ಹೊಸ ದಿಗಂತ ವರದಿ,ವಿಜಯಪುರ:
ರಾಜ್ಯಪಾಲರಿಗೆ ನಮ್ಮ ಸುಗ್ರೀವಾಜ್ಞೆ ಕುರಿತು ತಪ್ಪು ಗ್ರಹಿಕೆ ಇದ್ದು, ಈ ಬಗ್ಗೆ ಸ್ಪಷ್ಟಪಡಿಸಿ, ಅದನ್ನು ಪುನರ್ ಕಳುಹಿಸುತ್ತೇವೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ಕೆಲ ವಾರಗಳಿಂದ ಮೈಕ್ರೋ ಫೈನಾನ್ಸ್ ಹಾಗೂ ಸಣ್ಣ ಸಾಲಗಾರರ ವಸೂಲಿಗಾಗಿ ಒತ್ತಾಯ ಪೂರ್ವಕ ಕ್ರಮ ಜರುಗಿಸಲಾಗುತ್ತಿದೆ. ಇದರಿಂದ ಬಹಳಷ್ಟು ಪ್ರಮಾಣದಲ್ಲಿ ಸಾಮಾಜಿಕ ಅಸಮಾಧಾನ ಹಾಗೂ ಅನೇಕ ಕುಟುಂಬಗಳು ಧೈರ್ಯ ಕಳೆದುಕೊಂಡು ಆತ್ಮಹತ್ಯೆ ಮಾಡಿ ಕೊಳ್ಳುವ ಸ್ಥಿತಿಗೆ ಬಂದಿದ್ದು ಗಮನಿಸಿದ್ದೇವೆ ಎಂದರು.
ಹೀಗಾಗಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ರೂಪದಲ್ಲಿ ಅನುಮತಿಗೆ ರಾಜ್ಯಪಾಲರಿಗೆ ನಾವು ಕಳುಹಿಸಿದ್ದೇವೆ. ಆದರೆ ರಾಜ್ಯಪಾಲರು ಅದನ್ನು ವಾಪಸ್ ಕಳುಹಿಸಿದ್ದಾರೆ. ಕೆಲ ತೊಂದರೆ ಆಗುವ ಅಂಶಗಳನ್ನು ಪ್ರಸ್ತಾಪಿಸಿ ವಾಪಸ್ ಕಳುಹಿಸಿದ್ದಾರೆ ಎಂದು ಹೇಳಿದರು.
ಈ ಸುಗ್ರೀವಾಜ್ಞೆಯಲ್ಲಿ, ರಾಜ್ಯಪಾಲರು ಅದನ್ನು ಕೆಲ ಪಾಯಿಂಟ್ ಇಟ್ಟುಕೊಂಡು ವಾಪಸ್ ಕಳುಹಿಸಿದ್ದಾರೆ. ನೋಂದಾಯಿತವಲ್ಲದ, ಅನ್ ರೆಜಿಸ್ಟರ್, ಸಾಲ ನೀಡಲು ಲೈಸನ್ಸ್ ಹೊಂದಿರದ, ಸಾಲ ಖಾಸಗಿಯಾಗಿ ನೀಡಿ ಹೆಚ್ಚಿನ ಬಡ್ಡಿ ವಸೂಲಿ ಮಾಡಿದರೆ ಅದು ವಸೂಲಿಗೆ ಯೋಗ್ಯವಲ್ಲ. ಕಾನೂನು ಪ್ರಕಾರ ನೀಡಿದ ಸಾಲ ಮಾತ್ರ ವಸೂಲಿಗೆ ಅರ್ಹವಾಗಿದೆ ಎಂದು ಹೇಳಿದರು.
ರಾಜ್ಯಪಾಲರು, ಅಕ್ರಮವಾಗಿ ಹಣ ಕೊಡುವವರಿಗೆ ಸಂವಿಧಾನದ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಇವರು ಅಕ್ರಮವಾಗಿ ಸಾಲ ಕೊಟ್ಟವರು ಸಂವಿಧಾನ ವಿರೋಧಿ ನೀತಿಯಾಗಿದೆ. ಆರ್ ಬಿ ಐ ಅಡಿಯಲ್ಲಿ ನೋಂದಾಯಿತ ಹಾಗೂ ಆರ್ ಬಿ ಐ ರೂಲ್ಸ್ ಫಾಲೋ ಮಾಡುವವರಿಗೆ ನಮ್ಮ ವಿರೋಧ ಇಲ್ಲ ಎಂದರು.
3 ವರ್ಷದಿಂದ ಹಿಡಿದು 10 ವರ್ಷದ ವರೆಗೂ ಶಿಕ್ಷೆ ವಿಧಿಸಲು ನಿರ್ಣಯ ಮಾಡಲಾಗಿತ್ತು. ಜೊತೆಗೆ 5 ಲಕ್ಷ ದಂಡ ವಿಧಿಸುವ ಗುರಿ ನಾವು ಹೊಂದಿದ್ದೇವು. ಇದೆಲ್ಲವನ್ನೂ ರಾಜ್ಯಪಾಲರು ಪ್ರಶ್ನೆ ಮಾಡಿ ಸುಗ್ರೀವಾಜ್ಞೆ ವಾಪಸ್ ಕಳುಹಿಸಿದ್ದಾರೆ ಎಂದರು.
ಈ ಎಲ್ಲ ಘಟನೆಯನ್ನು ನಿರ್ವಹಣೆ ಮಾಡುವ ಅಸ್ತ್ರ ಸದ್ಯಕ್ಕೆ ಇಲ್ಲ. ಹೀಗಾಗಿ ಬಡವರಿಗಾಗಿ, ಕೆಳ ಸಮುದಾಯದವರಿಗಾಗಿ ಸುಗ್ರೀವಾಜ್ಞೆ ತಂದಿದ್ದೇವೆ ಎಂದರು.