August 25, 2026
Tuesday, August 25, 2026
spot_img

ಸರ್ಕಾರ ಜಾಲಿ ಮೂಡ್‌ನಲ್ಲಿದೆ, ರೈತರು ಕಂಗಾಲಾಗಿದ್ದಾರೆ: ಸಾಲಮನ್ನಾಕ್ಕೆ ಆರ್‌.ಆಶೋಕ್‌ ಒತ್ತಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯದಲ್ಲಿ ಬರದ ತಾಂಡವ ನಡೆಯುತ್ತಿದೆ. ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಆಡಳಿತರೂಢ ಕಾಂಗ್ರೆಸ್ ನಾಯಕರು ಮತ್ತು ಶಾಸಕರು ದೆಹಲಿಗೆ ಪ್ರವಾಸ ಕೈಗೊಂಡು ಜಾಲಿ ಮೂಡ್‌ನಲ್ಲಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತೀವ್ರವಾಗಿ ಕಿಡಿಕಾರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರ ಮತ್ತು ಬೆಳೆ ನಷ್ಟದಿಂದ ಕಂಗಾಲಾಗಿರುವ ರೈತರಿಗೆ ಪ್ರತಿ ಎಕರೆಗೆ ತಲಾ 50 ಸಾವಿರ ರೂ. ತುರ್ತು ಪರಿಹಾರ ಘೋಷಿಸಬೇಕು. ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿರುವ ರೈತರ ಕೃಷಿ ಸಾಲವನ್ನು ಕನಿಷ್ಠ 1 ಲಕ್ಷ ರೂ.ವರೆಗೆ ತಕ್ಷಣವೇ ಮನ್ನಾ ಮಾಡಬೇಕು ಹಾಗೂ ಮಳೆಯಿಲ್ಲದೆ ಒಣಗುತ್ತಿರುವ ತಾಲೂಕುಗಳನ್ನು ತಕ್ಷಣವೇ ಅಧಿಕೃತವಾಗಿ ಬರಪೀಡಿತ ಎಂದು ಸರ್ಕಾರ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸರ್ಕಾರದ ನೀತಿಗೆ ಲೇವಡಿ:

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀರಿನ ಕೊರತೆಯಿಂದಾಗಿ ರೈತರಿಗೆ ಬೆಳೆ ಬೆಳೆಯಬೇಡಿ ಎಂದು ಸಲಹೆ ನೀಡಿರುವುದನ್ನು ಅಶೋಕ್ ತೀವ್ರವಾಗಿ ಖಂಡಿಸಿದರು. ರೈತರು ಬೆಳೆ ಬೆಳೆಯಬಾರದು ಎಂದರೆ ಅವರ ಜೀವನೋಪಾಯಕ್ಕೆ ಏನು ಮಾಡಬೇಕು? ಹಾಗಾದರೆ ಸರ್ಕಾರವೇ ರೈತರಿಗೆ ‘ಸಾರ್ವತ್ರಿಕ ರಜೆ’ ಘೋಷಿಸಿಬಿಡಲಿ ಎಂದು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ:

ಬಿಜೆಪಿ ಸರ್ಕಾರದ ಆಡಳಿತದ ನೆನಪು:

ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ರೈತರಿಗೆ ಕೇಂದ್ರದ ನಿಯಮಾವಳಿಗಳಿಗಿಂತ ದುಪ್ಪಟ್ಟು ಪರಿಹಾರ ನೀಡಲಾಗಿತ್ತು ಎಂದು ನೆನಪಿಸಿದ ಅಶೋಕ್, ಪ್ರಸ್ತುತ ಕಾಂಗ್ರೆಸ್ ಸರ್ಕಾರವು ಆಡಳಿತಾತ್ಮಕವಾಗಿ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು. ತಕ್ಷಣವೇ ಜಿಲ್ಲಾ ಉಸ್ತುವಾರಿ ಸಚಿವರುಗಳು ಜಿಲ್ಲೆಗಳಿಗೆ ಭೇಟಿ ನೀಡಿ ಜಂಟಿ ಸಮೀಕ್ಷೆ ನಡೆಸಿ, ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಮತ್ತು ಎಸ್‌ಡಿಆರ್‌ಎಫ್ (SDRF) ನಿಧಿಯಿಂದ ರೈತರಿಗೆ ಮಧ್ಯಂತರ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !