ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿರುವ ಫಲಿತಾಂಶದ ಬಳಿಕ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಆತ್ಮವಿಶ್ವಾಸಭರಿತ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ. ಎರಡು ಪ್ರಮುಖ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ದಾಖಲಿಸಿದ ಅವರು, ಜನರು ಬದಲಾವಣೆಗೆ ಮತ ಹಾಕಿದ್ದಾರೆ ಎಂದು ಹೇಳಿದ್ದಾರೆ.
ಗೆಲುವಿನ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸುವೇಂದು ಅಧಿಕಾರಿ, ನಂದಿಗ್ರಾಮ ಮತ್ತು ಭವಾನಿಪುರ ಕ್ಷೇತ್ರಗಳಲ್ಲಿ ಜನರು ದೊಡ್ಡ ಮಟ್ಟದ ಬೆಂಬಲ ನೀಡಿದ್ದಾರೆ ಎಂದು ಹೇಳಿದರು. ಅಭಿವೃದ್ಧಿ, ಆಡಳಿತ ಸುಧಾರಣೆ ಮತ್ತು ಜನರ ನಿರೀಕ್ಷೆಗಳನ್ನು ಈಡೇರಿಸುವ ರಾಜಕಾರಣಕ್ಕೆ ಮತದಾರರು ಬೆಂಬಲ ಸೂಚಿಸಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ನಂದಿಗ್ರಾಮದ ಹಿಂದು ಜನ ನನ್ನನ್ನ ಗೆಲ್ಲಿಸಿದ್ದಾರೆ. ಇಲ್ಲಿನ ಇಡೀ ಮುಸ್ಲಿಂ ಸಮುದಾಯದ ಮತಗಳು ಟಿಎಂಸಿಗೆ ಹೋಗಿವೆ. ಮುಂದಿನ ದಿನಗಳಲ್ಲಿ ನಾನು ನಂದಿ ಗ್ರಾಮದ ಹಿಂದುಗಳಿಗಾಗಿ ಕೆಲಸ ಮಾಡುವುದೇ ತಮ್ಮ ಆದ್ಯತೆ ಎಂದರು.
ಇದನ್ನೂ ಓದಿ:
ಇದೇ ವೇಳೆ ಆಡಳಿತಾರೂಢ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಕುಟುಂಬ ಆಧಾರಿತ ರಾಜಕಾರಣಕ್ಕೆ ಜನರು ಸ್ಪಷ್ಟ ಉತ್ತರ ನೀಡಿದ್ದಾರೆ ಎಂದು ಟೀಕಿಸಿದರು. ಕೇಂದ್ರ ನಾಯಕತ್ವ ನೀಡಿರುವ ಭರವಸೆಗಳನ್ನು ನೆಲಮಟ್ಟದಲ್ಲಿ ಜಾರಿಗೊಳಿಸುವ ಮೂಲಕ ಜನರ ವಿಶ್ವಾಸ ಉಳಿಸಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಇನ್ನೊಂದೆಡೆ, ಭವಾನಿಪುರದಂತಹ ಪ್ರತಿಷ್ಠಿತ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸೋಲು ಎದುರಾಗಿರುವುದು ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. 15 ಸಾವಿರಕ್ಕೂ ಅಧಿಕ ಮತಗಳ ಅಂತರದ ಗೆಲುವಿನೊಂದಿಗೆ ಸುವೇಂದು ಅಧಿಕಾರಿ ಇದೀಗ ಬಂಗಾಳ ರಾಜಕೀಯದ ಕೇಂದ್ರಬಿಂದುವಾಗಿ ಹೊರಹೊಮ್ಮಿದ್ದಾರೆ.



