ಹೊಸದಿಗಂತ ಡಿಜಿಟಲ್ ಡೆಸ್ಕ್:
ಇದ್ಕೇ ಹೇಳೋದು ಹೆಣ್ಣುಮಕ್ಕಳ ಜೀವನದಲ್ಲಿ ಗಂಡ ಅನ್ನೋ ವ್ಯಕ್ತಿ ಎಷ್ಟು ಮುಖ್ಯ ಅಂತ! ಇಲ್ಲೊಬ್ಬ ಪತಿರಾಯ 10 ಕೋಟಿ ರೂಪಾಯಿ ಆಸೆಗೆ ತನ್ನ ಪತ್ನಿಯನ್ನೇ ಕೊಂದು ಸಹಜ ಸಾವು ಎಂದು ಬಿಂಬಿಸಿ ಸಿಕ್ಕಿಬಿದ್ದಿದ್ದಾನೆ.
ಮಂಡ್ಯದ ಕಾಲೇಜಿನ ಪ್ರೊಫೆಸರ್ ಸೋಮಶೇಖರ್ ಎಂಬಾತ ಪತ್ನಿ ಶೃತಿ ಮಲಗಿದ್ದಾಗ ದಿಂಬು ಹಾಗೂ ಬೆಡ್‌ಶೀಟ್‌ನಿಂದ ಉಸಿರುಗಟ್ಟಿಸಿ ಕೊಂದಿದ್ದಾನೆ.
ಶೃತಿ ತಂದೆ ಕೆಲ ವರ್ಷಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು, ಆಕೆಯ ತಂಗಿ ಕೂಡ ಕೆಲ ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದಳು. ತಂದೆಯ ಆಸ್ತಿ ಎಲ್ಲವೂ ಸೇರಿ ಶೃತಿಗೆ ೧೦ ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಸಿಕ್ಕಿತ್ತು.
ಮೈಸೂರಿನಲ್ಲಿ ಶೃತಿ ಹೆಸರಿನಲ್ಲಿ ಕಟ್ಟಡ, ಮನೆ, ಕಮರ್ಷಿಯಲ್ ಬಿಲ್ಡಿಂಗ್ ಇತ್ತು. ಈ ಜಾಗವನ್ನು ಮಾರಿ ಬೇರೆ ಕಡೆ ಆಸ್ತಿ ಖರೀದಿ ಮಾಡೋದ ಎಂದು ಸೋಮಶೇಖರ್ ಒತ್ತಾಯ ಮಾಡಿದ್ದ. ಶೃತಿಗೆ ತಂದೆ ಮಾಡಿದ ಆಸ್ತಿಯನ್ನು ಮಾರಲು ಇಷ್ಟ ಇರಲಿಲ್ಲ. ಇದೇ ವಿಷಯದಲ್ಲಿ ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಲೇ ಇತ್ತು.
ಆಕೆಯನ್ನು ಉಸಿರುಗಟ್ಟಿಸಿ ಕೊಂದು, ಸಂಬಂಧಿಕರಿಗೆ ಕರೆ ಮಾಡಿ ಪಲ್ಸ್ ರೇಟ್ ಕಡಿಮೆಯಾಗಿ ಶೃತಿ ಮೃತಪಟ್ಟಿದ್ದಾಳೆ, ನನಗೆ ಕೈಕಾಲೇ ಆಡುತ್ತಿಲ್ಲ ಎಂದು ಅಳುತ್ತಾ ಡ್ರಾಮಾ ಮಾಡಿದ್ದ. ಶೃತಿ ಚಿಕ್ಕಪ್ಪ ಈತನ ನಾಟಕದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಪೊಲೀಸರಿಗೆ ದೂರು ನೀಡಿದ್ದರು.
ಮರಣೋತ್ತರ ಪರೀಕ್ಷೆಯಲ್ಲಿ ನಾಟಕ ಬಯಲಿಗೆ ಬಂದಿದ್ದು, ಪೊಲೀಸರು ಸೋಮಶೇಖರ್‌ನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆಸ್ತಿಗಾಗಿ ಕೊಲೆ ಮಾಡಿದ್ದೇನೆ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ.