ಅದ್ಧೂರಿಯಾಗಿ ನೆರವೇರಿದ ಶೋಭಾಯಾತ್ರೆ; ಸಾವಿರಾರು ಭಕ್ತರಿಂದ ಪ್ರಭು ಶ್ರೀರಾಮನಿಗೆ ನಮನ

ಹೊಸದಿಗಂತ ವರದಿ, ಮಾದಾಪುರ
ದೇಶದ ಬದಲಾವಣೆ ಹಿಂದೂ ಯುವ ಶಕ್ತಿಯಿಂದ ಮಾತ್ರ ಸಾಧ್ಯ, ಸಮಾಜ ಜಾಗೃತವಾಗಬೇಕಾದರೆ ಮಾತೃಶಕ್ತಿ ಜಾಗೃತರಾಗಬೇಕು. ಹಿಂದೂ ಸಮಾಜದ ಯುವ ಶಕ್ತಿ ಹಾಗೂ ಮಾತೃಶಕ್ತಿ ಒಗ್ಗಟ್ಟಾದರೆ ಸಮಾಜದ ದುಷ್ಟ ಶಕ್ತಿಗಳ ದಮನ ಸಾಧ್ಯ ಎಂದು ಹಿಂದೂ ಜಾಗರಣ ವೇದಿಕೆಯ ಪುತ್ತೂರು ಘಟಕದ ಪ್ರಧಾನ ಕಾರ್ಯದರ್ಶಿ ನರಸಿಂಹ ಶೆಟ್ಟಿ ಮಾಣಿ ಅಭಿಪ್ರಾಯಪಟ್ಟರು.
ಹಿಂದೂ ಜಾಗರಣ ವೇದಿಕೆ ಮಾದಾಪುರ ವಲಯದ ವತಿಯಿಂದ ಮಾದಾಪುರದಲ್ಲಿ ಆಯೋಜಿಸಲಾಗಿದ್ದ ದ್ವಿತೀಯ ವರ್ಷದ ರಾಮನವಮಿ ಉತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು,
ಶ್ರೀ ರಾಮ ನವಮಿಯಂದು ರಾಮನ ಆಶಯಗಳನ್ನು‌ ಹಿಂದೂ ಸಮಾಜಕ್ಕೆ ತಿಳಿಸುವ ಕೆಲಸವಾಗಬೇಕು. ರಾಮ ಧೈರ್ಯಕ್ಕೆ ಹಾಗೂ ಕಷ್ಟವನ್ನು ಹಿಮ್ಮಟ್ಟಿಸಲು ಆದರ್ಶ. ರಾಮನು ಹದಿನಾಲ್ಕು ವರ್ಷ ವನವಾಸಕ್ಕೆ ಅಂಜಲಿಲ್ಲ, ಕಷ್ಟಗಳನ್ನು ಎದುರಿಸಿ ಧೈರ್ಯದಿಂದ ವನವಾಸ ಮುಗಿಸಿದ ಮರ್ಯಾದ ಪುರುಷ ಪಿತೃವಾಕ್ಯ ಪರಿಪಾಲಕ ಶ್ರೀ ರಾಮ ಹಿಂದೂ ಸಮಾಜಕ್ಕೆ ಆದರ್ಶ ಎಂದರು.
ಇದೀಗ ಲಕ್ಷಾಂತರ ಜನರ ತ್ಯಾಗ, ಬಲಿದಾನದಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದ್ದು, ದೇಶದೊಳಗಿರುವ ಕೆಲವು ಕ್ರಿಮಿಗಳಿಗೆ ಇದನ್ನು ಸಹಿಸಲಾಗುತ್ತಿಲ್ಲ. ಅಂತಹ ದುಷ್ಟ ಶಕ್ತಿಗಳನ್ನು ಹಿಮ್ಮೆಟ್ಟಲು ನಾವು ಒಂದಾಗಿ ಹಿಂದೂ ಸಮಾಜ ಕಟ್ಟಬೇಕು ಎಂದು ಅವರು ಕರೆ ನೀಡಿದರು.
ಭಗವಾಧ್ವಜದ ಕುರಿತು ಮಾತನಾಡುವ ಮತಾಂಧರು ಕೆಂಪು ಕೋಟೆ ಮೇಲೆ ಖಲಿಸ್ಥಾನದ ಧ್ವಜ ಹಾರಿಸುವಾಗ ಮೌನವಾಗಿದ್ದರು. ಅವರಿಗೆ ಆಗ ಮಾತನಾಡಲು ಧೈರ್ಯ ಇರಲಿಲ್ಲ ಎಂದ ಅವರು, ಹಿಂದೂ ಸಮಾಜ ಸದೃಢವಾಗಿರುವ ಮಲೆನಾಡು, ಕರಾವಳಿ ಭಾಗದಲ್ಲೂ ಈಗೀಗ ಮತಾಂಧರು ಚಿಗುರಿದ್ದು, ದುಷ್ಟರ ದಮನ ಹಿಂದೂ ಸಮಾಜದಿಂದ ಆಗಬೇಕು ಎಂದು ನುಡಿದರು.
ದೇಶದ ಕಾನೂನಿಗೆ ದುಷ್ಟರು ಗೌರವ ಸಲ್ಲಿಸುತ್ತಿಲ್ಲ. ಹಿಜಾಬ್ ವಿಚಾರದಲ್ಲಿ ಅದು ಮತ್ತೊಮ್ಮೆ ಸಾಬೀತಾಗಿದೆ ದೇಶದ ಸೈನಿಕ, ಕೊಡಗಿನ ಅಲ್ತಾಫ್ ಮಡಿದಾಗ ಮತಾಂಧ ಸಂಘಟನೆಗಳ ಮೌನವೇ ಅವರ ಮನಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಟೀಕಿಸಿದರು.
