ಕಡಲ ತೀರದಲ್ಲಿ ಬೃಹತ್ ಸ್ವಚ್ಛತಾ ಕಾರ್ಯ: ರಾಜ್ಯಪಾಲರಿಂದ ಚಾಲನೆ

ಹೊಸದಿಗಂತ ವರದಿ ಕಾರವಾರ:

ಅಂತರಾಷ್ಟ್ರೀಯ ಕಡಲ ತೀರ ಸ್ವಚ್ಛತಾ ದಿನಾಚರಣೆ ಮತ್ತು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ದೇಶಾದ್ಯಂತ 75 ಕಡಲ ತೀರಗಳಲ್ಲಿ ಹಮ್ಮಿಕೊಳ್ಳಲಾದ ಸ್ವಚ್ಛತಾ ಅಭಿಯಾನದ ಅಂಗವಾಗಿ ಕಾರವಾರ ಕಡಲ ತೀರದಲ್ಲಿ ಬೃಹತ್ ಸ್ವಚ್ಛತಾ ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅವರು ಚಾಲನೆ ನೀಡಿದರು.
ನಗರದ ರವೀಂದ್ರನಾಥ್ ಟ್ಯಾಗೋರ್ ಕಡಲ ತೀರದಲ್ಲಿ ಸಮುದ್ರ ಪೂಜೆ ನೆರವೇರಿಸಿದ ರಾಜ್ಯಪಾಲರು ಕಡಲ ತೀರದಲ್ಲಿ ಕಸ ಆಯ್ದು ಕಡಲ ತೀರದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಕಡಲ ತೀರದಲ್ಲಿ ಗಿಡ ನೆಟ್ಟ ರಾಜ್ಯಪಾಲರು ಸ್ವಚ್ಛತಾ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳುವ ಸಂಘ ಸಂಸ್ಥೆಗಳಿಗೆ ಸ್ವಚ್ಛತಾ ಪರಿಕರಗಳನ್ನು ವಿತರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ನೌಕಾಪಡೆಯ ಅಡ್ಮಿರಲ್ ಅತುಲ್ ಆನಂದ, ನಗರ ಸಭೆಯ ಅಧ್ಯಕ್ಷ ನಿತಿನ್ ಪಿಕಳೆ, ವಿವಿಧ ಸಂಘ ಸಂಸ್ಥೆಗಳ ನೂರಾರು ಜನರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು.
ಗೋವಾದಿಂದ ರಸ್ತೆ ಮಾರ್ಗವಾಗಿ ಆಗಮಿಸಿದ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅವರನ್ನು ಮಾಜಾಳಿ ಗಡಿಯಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತದ ವತಿಯಿಂದ ಗೌರವ ವಂದನೆಯೊಂದಿಗೆ ಬರಮಾಡಿಕೊಳ್ಳಲಾಯಿತು.
ಅರ್ಗಾದ ಸೀಬರ್ಡ್ ನೌಕಾನೆಲೆಗೆ ತೆರಳಿದ ರಾಜ್ಯಪಾಲರು ನೌಕಾನೆಲೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಶನಿವಾರ ಮುಂಜಾನೆ ಕಾರವಾರಕ್ಕೆ ಆಗಮಿಸಿದ ಅವರು ಕಡಲ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ನಂತರ ಮಯೂರವರ್ಮ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಜಿಲ್ಲಾ ಪೊಲೀಸ್ ವರಿಷ್ಠೆ ಡಾ. ಸುಮನ್ ಪನ್ನೇಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದರಿನಾಥ್ ಅವರ ಮಾರ್ಗದರ್ಶನದಲ್ಲಿ ಬಿಗಿ ಭದ್ರತೆಯ ವ್ಯವಸ್ಥೆ ಮಾಡಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!