ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ₹33 ಸಾವಿರ ಕೋಟಿಯಷ್ಟು ಬೆಳೆ ನಷ್ಟವಾಗಿದೆ. ಜಿಲ್ಲಾಧಿಕಾರಿಗಳ ಬ್ಯಾಂಕ್ ಖಾತೆಗಳಲ್ಲಿ ₹800 ಕೋಟಿ ಹಣವಿದೆ ಎನ್ನುವ ಸರ್ಕಾರ, ಯಾಕಿನ್ನೂ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಕೊಟ್ಟಿಲ್ಲ?’ ಎಂದು ಜೆಡಿಎಸ್ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ದಾಸೇಗೌಡನದೊಡ್ಡಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಗೆ ಪರಿಹಾರ ಕೊಡದಿದ್ದರೆ, ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಯಾವ ಉದ್ದೇಶಕ್ಕೆ ಹಣ ಇಟ್ಟಿದ್ದಾರೆ. ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ. ನುಡಿದಂತೆ ನಡೆದಿದ್ದೇವೆ ಅಂತಾರೆ. ಅದು ಇದೇನಾ ಎಂದರು.
ಫಸಲ್ ಭೀಮಾ ಯೋಜನೆಯಡಿ ಖಾಸಗಿ ಕಂಪನಿಗಳಿಗೆ ಹೆಚ್ಚಿನ ಲಾಭವಾಗುತ್ತಿದೆ. ಶಾಲಾ ಮಕ್ಕಳಿಗೆ ಬಸ್ ವ್ಯವಸ್ಥೆಯೇ ಇಲ್ಲ. ಮಕ್ಕಳು ಜೆಸಿಬಿಯಲ್ಲಿ ಶಾಲೆಗೆ ಹೋಗುತ್ತಿದ್ದಾರೆ. ನಿತ್ಯ ವರ್ಣಯಮ ಫೋಟೊ ಹಾಕೊಂಡು ಫೋಸ್ ಕೊಡ್ತಾರೆ. ಆದರೆ, ವಾಸ್ತವ ಸ್ಥಿತಿಯೇ ಬೇರೆ ಇದೆ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರದ ತಪ್ಪುಗಳನ್ನು ಏಕಾಂಗಿಯಾಗಿ ಪ್ರಶ್ನಿಸುವುದು ಕುಮಾರಸ್ವಾಮಿ ಒಬ್ಬನೇ. ಎಲ್ಲರೂ ಮೌನಕ್ಕೆ ಶರಣಾಗಿದ್ದಾಗ ಅಕ್ರಮ ಸಂಪತ್ತು, ವರ್ಗಾವಣೆ ದಂಧೆ ಬಗ್ಗೆ ಧ್ವನಿ ಎತ್ತಿದ್ದು ನಾನು. ಇಲ್ಲಿಯವರೆಗೂ ನಾನು ಎತ್ತಿದ ವಿಷಯಗಳಿಗೆ ಸರ್ಕಾರ ಒಂದಕ್ಕೂ ಉತ್ತರ ಕೊಟ್ಟಿಲ್ಲ ಎಂದು ಕಿಡಿಕಾರಿದರು.
ರಾಜ್ಯಕ್ಕೆ ಭೇಟಿ ನೀಡಿರುವ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಜನರ ಜನರ ಕಷ್ಟ-ಸುಖ ಕೇಳಲು ಬಂದಿಲ್ಲ. ಜನರ ಹಣ ಲೂಟಿ ಮಾಡುವ ನಿಗಮ ಮಂಡಳಿ ನೇಮಕ ಮಾಡುವುದಕ್ಕೆ ಬರುತ್ತಿದ್ದಾರೆ ಎಂದರು.