದ್ದುಗೊಳಿಸಿರುವುದನ್ನು ಉಲ್ಲೇಖಿಸಿ, ಕಾಂಗ್ರೆಸ್ ಮಹಿಳಾ ವಿರೋಧಿ ಎಂದು ಜರಿದರು. ರಾಜೀವ್ ಗಾಂಧಿ ಅವರು ಲೋಕಸಭೆಯಲ್ಲಿ 426 ಸದಸ್ಯರನ್ನು ಹೊಂದಿದ್ದರು. ರಾಜ್ಯಸಭೆಯಲ್ಲಿ 159 ಸದಸ್ಯರನ್ನು ಹೊಂದಿದ್ದರು. ಆದರೆ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸುವ ದೃಢತೆ ತೋರಲಿಲ್ಲ. ನಾವು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಒಟ್ಟು ಸ್ಥಾನಗಳ ಮೂರನೇ ಒಂದು ಭಾಗವನ್ನು ಮಹಿಳೆಯರಿಗೆ ಮೀಸಲಿಡಲು ಶಾಸನ ಜಾರಿ ಮಾಡಲಿದ್ದೇವೆ ಎಂದಿದ್ದಾರೆ.
ತುರ್ತು ಪರಿಸ್ಥಿತಿ ಉಲ್ಲೇಖಿಸಿದ ಅವರು ರಾಜಕೀಯ ಭಿನ್ನಾಭಿಪ್ರಾಯ ಹೊಂದಿರುವ ನಾಯಕರನ್ನು ಈ ಅವಧಿಯಲ್ಲಿ ಬಂಧಿಸಲಾಗಿತ್ತು ಎಂದ ಇದೇ ವೇಳೆ ಅವರು ಉಲ್ಲೇಖಿಸಿದ್ದಾರೆ.