ಮತಾಂಧ ಸಂಘಟನೆಗಳು ಶಿಶುನಾಳ ಶರೀಫ, ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ಕಾರ್ಯಕ್ರಮ ಮಾಡಲ್ಲ. ದೇಶದ್ರೋಹಿಗಳಿಗೆ ಬೆಂಬಲ ಸೂಚಿಸುತ್ತವೆ. ಟಿಪ್ಪು ಜಯಂತಿಯಲ್ಲಿ ಹುತಾತ್ಮರದ ಕುಟ್ಟಪ್ಪನವರಿಗೆ ಇನ್ನೂ ನ್ಯಾಯ ದೊರಕಿಲ್ಲ. ಇದೀಗ ಸಾವಿರ ಸಾವಿರ ಕುಟ್ಟಪ್ಪನವರು ಹಿಂದೂ ಕಾರ್ಯಕರ್ತರ ರೂಪದಲ್ಲಿ ಹುಟ್ಟುತ್ತಿದ್ದಾರೆ. ಹಿಂದೂ ಸಮಾಜ ಈಗ ಜಾಗೃತವಾಗಿದ್ದು, ಹಿಂದೂತ್ವವನ್ನು ಮುಟ್ಟದವರಿಗೆ ಇನ್ನು ಉಳಿಗಾಲವಿಲ್ಲ ಶ್ರೀ ರಾಮನ ಆದರ್ಶದೊಂದಿಗೆ ನಾವೆಲ್ಲ ಒಟ್ಟಾಗಿ ಹಿಂದೂ ಸಮಾಜ ಕಟ್ಟುವ ಕೆಲಸವಾಗಬೇಕು ಎಂದು ನರಸಿಂಹ ಶೆಟ್ಟಿ ಮಾಣಿ ನುಡಿದರು.
ಸಮಾರಂಭಕ್ಕೆ ಮುನ್ನ ಶ್ರೀ ರಾಮನ ಭವ್ಯ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಶೋಭಾಯಾತ್ರೆಗೆ ಮಾದಾಪುರ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭ ಶಾಸಕ ಎಂ.ಪಿ ಅಪ್ಪಚ್ಚು , ಮಾದಾಪುರ ಗ್ರಾಮ ಪಂಚಾಯತಿ ಅಧ್ಯಕ್ಷೆ ನಿರೂಪ ಹರೀಶ್, ರಾಜ್ಯ ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ರವಿ ಕುಶಾಲಪ್ಪ, ಗ್ರಾ.ಪಂ.ಮಾಜಿ ಅಧ್ಯಕ್ಷ ಉಮೇಶ್, ಹಿಂದೂ ಜಾಗರಣ ವೇದಿಕೆ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಸುನಿಲ್ , ಗ್ರಾ‌.ಪಂ. ಸದಸ್ಯ ಸುರೇಶ್(ಬಾವೆ), ಡಾಲಿ ಹಾಗೂ ಸಂಘಟನೆಯ ಪ್ರಮುಖರು ಭಾಗವಹಿಸಿದ್ದರು.
ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಭಕ್ತಾದಿಗಳು ಹಾಗೂ ಸಂಘಟನೆ ಕಾರ್ಯಕರ್ತರು ಶೋಭಾಯಾತ್ರೆಯೊಂದಿಗೆ ಡಿ.ಜೆ ಹಾಡಿಗೆ ಹೆಜ್ಜೆಹಾಕಿ, ಸಂಭ್ರಮಿಸಿದರು. ಆಶ್ರಯ ಕಾಲೋನಿ, ಇಗ್ಗೋಡ್ಲು, ಎಫ್.ಎಂ.ಸಿ ಬಡಾವಣೆ ಹಾಗೂ ಮಾದಾಪುರ ನಗರದ ಮುಖ್ಯ ಬೀದಿಯಲ್ಲಿ ಮೆರವಣಿಗೆ ಸಾಗಿತು. ಮಾದಾಪುರ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಶೋಭಾಯಾತ್ರೆ ಕೊನೆಗೊಳಿಸಲಾಯಿತು.
ಶೋಭಾಯಾತ್ರೆ ಮಾರ್ಗದುದ್ದಕ್ಕೂ ಕೇಸರಿ ಧ್ವಜಗಳು, ಬಂಟಿಂಗ್ಸ್‌ಗಳು ರಾರಾಜಿಸಿದವು, ಕೇಸರಿ ಶಾಲು, ಧ್ವಜ ಹಿಡಿದ ಕಾರ್ಯಕರ್ತರ ಪಡೆ ಮಾದಾಪುರವನ್ನು ಕೇಸರಿಮಯಗೊಳಿಸಿದ್ದರು. ಸಿಡಿಮದ್ದುಗಳ ಸದ್ದು, ಡಿ‌ಜೆ ವಾದ್ಯ ಶೋಭಾಯಾತ್ರೆಗೆ ವಿಶೇಷ ಮೆರಗು ನೀಡಿತ್ತು, ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಹಾಗೂ ರಸ್ತೆಯುದ್ದಕ್ಕೂ ಪಾನಕ, ನೀರು, ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!