ಹೊಸದಿಗಂತ ಡಿಜಿಟಲ್ ಡೆಸ್ಕ್
ಈ ಮೇಲಿನ ಅಂದಾಜನ್ನು ಪ್ರಕಟಿಸಿರೋದು ಜಾಗತಿಕ ಖಾಸಗಿ ಹಣಕಾಸು ಸಂಸ್ಥೆಗಳಲ್ಲೊಂದಾದ ಮಾರ್ಗನ್ ಸ್ಟಾನ್ಲಿ. ಈ ಮೂಲಕ, ಕೋವಿಡ್ ನಂತರ ಭಾರತದ ಮಾರುಕಟ್ಟೆ ವೇಗವಾಗಿ ಚೇತರಿಸಿಕೊಳ್ಳುವ ಟ್ರೆಂಡ್ ಬಗ್ಗೆ ತನಗೇನೂ ಅನುಮಾನ ಉಳಿದಿಲ್ಲ ಎಂಬುದನ್ನದು ಜಾಹೀರು ಮಾಡಿದೆ.
ಮಾರ್ಗನ್ ಸ್ಟಾನ್ಲಿಯ ಅಭಿಪ್ರಾಯ ಸಾರ ಒಟ್ಟಾರೆ ಹೀಗಿದೆ- ‘ಕೋವಿಡ್ ಆಘಾತಕ್ಕೆ ಒಳಗಾಗಿದ್ದ ಜನರಲ್ಲಿ ಈಗ ಕೊಳ್ಳುವ ಬಯಕೆ ಉದ್ಭವಿಸಿದೆ. ಭಾರತದಲ್ಲಿ ಮನೆಖರ್ಚಿಗೆ ಅಂತ ಉಳಿಸಿರುವ ಹಣದ ಬ್ಯಾಲೆನ್ಸ್ ಶೀಟ್ ಚೆನ್ನಾಗಿಯೇ ಇದೆ. ಈ ಜನರೀಗ ಮನೆ, ಬೈಕು ಹಾಗೂ ಮತ್ತಿತರ ಉಪಭೋಗದ ವಸ್ತುಗಳನ್ನು ಖರೀದಿಸುವುದಕ್ಕೆ ಮುಂದಾಗಲಿದ್ದಾರೆ. ಏಕೆಂದರೆ ಮಾರುಕಟ್ಟೆ ಸಹ ಕೋವಿಡ್ ಭಯದಿಂದ ಹೊರಬಂದು ಸಂಪೂರ್ಣ ತೆರೆದುಕೊಂಡಿದೆ. ಹೀಗಾಗಿ ಈ ವಿತ್ತವರ್ಷದ ಎರಡನೇ ತ್ರೈಮಾಸಿಕದಲ್ಲಿ ಅರ್ಥವ್ಯವಸ್ಥೆಯನ್ನು ದೊಡ್ಡಮಟ್ಟದಲ್ಲಿ ಉತ್ತೇಜಿಸುವಂತೆ ಜನರು ಖರ್ಚು ಮಾಡಲಿದ್ದಾರೆ.’
ಮಾರ್ಚ್ 2022ಕ್ಕೆ ಹೋಲಿಸಿದರೆ ತೈಲದ ಬೆಲೆಯೂ ಇಳಿದಿರುವುದು ಇದಕ್ಕೆ ಪೂರಕವಾಗಲಿದೆ. ಏಷ್ಯದ ದೊಡ್ಡ ಅರ್ಥವ್ಯವಸ್ಥೆಗಳ ಪೈಕಿ ಉತ್ತಮ ಬೆಳವಣಿಗೆ ದರ ದಾಖಲಿಸಲಿರುವ ದೇಶ ಭಾರತವೇ ಆಗಿರಲಿದ್ದು, ಮುಂಬರುವ ತಿಂಗಳುಗಳಲ್ಲಿ ಶೇ. 7ರ ಜಿಡಿಪಿ ದರದಲ್ಲಿ ಭಾರತ ಬೆಳೆಯಲಿದೆ. ಹೀಗಾಗಿ ಏಷ್ಯದ ಆರ್ಥಿಕ ಬೆಳವಣಿಗೆಯಲ್ಲಿ ಶೇ. 28 ಹಾಗೂ ಜಾಗತಿಕ ಬೆಳವಣಿಗೆಯಲ್ಲಿ ಶೇ. 21ರ ಯೋಗದಾನವನ್ನು ಭಾರತವೇ ನೀಡಲಿದೆ ಎಂದು ಮಾರ್ಗನ್ ಸ್ಟಾನ್ಲಿ ವರದಿ ಹೇಳುತ್ತಿದೆ.