September 23, 2026
Wednesday, September 23, 2026
spot_img

ಉಪಹಾರ ಯೋಜನೆಗೆ ಚಾಲನೆ: ಮಕ್ಕಳೊಂದಿಗೆ ಕುಳಿತು ಪೊಂಗಲ್ ಸವಿದ ತಮಿಳುನಾಡು ಸಿಎಂ ವಿಜಯ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಶಾಲಾ ಮಕ್ಕಳ ಪೌಷ್ಟಿಕಾಂಶ ವೃದ್ಧಿ ಹಾಗೂ ಹಸಿವು ಮುಕ್ತ ಶಿಕ್ಷಣಕ್ಕೆ ಒತ್ತು ನೀಡಿರುವ ತಮಿಳುನಾಡು ಸರ್ಕಾರ, ಉಚಿತ ಉಪಹಾರ ಯೋಜನೆಯನ್ನು ಇದೀಗ ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಿಗೂ ವಿಸ್ತರಿಸಿದೆ. ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಇಂದು ಈ ವಿಸ್ತರಿತ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

ಚೆನ್ನೈನ ಗಾಂಧಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ತಾವೇ ಸ್ವತಃ ಉಪಹಾರ ಬಡಿಸುವ ಮೂಲಕ ಮುಖ್ಯಮಂತ್ರಿಗಳು ಈ ನೂತನ ಸೇವೆಗೆ ಚಾಲನೆ ಕೊಟ್ಟರು. ಆ ಬಳಿಕ ಮಕ್ಕಳೊಂದಿಗೆ ಬೆರೆತು, ಅವರ ಜತೆಯಲ್ಲೇ ಕುಳಿತು ಪೊಂಗಲ್ ಸವಿದ ವಿಜಯ್, ನಂತರ ತರಗತಿಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿ ಯೋಗಕ್ಷೇಮ ವಿಚಾರಿಸಿದರು.

ʼಪೆರುಂತಲೈವರ್ ಕಾಮರಾಜರ್ ಉಚಿತ ಉಪಹಾರ ಯೋಜನೆʼ

ಈ ಹಿಂದೆ ‘ಮುಖ್ಯಮಂತ್ರಿಗಳ ಉಪಹಾರ ಯೋಜನೆ’ ಎಂದು ಕರೆಯಲ್ಪಡುತ್ತಿದ್ದ ಈ ಮಹತ್ವಾಕಾಂಕ್ಷೆಯ ಕಾರ್ಯಕ್ರಮಕ್ಕೆ ಇತ್ತೀಚೆಗಷ್ಟೇ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕೆ. ಕಾಮರಾಜ್ ಅವರ ಸ್ಮರಣಾರ್ಥ ‘ಪೆರುಂತಲೈವರ್ ಕಾಮರಾಜರ್ ಮುಂಜಾನೆಯ ಉಚಿತ ಉಪಹಾರ ಯೋಜನೆ’ ಎಂದು ಮರುನಾಮಕರಣ ಮಾಡಲಾಗಿತ್ತು. ಈ ಮೊದಲು ಕೇವಲ ಪ್ರಾಥಮಿಕ ಶಾಲಾ ಮಕ್ಕಳಿಗೆ ಸೀಮಿತವಾಗಿದ್ದ ಈ ಯೋಜನೆಯ ಲಾಭ ಈಗ 6 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೂ ಸಿಗಲಿದೆ.

ಇದನ್ನೂ ಓದಿ:

15.30 ಲಕ್ಷ ಮಕ್ಕಳಿಗೆ ಸಿಗಲಿದೆ ಉಪಹಾರ

ಯೋಜನೆ ವಿಸ್ತರಣೆಯಾಗಿರುವುದರಿಂದ ರಾಜ್ಯದ ಇನ್ನು ಸುಮಾರು 15.30 ಲಕ್ಷ ಹೆಚ್ಚುವರಿ ವಿದ್ಯಾರ್ಥಿಗಳಿಗೆ ಪ್ರತಿ ದಿನ ಬೆಳಿಗ್ಗೆ ಬಿಸಿಬಿಸಿ ಉಪಹಾರ ಸಿಗಲಿದೆ. ತಮಿಳುನಾಡಿನಾದ್ಯಂತ ಇರುವ 15,454 ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳನ್ನು ಈ ಯೋಜನೆಯ ವ್ಯಾಪ್ತಿಗೆ ತರಲಾಗಿದೆ. ಈ ಪ್ರಕ್ರಿಯೆಗಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ತಮಿಳುನಾಡು ಸರ್ಕಾರ ಹೆಚ್ಚುವರಿಯಾಗಿ 217.63 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ. ಇದರೊಂದಿಗೆ ಈ ಉಪಹಾರ ಯೋಜನೆಯ ಒಟ್ಟು ಬಜೆಟ್ ಮೊತ್ತ 724 ಕೋಟಿ ರೂ.ಗೆ ಏರಿಕೆಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !